ADVERTISEMENT

ನರೇಗಾ ಕೂಲಿ ಮೊತ್ತ ಹೆಚ್ಚಿಸಲಿ: ರುದ್ರಪ್ಪ ಮಾನಪ್ಪ ಲಂಬಾಣಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 6:31 IST
Last Updated 31 ಆಗಸ್ಟ್ 2025, 6:31 IST
ದಾವಣಗೆರೆಯಲ್ಲಿ ನಡೆದ ಸ್ಫೂರ್ತಿ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ದೀಪ ಬೆಳಗಿಸಿ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ನಡೆದ ಸ್ಫೂರ್ತಿ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ದೀಪ ಬೆಳಗಿಸಿ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕೂಲಿ ದಿನಗಳನ್ನು 105 ರಿಂದ 150ಕ್ಕೆ ಹೆಚ್ಚಿಸಬೇಕು. ಕೂಲಿ ಮೊತ್ತವನ್ನು ₹ 400 ಕ್ಕೆ ಹೆಚ್ಚಿಸಬೇಕು’ ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಒತ್ತಾಯಿಸಿದರು. 

ಪಿ.ಬಿ.ರಸ್ತೆಯ ಎ.ಕೆ.ಎಸ್‌ ಕನ್ವೇಷನ್ ಹಾಲ್‌ನಲ್ಲಿ ಶನಿವಾರ ನಡೆದ ‘ಸ್ಫೂರ್ತಿ’ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಸ್ಫೂರ್ತಿ ಸಂಸ್ಥೆಯು ಹಲವು ವರ್ಷಗಳಿಂದ ಶೋಷಿತರು, ದೀನದಲಿತರ ಪರ ಹೋರಾಟ ನಡೆಸಿದೆ. ಹಲವು ಸಮಸ್ಯೆಗಳ ವಿರುದ್ಧ ದನಿ ಎತ್ತಿದೆ. ಮನಮೋಹನ್‌ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 2005ರಲ್ಲಿ ನರೇಗಾ ಯೋಜನೆ ಜಾರಿಗೊಳಿಸಿದರು. ಆದರೆ, ಈಚೆಗೆ ಯೋಜನೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ದೂರಿದರು. 

ADVERTISEMENT

‘ಸಮಯ ಬಂದಾಗ ಹೋರಾಟದಿಂದ ಹಿಂದೆ ಸರಿಯಬಾರದು. ಬಡವರಿಗೆ ಅನ್ಯಾಯವಾದಾಗ ಸಂಸ್ಥೆ ದನಿ ಎತ್ತಲಿ. ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಭರವಸೆ ನೀಡಿದರು. 

‘ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಮೂಲಕ ಸರ್ವರ ಪ್ರಗತಿಗೆ ಶ್ರಮಿಸುತ್ತಿದೆ. 6ನೇ ಗ್ಯಾರಂಟಿಯಾಗಿ ಪಟ್ಟಾ ಖಾತೆ ವಿತರಿಸಲಾಗುವುದು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜತೆ ಚರ್ಚಿಸಿ ವಾಸಿಸುವವನೆ ಮನೆಯೊಡೆಯ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. 

‘ಸ್ಫೂರ್ತಿ ಸಂಸ್ಥೆಯು ಉತ್ತಮ ಕೆಲಸ ಮಾಡುತ್ತಿದೆ. ದುರ್ಬಲರ ಏಳಿಗೆಗಾಗಿ ನಿರಂತರವಾಗಿ ದುಡಿಯುತ್ತಿದೆ. ದಿನದಿಂದ ದಿನಕ್ಕೆ ಕ್ಷೇತ್ರವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು. 

ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಸ್ಫೂರ್ತಿ ಸಂಸ್ಥೆಯ ನಿರ್ದೇಶಕಿ ಎಂ.ರೇಣುಕಾ, ಅಧ್ಯಕ್ಷ ಎನ್‌.ಎಸ್‌.ಜಯಣ್ಣ, ಸಂಸ್ಥಾಪಕ ಕಾರ್ಯದರ್ಶಿ ಕೆ.ಬಿ.ರೂಪ್ಲಾನಾಯ್ಕ, ಪ್ರಮುಖರಾದ ಆಶಾ ಉಮೇಶ್, ಮೊಹಮ್ಮದ್ ಉಸ್ಮಾನ್ ಷರೀಫ್, ರಾಘವೇಂದ್ರ ನಾಯ್ಕ, ನರೇನಹಳ್ಳಿ ಅರುಣ ಕುಮಾರ್, ಜಿ.ಎನ್‌.ಸಿಂಹ, ಗಣೇಶ್ ಭಟ್, ರಾಯ್ ಡೇವಿಡ್, ಮಹೇಶ ಚಂದ್ರಗುರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.