ADVERTISEMENT

ದಾವಣಗೆರೆ: ಪ್ರತಿಧ್ವನಿಸಿದ ಹೊನ್ನಾಳಿ ಕೊಳವೆಬಾವಿ ರಾಜಕಾರಣ

ಅಧಿಕಾರಿಗಳ ಮೇಲೆ ಹರಿಹಾಯ್ದ ಶಾಂತನಗೌಡ * ಜನಸ್ಪಂದನ ದುರ್ಬಳಕೆ ಮಾಡಿಕೊಂಡರೆ ಸಹಿಸಲ್ಲ ಎಂದ ಡಿಸಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 15:39 IST
Last Updated 8 ಏಪ್ರಿಲ್ 2021, 15:39 IST
ದಾವಣಗೆರೆಯಲ್ಲಿ ಗುರುವಾರ ನಡೆದ ಜನಸ್ಪಂದನ ಸಭೆಗೆ ಬಂದ ಹೊನ್ನಾಳಿಯ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಅವರು ಗಂಗಾ ಕಲ್ಯಾಣ ಯೋಜನೆಯಡಿ ತಮ್ಮ ಅವಧಿಯಲ್ಲಿ ಆಯ್ಕೆಮಾಡಿದ್ದ ಫಲಾನುಭವಿಗಳಿಗೆ ಕೊಳವೆಬಾವಿ ಕೊರೆಸಿಕೊಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.
ದಾವಣಗೆರೆಯಲ್ಲಿ ಗುರುವಾರ ನಡೆದ ಜನಸ್ಪಂದನ ಸಭೆಗೆ ಬಂದ ಹೊನ್ನಾಳಿಯ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಅವರು ಗಂಗಾ ಕಲ್ಯಾಣ ಯೋಜನೆಯಡಿ ತಮ್ಮ ಅವಧಿಯಲ್ಲಿ ಆಯ್ಕೆಮಾಡಿದ್ದ ಫಲಾನುಭವಿಗಳಿಗೆ ಕೊಳವೆಬಾವಿ ಕೊರೆಸಿಕೊಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.   

ದಾವಣಗೆರೆ: ತಮ್ಮ ಅವಧಿಯಲ್ಲಿ ಫಲಾನುಭವಿಗಳಿಗೆ ಮಂಜೂರಾಗಿದ್ದ ಕೊಳವೆಬಾವಿಗಳನ್ನು ಕೊರೆಸಲು ಸಹಕಾರ ನೀಡುತ್ತಿಲ್ಲ ಎಂದು ಹೊನ್ನಾಳಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರು ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳ ಮೇಲೆ ರೇಗಾಡುವ ಮೂಲಕ ಹಾಲಿ ಶಾಸಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಹೊನ್ನಾಳಿಯ ‘ಕೊಳವೆಬಾವಿ ರಾಜಕಾರಣ’ ಜನಸ್ಪಂದನ ಸಭೆಯಲ್ಲಿ ಪ್ರತಿಧ್ವನಿಸಿದ್ದು ಒಂದು ಕಡೆಯಾದರೆ, ಸಾಮಾಜಿಕ ಕಾರ್ಯಕರ್ತರೊಬ್ಬರು, ‘ಅಧಿಕಾರಿಗಳು ನಮ್ಮನ್ನು ಸೌತಿಯಂತೆ (ಎರಡನೇ ಹೆಂಡತಿ) ಕಾಣುತ್ತಾರೆ. ಇನ್ನು ಮುಂದೆ ಬರುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ತಿರುಗೇಟು ಎಂಬತೆ ಸಭೆಯಲ್ಲಿ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಶೋಕಿಗಾಗಿ ಜನಸ್ಪದನ ಸಭೆ ನಡೆಸುತ್ತಿಲ್ಲ. ದೀನ–ದಲಿತರ, ಧ್ವನಿ ಇಲ್ಲದವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಭೆ ನಡೆಸುತ್ತಿದ್ದೇವೆ. ಅನ್ಯ ಉದ್ದೇಶಗಳಿಗೆ, ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಈ ಕಾರ್ಯಕ್ರಮವನ್ನು ವೇದಿಕೆಯನ್ನಾಗಿ ಬಳಸಿಕೊಂಡರೆ ಸಹಿಸುವುದಿಲ್ಲ’ ಎನ್ನುವ ಸಂದೇಶವನ್ನೂ ರವಾನಿಸಿದರು.

ADVERTISEMENT

ಫಲಾನುಭವಿಗಳ ಜೊತೆಗೆ ಸಭೆಗೆ ಬಂದಿದ್ದ ಶಾಂತನಗೌಡ, ‘ಹೊನ್ನಾಳಿ ತಾಲ್ಲೂಕಿನ ಹೊಸಜೋಗದ ಗಂಗೀಬಾಯಿ ಅವರು ಕುಡಿಯುವ ನೀರಿನ ಓವರ್‌ಹೆಡ್‌ ಟ‍್ಯಾಂಕ್‌ ನಿರ್ಮಿಸಲು ಜಾಗ ನೀಡಿದ್ದರು. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಿಕೊಡುವುದಾಗಿ ಅವರಿಗೆ ಭರವಸೆ ನೀಡಲಾಗಿತ್ತು. ಅವರನ್ನು ಫಲಾನುಭವಿಯನ್ನಾಗಿ ಆಯ್ಕೆ ಮಾಡಿ ಎರಡು ವರ್ಷ ಕಳೆದರೂ ಕೊಳವೆಬಾವಿ ಕೊರೆಸಿಕೊಟ್ಟಿಲ್ಲ. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರನ್ನು ಈ ಬಗ್ಗೆ ಕೇಳಿದರೆ ಹಾಲಿ ಶಾಸಕರು ಕೊರೆಸಲು ಅನುಮತಿ ನೀಡುತ್ತಿಲ್ಲ. ಕೊರೆಸಲು ಮುಂದಾದರೆ ವರ್ಗಾವಣೆ ಮಾಡಿಸುತ್ತಾರೆ ಎಂದು ಸಬೂಬು ಹೇಳುತ್ತಿದ್ದಾರೆ. ಇದೇ ರೀತಿ ನನ್ನ ಅವಧಿಯಲ್ಲಿನ ಏಳು ಫಲಾನುಭವಿಗಳಿಗೆ ಕೊಳವೆಬಾವಿ ಕೊರೆಸಿಕೊಡುತ್ತಿಲ್ಲ’ ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದರು.

ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಮೇಶ್‌ ಅವರು, ‘ಆ ಏಳು ಫಲಾನುಭವಿಗಳಿಗೆ ಮಂಜೂರು ಮಾಡಿರುವುದನ್ನು ರದ್ದುಗೊಳಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಂದ ಮೂರು ದಿನಗಳ ಹಿಂದೆ ಪತ್ರ ಬಂದಿದೆ’ ಎಂದು ಆದೇಶ ಪ್ರತಿಯನ್ನು ನೀಡಿದರು.

‘ರೈತ ಮೋಹನ್‌ ಅವರು ಎರಡು ಎಕರೆ 16 ಗುಂಟೆ ಜಮೀನಿನಲ್ಲಿ 1 ಎಕರೆ 20 ಗುಂಟೆಯನ್ನು ಮಾರಾಟ ಮಾಡಿದ್ದು, ಇದನ್ನು ನೋಂದಣಿ ಮಾಡಿಸುವಾಗ ಅಂಡರ್‌ ವ್ಯಾಲ್ಯೂವೇಷನ್‌ ಮಾಡಲಾಗಿದೆ ಎಂಬ ನೆಪವೊಡ್ಡಿ ನೋಂದಣಾಧಿಕಾರಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಮಾರಾಟ ಮಾಡಿರುವ ಜಮೀನಿನಲ್ಲಿ ಕೊಳವೆಬಾವಿ ಇಲ್ಲದಿದ್ದರೂ ನೀರಾವರಿ ಸೌಲಭ್ಯದಿಂದ ಅಲಸಂದೆ ಬೆಳೆಯಲಾಗಿದೆ ಎಂದು ಆಕ್ಷೇಪಿಸುತ್ತಿದ್ದಾರೆ’ ಎಂದು ಶಾಂತನಗೌಡ ಅವರು ನೋಂದಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ನೋಂದಣಾಧಿಕಾರಿ ಹಾಗೂ ಮಾಜಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ, ‘ಸ್ಥಳ ತನಿಖೆ ನಡೆಸಿ ವಾಸ್ತವ ಅಂಶ ಏನಿದೆ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಹಿರಿಯರಾದ ನೀವು ಅಧಿಕಾರಿಗಳ ಜೊತೆ ಸಭ್ಯತೆಯಿಂದ ವರ್ತಿಸಬೇಕು’ ಎಂದು ಶಾಂತನಗೌಡರಿಗೆ ತಿಳಿ ಹೇಳಿದರು.

‘ಎರಡು ವರ್ಷಗಳಿಂದ ಕೆಲಸ ಮಾಡಿಕೊಡದೇ ಇರುವುದರಿಂದ ಸಿಟ್ಟಿನಿಂದ ಕೆಲ ಪದಗಳ ಪ್ರಯೋಗ ಮಾಡಿದ್ದೆ. ನಾನು ಮಾತನಾಡಿರುವುದರಲ್ಲಿ ತಪ್ಪಿದ್ದರೆ ಕ್ಷಮೆ ಕೋರುತ್ತೇನೆ’ ಎಂದು ಹೇಳಿ, ಅಧಿಕಾರಿಗಳ ವಿರುದ್ಧ ಗೊಣಗುತ್ತಲ್ಲೇ ಸಭೆಯಿಂದ ಹೊರನಡೆದರು.

ಮೊಮ್ಮಗನ ಸಹಾಯದಿಂದ ಬಂದಿದ್ದ ವೃದ್ಧರೊಬ್ಬರು, ‘ನಾಲೆಗಾಗಿ ಭೂಸ್ವಾಧೀನ ಮಾಡಿ ಉಳಿದಿರುವ ನಮ್ಮ ಜಾಗವನ್ನು ಮರಳಿ ಆರ್‌ಟಿಸಿ ಮಾಡಿಕೊಡುವಂತೆ 1996ರಿಂದ ಮನವಿ ಮಾಡುತ್ತಿದ್ದೇವೆ. ತಂದೆ ತೀರಿ ಹೋದರು. ನಮ್ಮ ಮೊಮ್ಮಕ್ಕಳಿಗಾದರೂ ಈ ಜಾಗ ಸಿಗುವಂತೆ ಮಾಡಿ’ ಎಂದು ಕಣ್ಣೀರಿಟ್ಟರು. ‘ಎರಡು ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಿ ವೃದ್ಧರ ಮನೆಗೇ ತೆರಳಿ ಆರ್‌ಟಿಸಿ ಕೊಟ್ಟು ಬರಬೇಕು’ ಎಂದು ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

ಶುಶ್ರೂಷಕಿಯರನ್ನಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಯುವತಿಯರು ಮನವಿ ಮಾಡಿದರು. ಹೆಡ್‌ ಕಾನ್‌ಸ್ಟೆಬಲ್‌ ಆಗಿದ್ದ ಪತಿ ಅಪಘಾತದಿಂದಾಗಿ ಕೋಮಾ ಸ್ಥಿತಿಯಲ್ಲಿದ್ದು, ನೆರವು ನೀಡಬೇಕು ಎಂದು ಮಹಿಳೆಯೊಬ್ಬರು ಕೋರಿದರು.

ಎಂಸಿಸಿ ‘ಬಿ’ ಬ್ಲಾಕ್‌ನ ವೃದ್ಧರೊಬ್ಬರು ಆಶ್ರಯ ಮನೆ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಆಶ್ರಯ ಮನೆ ನಿರ್ಮಿಸಲು ಪಾಲಿಕೆಯಿಂದ ಜಾಗ ಗುರುತಿಸಲಾಗುತ್ತಿದೆ. ಮನೆ ನಿರ್ಮಿಸಿದ ಕೂಡಲೇ ಆದ್ಯತೆ ಮೇಲೆ ಮನೆ ಮಂಜೂರು ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಆನಂದ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

*****

'ಸಮಸ್ಯೆ ನಿವಾರಿಸುವ ದೇವರು ಎಂದುಕೊಂಡು ಜನ ಅಧಿಕಾರಿಗಳ ಬಳಿ ಬರುತ್ತಾರೆ. ಸಮಸ್ಯೆಗಳಿಗೆ ಸ್ಪಂದಿಸಿ, ಅಂತರಾತ್ಮಕ್ಕೆ ಸಾಕ್ಷಿಯಾಗಿ ಕೆಲಸ ಮಾಡುವ ಮೂಲಕ ನೊಂದವರ ಪಾಲಿಗೆ ದೇವರಾಗಬೇಕು'.

- ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.