
ಹೊನ್ನಾಳಿ ಪಟ್ಟಣದ ದೇವನಾಯಕನಹಳ್ಳಿಯ ಕನಕದಾಸ ವೃತ್ತದಲ್ಲಿ ಶುಕ್ರವಾರ ಎರಡು ಎತ್ತಿನ ಬಂಡಿಗಳಲ್ಲಿ ಚೀಲಗಳಲ್ಲಿ ಮರಳು ತುಂಬಿ ಸಾಗಾಣಿಕೆ ಮಾಡಲಾಯಿತು
ಹೊನ್ನಾಳಿ: ತಾಲ್ಲೂಕಿನಲ್ಲಿ ಹರಿದಿರುವ ತುಂಗಭದ್ರಾ ನದಿಯಿಂದ ಅಕ್ರಮವಾಗಿ ತೆಗೆದ ಮರಳನ್ನು ಎತ್ತಿನ ಬಂಡಿಗಳ ಮೂಲಕ ಸಾಗಣೆ ಮಾಡಲಾಗುತ್ತಿದೆ. ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಮರಳು ದಂಧೆಕೋರರು ಈ ಮಾರ್ಗ ಅನುಸರಿಸುತ್ತಿದ್ದಾರೆ.
6 ತಿಂಗಳ ಹಿಂದೆ ನದಿಯಿಂದ ತೆಪ್ಪದಲ್ಲಿ ಮರಳು ತೆಗೆದು ತೀರಕ್ಕೆ ಸಾಗಿಸುವಾಗ ಸಂಭವಿಸಿದ ದುರಂತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದರು. ಬಳಿಕವೂ ತಾಲ್ಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಬಿದ್ದಿಲ್ಲ. ನದಿಯಿಂದ ತೆಗೆದ ಮರಳನ್ನು ಚೀಲಗಳಿಗೆ ತುಂಬಿ ಅದನ್ನು ಎತ್ತಿನ ಬಂಡಿಯಲ್ಲಿ ಸಾಗಣೆ ಮಾಡಲಾಗುತ್ತದೆ.
‘ಮರಳು ಸಾಗಣೆ ಮಾಡುವ ಎತ್ತಿನ ಬಂಡಿಗಳ ಜಪ್ತಿ ಕಷ್ಟವಾಗುತ್ತಿದೆ. ಎತ್ತುಗಳನ್ನು ಹಿಡಿದು ಠಾಣೆಯಲ್ಲಿ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ರೈತರು ಪ್ರತಿಭಟಿಸುತ್ತಾರೆ. ಹೀಗಾಗಿ, ವಾಹನಗಳಲ್ಲಿ ಸಾಗಣೆಯಾಗುವ ಮರಳನ್ನು ಮಾತ್ರ ಜಪ್ತಿ ಮಾಡಿ ದಂಡ ಹಾಕುತ್ತಿದ್ದೇವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಲ್ಲೂಕಿನ ಬೇಲಿಮಲ್ಲೂರು, ಬಾಗೇವಾಡಿ, ಹಿರೇಬಾಸೂರು, ಚಿಕ್ಕಬಾಸೂರು, ಬೀರಗೊಂಡನಹಳ್ಳಿ, ಬುಳ್ಳಾಪುರ ಸೇರಿ 12 ಮರಳಿನ ಕ್ವಾರಿಗಳಿವೆ. ಹರಾಜು ಪ್ರಕ್ರಿಯೆ ಮುಗಿಯದ ಪರಿಣಾಮ ಇವು ಇನ್ನೂ ಕಾರ್ಯಾರಂಭವಾಗಿಲ್ಲ. ಆದರೂ, ನಿರ್ಮಾಣ ಹಂತದ ಮನೆ, ವಾಣಿಜ್ಯ ಕಟ್ಟಡಗಳ ಮುಂದೆ ಮರಳಿನ ರಾಶಿ ಕಂಡುಬರುತ್ತಿದೆ.
ಹಗಲಿನ ಹೊತ್ತು ಎತ್ತಿನ ಬಂಡಿಗಳಲ್ಲಿ ಮರಳು ಸಾಗಾಣಿಕೆಯಾಗುತ್ತಿದೆ. ರಾತ್ರಿ ವೇಳೆ ಟ್ರ್ಯಾಕ್ಟರ್, ಲಾರಿಗಳಲ್ಲಿ ಮರಳು ಸಾಗಿಸಲಾಗುತ್ತಿದೆ. ಆಗಾಗ ಅಕ್ರಮ ಮರಳು ಸಾಗಣೆ ಪ್ರಕರಣ ದಾಖಲಾಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.