
ಹೊನ್ನಾಳಿ: ಪಟ್ಟಣದ ದುರ್ಗಿಗುಡಿಯ ಉತ್ತರ ಭಾಗದ ಐದಾರು ಬೀದಿಗಳಲ್ಲಿ ಏಳೆಂಟು ವರ್ಷಗಳ ಹಿಂದೆ ನಿರ್ಮಿಸಿರುವ ಚರಂಡಿಗಳು ಅಲ್ಲಲ್ಲಿ ಒಡೆದು ಹೋಗಿದ್ದು, ಆ ಭಾಗದ ಕೊಳಚೆ ನೀರು ರಸ್ತೆಗಳ ಮೇಲೆ ಹರಿದು, ಖಾಲಿ ನಿವೇಶನಗಳಲ್ಲಿ ಸಂಗ್ರಹವಾಗುತ್ತಿದೆ. ಇದರಿಂದ ವಾತಾವರಣ ಗಬ್ಬೆದ್ದು ನಾರುತ್ತಿದೆ.
ಇಲ್ಲಿಯ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೇ ಅಲ್ಲಲ್ಲಿ ಮಲಿನ ನೀರು ನಿಂತು ಕಸ– ಕಡ್ಡಿ ತುಂಬಿದೆ. ಅಲ್ಲದೇ ಹಲವು ಕಡೆ ಚರಂಡಿಗಳು ಒಡೆದಿದ್ದರಿಂದ ಕೊಳಚೆ ನೀರು ಹರಿದು ರಸ್ತೆಯಲ್ಲೇ ಹರಿಯುತ್ತಿದೆ. ಹಾಗೆ ಪಕ್ಕದ ಖಾಲಿ ಜಾಗಗಳಲ್ಲಿ ನಿಂತು ಗಬ್ಬು ವಾಸನೆ ಹಬ್ಬುತ್ತಿದ್ದು ಹಾದಿಹೋಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಹಂದಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿವೆ.
ಚರಂಡಿ ನಿರ್ಮಿಸುವಾಗ ಗುತ್ತಿಗೆದಾರರು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮೇಲುಸ್ತುವಾರಿ ಸರಿಯಾಗಿ ಮಾಡಿಲ್ಲ. ಇದರಿಂದ ತಗ್ಗು– ದಿನ್ನೆಯಂತೆ ನಿರ್ಮಾಣವಾದ ಚರಂಡಿಯಲ್ಲಿ ನೀರು ವರ್ಷಗಟ್ಟಲೇ ಸಂಗ್ರಹವಾಗಿದ್ದು, ನಿವಾಸಿಗಳು ಮನೆಗಳ ಬಾಗಿಲು ಮುಚ್ಚಿಕೊಂಡೇ ಇರಬೇಕಾಗಿದೆ.
‘ಒಂದು ರಸ್ತೆ ಮುಕ್ತಾಯವಾಗುವ ಹಂತದಲ್ಲಿ ಅದಕ್ಕೆ ಕೂಡು (ಸಂಪರ್ಕ ರಸ್ತೆ) ರಸ್ತೆ ಇಲ್ಲದಿರುವುದರಿಂದ ಇಲ್ಲಿ ನಿರ್ಮಿಸಿರುವ ಚರಂಡಿಗಳಿಗೆ ಸಂಪರ್ಕ ಕಲ್ಪಿಸುವ ಮತ್ತೊಂದು ಚರಂಡಿಗೆ ಸ್ಥಳದ ಅವಕಾಶವಿಲ್ಲವಾಗಿದೆ. ಇದರಿಂದ ಸಮಸ್ಯೆ ಉಲ್ಬಣಿಸಿದೆ. ಈ ಸಮಸ್ಯೆಗೆ ಪರಿಹಾರ ಕೊಡಲು ಅಧಿಕಾರಿಗಳು ಮುಂದೆ ಬಾರದಿರುವುದು ನೋವಿನ ಸಂಗತಿ ಎನ್ನುತ್ತಾರೆ’ ಸ್ಥಳೀಯರಾದ ಹತ್ತೂರು ಈಶ್ವರಪ್ಪ ಹಾಗೂ ಸುರೇಶ್.
‘ಈ ಚರಂಡಿಗಳಲ್ಲಿ ನೀರು ಸರಾಗವಾಗಿ ಸಾಗಲು ಸಾಧ್ಯವೇ ಇಲ್ಲ. ಆದ್ದರಿಂದ ಈ ಚರಂಡಿಗಳನ್ನು ತೆರವುಗೊಳಿಸಿ ಹೊಸದಾಗಿ ಚರಂಡಿ ನಿರ್ಮಿಸಿ ನೀರು ಸಂಗ್ರಹವಾಗದಂತೆ ಕ್ರಮ ವಹಿಸಬೇಕು’ ಎಂದು ಗೃಹಿಣಿ ಎಸ್.ಆರ್. ಹೇಮಾ ಕೋರಿದರು.
‘ದುರ್ಗಿಗುಡಿ ಉತ್ತರ ಭಾಗದ ಚಾನೆಲ್ ಸಮೀಪದ ರಸ್ತೆಗಳಲ್ಲಿ ನಿರ್ಮಿಸಿರುವ ಈ ಚರಂಡಿಗಳನ್ನು ಇನ್ನಷ್ಟು ಎತ್ತರದಲ್ಲಿ ನಿರ್ಮಿಸಬೇಕಿತ್ತು. ನಂತರ ಚರಂಡಿ ನೀರು ಇನ್ನೊಂದು ಚರಂಡಿಗೆ ಸಾಗುವಂತೆ ಸಂಪರ್ಕ ಕಲ್ಪಿಸಿಕೊಡಬೇಕಿತ್ತು. ಹಾಗೆ ಮಾಡಿಲ್ಲ. ಈ ಬಗ್ಗೆ ಉಪ ವಿಭಾಗಾಧಿಕಾರಿ ಗಮನಕ್ಕೆ ತರಲಾಗುವುದು. ಹಣಕಾಸಿನ ಲಭ್ಯತೆ ನೋಡಿ ಹೊಸ ಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ತಾತ್ಕಾಲಿಕವಾಗಿ ಚರಂಡಿಗಳನ್ನು ಸದ್ಯಕ್ಕೆ ಸ್ವಚ್ಛಗೊಳಿಸಿ, ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೊನ್ನಾಳಿ ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.