ADVERTISEMENT

ಹೊನ್ನಾಳಿ ಕ್ಷೇತ್ರ ಸ್ಥಿತಿ-ಗತಿ| ಬಿಜೆಪಿಯಲ್ಲಿ 3 ಹೆಸರು, ಕಾಂಗ್ರೆಸಲ್ಲಿ 5 ಅರ್ಜಿ

ರೇಣುಕಾರ್ಯಗೆ ಭಿನ್ನಾಭಿಪ್ರಾಯದ ಕಂಟಕ, ಕಾಂಗ್ರೆಸ್‌ಗೆ ಇಬ್ಬರಲೊಬ್ಬರ ಆಯ್ಕೆಯ ಸಂಕಟ

ಬಾಲಕೃಷ್ಣ ಪಿ.ಎಚ್‌
Published 19 ಜನವರಿ 2023, 14:15 IST
Last Updated 19 ಜನವರಿ 2023, 14:15 IST
   

ದಾವಣಗೆರೆ: ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳನ್ನು ಒಳಗೊಂಡಿರುವ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಎಂ.ಪಿ. ರೇಣುಕಾಚಾರ್ಯರ ಹೆಸರು ಮುನ್ನೆಲೆಯಲ್ಲಿದ್ದರೂ ಇನ್ನೆರಡು ಹೆಸರಗಳು ತಳುಕು ಹಾಕುಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇತ್ತ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಕೇಳಿ ಐವರು ಅರ್ಜಿ ಸಲ್ಲಿಸಿದ್ದರೂ ಹಾಲಿ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕರ ನಡುವೆಯೇ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ.

2004ರಿಂದ ಇಲ್ಲಿವರೆಗೆ ನಾಲ್ಕು ಚುನಾವಣೆಗಳಲ್ಲಿ ಮೂರು ಬಾರಿ ಶಾಸಕರಾಗಿರುವ, ಒಂದು ಬಾರಿ ಸಚಿವರಾಗಿಯೂ ಕೆಲಸ ಮಾಡಿರುವ ರೇಣುಕಾಚಾರ್ಯ ಅವರ ಹೆಸರೇ ಈ ಬಾರಿಯೂ ಪ್ರಬಲವಾಗಿದೆ.

ಶಾಸಕ ರೇಣುಕಾಚಾರ್ಯ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಡುವೆ ಉಂಟಾದ ಭಿನ್ನಾಭಿಪ್ರಾಯವು ಈಗ ಇಬ್ಬರನ್ನು ಎರಡು ದಿಕ್ಕುಗಳಲ್ಲಿ ನಿಲ್ಲಿಸಿದೆ. ಮಹೇಶ್‌ ಈಗ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇದರ ಜತೆಗೆ ಕೆ.ಜಿ. ರುದ್ರೇಶ್‌ ಅವರ ಹೆಸರೂ ಕೇಳಿ ಬರುತ್ತಿದೆ. ಹೊನ್ನಾಳಿಯವರಾದರೂ ಶಿಕಾರಿಪುರದಲ್ಲಿ ಹೆಚ್ಚು ಓಡಾಡಿಕೊಂಡಿದ್ದ ರುದ್ರೇಶ್‌ ಅವರು ಈ ಬಾರಿ ಹೊನ್ನಾಳಿಯಲ್ಲಿ ನಿಲ್ಲಬೇಕು ಎಂಬುದು ಅವರ ಅಭಿಮಾನಿಗಳು ಒತ್ತಾಯಿಸತೊಡಗಿದ್ದಾರೆ.

ADVERTISEMENT

1999ರಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ತನ್ನ ಛಾಪು ಮೂಡಿಸಿದ್ದ ಡಿ.ಜಿ. ಶಾಂತನಗೌಡ ಬಳಿಕ ಕಾಂಗ್ರೆಸ್‌ ಸೇರಿದ್ದರು. ಆನಂತರ ಸತತವಾಗಿ ರೇಣುಕಾಚಾರ್ಯರ ವಿರುದ್ಧ ಸ್ಪರ್ಧಿಸುತ್ತಾ ಬಂದರು. 2013ರಲ್ಲಿ ಎರಡನೇ ಬಾರಿ ಶಾಸಕರಾದರು. ಆ ಬಾರಿ ರೇಣುಕಾಚಾರ್ಯ ಕೆಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದರು. 75ರ ಹರೆಯದ ಶಾಂತನಗೌಡರು ಈಗ ಮತ್ತೆ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಎಚ್‌.ಬಿ. ಮಂಜಪ್ಪ ಅವರು ಹಿಂದಿನ ಎರಡು ಚುನಾವಣೆಗಳಲ್ಲಿ ಟಿಕೆಟ್ ಬಯಸಿದ್ದರು. 2018ರಲ್ಲಿ ಭಾರಿ ಪ್ರಯತ್ನ ಮಾಡಿದ್ದರು. ಈ ಬಾರಿ ಹೇಗಾದರೂ ಟಿಕೆಟ್‌ ಪಡೆಯಲೇಬೇಕು ಎಂಬ ಪ್ರಯತ್ನದಲ್ಲಿದ್ದಾರೆ.

ಇವರಲ್ಲದೇ ಡಿ.ಜಿ. ವಿಶ್ವನಾಥ, ಸಿದ್ಧಪ್ಪ ಬಿ.ಎಸ್‌., ಉಮಾಪತಿ ಎಚ್‌.ವಿ. ಕೂಡಾ ಟಿಕೆಟ್‌ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿದ್ದಾರೆ.

ಡಿ.ಜಿ. ಶಾಂತನಗೌಡರ ಅಣ್ಣ ಡಿ.ಜಿ. ಬಸವನಗೌಡ ಅವರು ಜನತಾದಳದಲ್ಲಿದ್ದಾಗ ಇಲ್ಲಿ ಜನತಾದಳ ಗೆದ್ದಿತ್ತು. ಕೊನೆಗೆ ಅವರು ಜನತಾದಳ ಬಿಟ್ಟು ಪಕ್ಷೇತರನಾಗಿಯೂ ಸ್ಪರ್ಧಿಸಿದ್ದರು. ಅಲ್ಲಿಂದ ಜನತಾದಳ ಇಲ್ಲಿ ನೆಲೆ ಕಳೆದುಕೊಳ್ಳುತ್ತಾ ಬಂತು. ಈಗ ಬಿಜೆಪಿಯ ಟಿಕೆಟ್‌ ಆಕಾಂಕ್ಷಿ ಆಗಿರುವ ಎಂ.ಆರ್.ಮಹೇಶ್‌ ಅವರೂ ಜೆಡಿಎಸ್‌ನಿಂದ 2013ರಲ್ಲಿ ಇಲ್ಲಿ ಕಣಕ್ಕಿಳಿದಿದ್ದರು. ಈ ಬಾರಿ ಬಿ.ಜಿ. ಶಿವಮೂರ್ತಿಗೌಡ ಅವರು ಜೆಡಿಎಸ್‌ನಿಂದ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.

ಇಂದೂಧರ ಕೂಲಂಬಿ ಅವರ ಹೆಸರು ಎಎಪಿಯಿಂದ ಕೇಳಿ ಬರುತ್ತಿದೆ. ಉಳಿದ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ಇಳಿಸುವುದು ಇದ್ದೇ ಇದೆ.

ಹೊನ್ನಾಳಿ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿ ಪರಿವರ್ತನೆ ಗೊಂಡಿದೆ. ಕಾಂಗ್ರೆಸ್‌ನಿಂದ ಯಾರನ್ನೂ ಕಣಕ್ಕಿಳಿಸಿದರೂ ನಮ್ಮ ಪಕ್ಷವೇ ಗೆಲ್ಲಲಿದೆ.

- ಎಸ್‌.ಎಂ. ವೀರೇಶ್‌ ಹನಗವಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಯಾರಿಗೆ ಟಿಕೆಟ್‌ ನೀಡಿದರೂ ಹೊನ್ನಾಳಿಯಲ್ಲಿ ಕಾಂಗ್ರೆಸ್‌ ಗೆಲ್ಲುವುದು ಖಚಿತ. ಗೆಲ್ಲುವ ಅಭ್ಯರ್ಥಿಯನ್ನು ಹೈಕಮಾಂಡ್‌ ಆಯ್ಕೆ ಮಾಡಲಿದೆ.

- ದಿನೇಶ್‌ ಕೆ. ಶೆಟ್ಟಿ, ಕಾಂಗ್ರೆಸ್‌ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ

ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಮತದಾರರ ವಿವರ

ಒಟ್ಟು ಮತದಾರರು- 1,93,763

ಪುರುಷ ಮತದಾರರು- 97,410

ಮಹಿಳಾ ಮತದಾರರು- 96,349

ಇತರ ಮತದಾರರು- 4

ಮತಗಟ್ಟೆಗಳು- 245

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.