ADVERTISEMENT

ಹರಿಹರ | ಬಿಷಪ್‌ಗೆ ಘೇರಾವ್: ಭಕ್ತರ ನಡುವೆ ನೂಕಾಟ

ಹರಿಹರ: ಚರ್ಚ್ ಲೆಕ್ಕಪತ್ರ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 6:14 IST
Last Updated 23 ಫೆಬ್ರುವರಿ 2025, 6:14 IST
ಹರಿಹರದ ಆರೋಗ್ಯ ಮಾತೆ ಚರ್ಚ್‌ಗೆ ಧರ್ಮಾಧ್ಯಕ್ಷ ಬಿಷಪ್ ಫ್ರಾನ್ಸಿಸ್ ಸೆರಾವೊ ಅವರು ಶನಿವಾರ ಆಗಮಿಸಿದಾಗ ತಳ್ಳಾಟ, ನೂಕಾಟ ಉಂಟಾಯಿತು
ಹರಿಹರದ ಆರೋಗ್ಯ ಮಾತೆ ಚರ್ಚ್‌ಗೆ ಧರ್ಮಾಧ್ಯಕ್ಷ ಬಿಷಪ್ ಫ್ರಾನ್ಸಿಸ್ ಸೆರಾವೊ ಅವರು ಶನಿವಾರ ಆಗಮಿಸಿದಾಗ ತಳ್ಳಾಟ, ನೂಕಾಟ ಉಂಟಾಯಿತು   

ಹರಿಹರ: ಲೆಕ್ಕಪತ್ರದ ಮಾಹಿತಿ ನೀಡಲು ಆಗ್ರಹಿಸಿ ಶಿವಮೊಗ್ಗದ ಕ್ರೈಸ್ತ ರೋಮನ್ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಬಿಷಪ್ ಫ್ರಾನ್ಸಿಸ್ ಸೆರಾವೊ ಅವರಿಗೆ ಘೆರಾವ್ ಹಾಕುವ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ಉಂಟಾದ ತಳ್ಳಾಟ, ನೂಕಾಟದಲ್ಲಿ ಹಲವರು ಗಾಯಗೊಂಡ ಘಟನೆ ಇಲ್ಲಿನ ಬೆಸಿಲಿಕಾ ಆರೋಗ್ಯ ಮಾತೆ ಚರ್ಚ್‌ನಲ್ಲಿ ಶನಿವಾರ ನಡೆದಿದೆ.

ಚರ್ಚ್ ಉಸ್ತುವಾರಿ ಸೆರಾವೊ ಅವರಿಗೆ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಹಲವಾರು ಬಾರಿ ಮನವಿ ನೀಡಿದ್ದರೂ ಪರಿಹಾರ ಸಿಗಲಿಲ್ಲ ಎಂದು ಆರೋಪಿಸಿ, ಪಾಲಾನಾ ಸಮಿತಿ ಸದಸ್ಯರು ಶನಿವಾರ ಅವರಿಗೆ ಘೆರಾವ್ ಹಾಕಿದರು.

ಸ್ಥಳದಲ್ಲಿದ್ದ ಇನ್ನೊಂದು ಗುಂಪಿನ ಸದಸ್ಯರು ಪ್ರತಿಭಟನೆಯನ್ನು ತಡೆಯಲು ಮುಂದಾದ ವೇಳೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿದರು. ಈ ವೇಳೆ ಆರೋಗ್ಯ ಸ್ವಾಮಿ, ಮುನಿದಾಸ ಸ್ವಾಮಿ, ಜರ್ಸಿ ಕುಮಾರ್, ಕುಮಾರ್ ಅವರು ಗಾಯಗೊಂಡಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

‘ಆರೋಪಗಳ ಬಗ್ಗೆ ಚರ್ಚಿಸಲು ಮೂರು ದಿನಗಳ ಪಾಲನಾ ಸಮಿತಿ ಸಭೆ ಕರೆಯಲಾಗಿತ್ತು. ಸುದೀರ್ಘವಾಗಿ ಚರ್ಚಿಸಲು ಅಲ್ಲಿ ಅವಕಾಶವಿತ್ತು. ಆದರೆ ಕೆಲವರು ಏಕಾಏಕಿ ಈ ರೀತಿ ವರ್ತಿಸಿದ್ದು ಸರಿಯಲ್ಲ. ಈ ವರ್ತನೆ ನೋಡಿದರೆ ಸಮಸ್ಯೆ ಬಗೆಹರಿಯುವುದು ಅವರಿಗೆ ಇಷ್ಟವಿದ್ದಂತಿಲ್ಲ ಎನಿಸುತ್ತದೆ. ಆದರೂ ಭಕ್ತರ ಮನಸ್ಸಿನಲ್ಲಿರುವ ಗೊಂದಲಗಳಿಗೆ ಶೀಘ್ರ ಉತ್ತರ ಸಿಗಲಿದೆ’ ಎಂದು ಬಿಷಪ್ ಸೆರಾವೊ ಅವರು ಸುದ್ದಿಗಾರರಿಗೆ ತಿಳಿಸಿದರು.

ಚರ್ಚ್ ಫಾದರ್ ಕೆ.ಎ.ಜಾರ್ಜ್ ಮಾತನಾಡಿ, ‘ಪಾಲನಾ ಸಮಿತಿಯ ಸದಸ್ಯರು ನನ್ನ ಮೇಲೆ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದವು. ಚರ್ಚ್ ನಿರ್ವಹಣೆ, ಆರ್ಥಿಕ ವಿಚಾರಗಳು, ಪೂಜೆ ಸೇರಿದಂತೆ ಹಲವ ವಿಚಾರಗಳ ನಿರ್ವಹಣೆಗೆ ಸಮಿತಿಗಳನ್ನು ರಚಿಸಲಾಗಿದೆ. ಸಮಸ್ಯೆಗಳಿದ್ದರೆ ಆಯಾ ಸಮಿತಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಕೆಲವರು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದರು.

ಪಾಲನಾ ಸಮಿತಿಯ ಲಾರೆನ್ಸ್, ಆಗಷ್ಟಿನ್, ಜೋಸೆಫ್ ಕುಮಾರ, ಆರ್.ಎನ್.ಜಾನ್, ಫ್ರಾನ್ಸಿಸ್ ಜೆ., ರಾಜಣ್ಣ, ಅಲ್ಬರ್ಟ್, ಅಂಥೋನಿ ಕ್ರೂಷ್, ವಿನೋದ್ ರಾಜನ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.