ADVERTISEMENT

ಹೊನ್ನಾಳಿ: ಹಸಿದವರು ಕಿ.ಮೀ.ಗಟ್ಟಲೇ ನಡೆಯುವುದು ಅನಿವಾರ್ಯ!

ಹೊನ್ನಾಳಿ: ಮೃತ್ಯುಂಜಯ ಶಿವಾಚಾರ್ಯ ಕಾಲೇಜು ಬಳಿ ಇಂದಿರಾ ಕ್ಯಾಂಟೀನ್...

ಎನ್.ಕೆ.ಆಂಜನೇಯ
Published 6 ಡಿಸೆಂಬರ್ 2024, 7:12 IST
Last Updated 6 ಡಿಸೆಂಬರ್ 2024, 7:12 IST
ಹೊನ್ನಾಳಿಯ ಮೃತ್ಯುಂಜಯ ಪ್ರಥಮ ದರ್ಜೆ ಕಾಲೇಜಿನ ಪ್ರವೇಶದ್ವಾರದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಮರಗಿಡಗಳನ್ನು ತೆರವುಗೊಳಿಸುವ ಕಾರ್ಯ ಬುಧವಾರ ನಡೆಯಿತು
ಹೊನ್ನಾಳಿಯ ಮೃತ್ಯುಂಜಯ ಪ್ರಥಮ ದರ್ಜೆ ಕಾಲೇಜಿನ ಪ್ರವೇಶದ್ವಾರದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಮರಗಿಡಗಳನ್ನು ತೆರವುಗೊಳಿಸುವ ಕಾರ್ಯ ಬುಧವಾರ ನಡೆಯಿತು   

ಹೊನ್ನಾಳಿ: ಜಾಗದ ಸಮಸ್ಯೆಯಿಂದಾಗಿ ಈವರೆಗೂ ಪಟ್ಟಣದಲ್ಲಿ ಆರಂಭಿಸಲು ಸಾಧ್ಯವಾಗದ ಇಂದಿರಾ ಕ್ಯಾಂಟೀನ್‌ನನ್ನು ತೆರೆಯಲು ಸಿದ್ಧತೆ ನಡೆಯುತ್ತಿದ್ದು, ಕ್ಯಾಂಟೀನ್‌ ಸ್ಥಳ ದೂರವಾಗುತ್ತದೆಂಬ ದೂರು ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಶಾಸಕ ಡಿ.ಜಿ. ಶಾಂತನಗೌಡ ಅವರು ಶಾಸಕರಾಗಿ ಆಯ್ಕೆಯಾಗಿ ಒಂದೂವರೆ ವರ್ಷದ ನಂತರ ಈ ಕ್ಯಾಂಟೀನ್ ಭಾಗ್ಯ ಬಡಜನರ, ಮಧ್ಯಮ ವರ್ಗದ ಕಾರ್ಮಿಕರ ಹಸಿವು ನೀಗಿಸುವ ಪ್ರಯತ್ನಗಳು ನಡೆಯುತ್ತಿವೆ. ಪಟ್ಟಣದ ಖಾಸಗಿ ಬಸ್ ನಿಲ್ದಾಣದಿಂದ 1.5 ಕಿ.ಮೀ. ದೂರ ಇರುವ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮದರ್ಜೆ ಕಾಲೇಜಿನ ಮುಂಭಾಗದಲ್ಲಿ ಈ ಕ್ಯಾಂಟೀನ್ ತೆರೆಯಲು ಸಿದ್ಧತೆ ನಡೆಸಲಾಗುತ್ತದೆ.

ಆದರೆ, ಹೊಟ್ಟೆ ಹಸಿದವರು, ಖಾಲಿ ಹೊಟ್ಟೆಯಲ್ಲೇ ಅಷ್ಟು ದೂರ ನಡೆಯುವುದು ಹೇಗೆ ಸಾಧ್ಯ? ಎಂಬ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.

ADVERTISEMENT

ಪಟ್ಟಣದ ಮಧ್ಯಭಾಗದಲ್ಲೇ ಈ ಕ್ಯಾಂಟೀನ್ ಪ್ರಾರಂಭಿಸಿದ್ದರೆ ಜನತೆಗೆ ಅನುಕೂಲವಾಗುತ್ತಿತ್ತು. ಆದರೆ, ಜಾಗದ ಸಮಸ್ಯೆಯೇ ಊರು ಬಿಟ್ಟು ದೂರ ನಿರ್ಮಾಣ ಮಾಡಲು ಕಾರಣ ಎಂದು ಮೂಲಗಳು ಹೇಳಿವೆ.

ಪುರಸಭೆ ಆಡಳಿತ ವರ್ಗಕ್ಕೆ ಸಮರ್ಪಕ ಜಾಗವನ್ನು ಗುರುತಿಸಲು ಈವರೆಗೂ ಸಾಧ್ಯವಾಗಿಲ್ಲ. ಅಂತೆಯೆ ‘ಪುರಸಭೆ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಜಾಗ ನೀಡಲು ಸ್ಥಳದ ಕೊರತೆ ಇದೆ’ ಎಂದು ಅಧಿಕಾರಿ ವರ್ಗ ಕಾರಣ ನೀಡುತ್ತಿದೆ.

ಈಗಾಗಲೇ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಪುರಸಭೆಯ ಆಡಳಿತ ವರ್ಗ ಕಾಲೇಜು ಬಳಿ ಸ್ಥಳ ಪರಿಶೀಲನೆ ನಡೆಸಿದ್ದು, ಕಾಲೇಜು ಮುಂಭಾಗ ಬೆಳೆದು ನಿಂತಿದ್ದ ಮರ– ಗಿಡಗಳನ್ನು ತೆರವುಗೊಳಿಸುವ ಕಾರ್ಯ ಬುಧವಾರ ನಡೆದಿದೆ.

ಪಟ್ಟಣದ ಖಾಸಗಿ ಬಸ್‍ನಿಲ್ದಾಣ, ಸರ್ಕಾರಿ ಬಸ್ ನಿಲ್ದಾಣ, ಅಗಳ ಮೈದಾನ, ಸಂತೆ ಮೈದಾನ, ಹಳೇ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಬಹುದಾಗಿತ್ತು. ಇಂದಿರಾ ಕ್ಯಾಂಟೀನ್‌ನ ತಿಂಡಿ, ಊಟವನ್ನು ಕಡಿಮೆ ದರದಲ್ಲಿ ಸವಿಯಬೇಕಾದರೆ ಒಂದೂವರೆ ಕಿ.ಮೀ ದೂರಕ್ಕೆ ಹೋಗಬೇಕು. ಅಲ್ಲಿಗೆ ಅವರು ನಡೆದುಕೊಂಡು ಹೋಗಿ ಬರಬೇಕು ಎಂದರೆ ಕನಿಷ್ಠ 3 ಕಿ.ಮೀ ಹಾದಿಯನ್ನು ಸವೆಸಬೇಕಾಗುತ್ತದೆ ಎಂದು ಬಹುತೇಕ ಆಟೊ ಚಾಲಕರು ಹಾಗೂ ಹಮಾಲಿ ಕಾರ್ಮಿಕರು, ಶ್ರಮಿಕ ವರ್ಗದವರು ಬೇಸರ ವ್ಯಕ್ತಪಡಿಸಿದ್ದಾರೆ.

‘₹ 5ಕ್ಕೆ ತಿಂಡಿ ಹಾಗೂ ₹ 10ಕ್ಕೆ ಊಟ ಸಿಗುತ್ತದೆ ಎಂದರೆ ಎಷ್ಟೇ ದೂರವಿದ್ದರೂ ಅಲ್ಲಿಗೆ ಬಂದೇ ಬರುತ್ತಾರೆ’ ಎಂಬುದು ಪುರಸಭೆ ಅಧಿಕಾರಿಗಳ ಸಮಜಾಯಿಷಿಯಾಗಿದೆ.

ಹೊನ್ನಾಳಿಯ ಮೃತ್ಯುಂಜಯ ಪ್ರಥಮ ದರ್ಜೆ ಕಾಲೇಜಿನ ಪ್ರವೇಶದ್ವಾರದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಮರಗಿಡಗಳನ್ನು ತೆರವುಗೊಳಿಸುವ ಕಾರ್ಯ ಬುಧವಾರ ನಡೆಯಿತು
ಹೊನ್ನಾಳಿ ಪಟ್ಟಣದೊಳಗೆ ತೋರಿಸಿದ ಜಾಗಗಳನ್ನು ಕ್ಯಾಂಟೀನ್‌ ಸ್ಥಾಪಿಸಲು ಗುತ್ತಿಗೆ ಪಡೆದಿರುವ ಕಂಪೆನಿ ತಿರಸ್ಕರಿಸಿದ್ದರಿಂದ ಕಾಲೇಜು ಆವರಣದಲ್ಲಿ ತೆರೆಯಲು ನಿರ್ಧರಿಸಲಾಗಿದೆ.
–ದೇವರಾಜ್, ಪುರಸಭೆ ಎಂಜಿನಿಯರ್
ಬಸ್ ನಿಲ್ದಾಣದ ಬಳಿ ಒಳಿತು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರೆ ಚೆನ್ನಾಗಿತ್ತು. ಇಲ್ಲಿಗೆ ಹಳ್ಳಿಯಿಂದ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರಿಗೆ ಅನುಕೂಲವಾಗುತ್ತಿತ್ತು. ಆದರೆ ಇಲ್ಲಿನ ತಿಂಡಿಗಾಡಿಗಳ ಮಾಲೀಕರು ವಿರೋಧಿಸಿದ್ದರಿಂದ ಅದನ್ನು ಕಾಲೇಜು ಆವರಣಕ್ಕೆ ಸ್ಥಳಾಂತರಿಸಿದ್ದು ಸರಿಯಲ್ಲ. ಇಲ್ಲಿಂದ ತಿಂಡಿ ಊಟಕ್ಕೆ ಕಾಲೇಜ್‌ಗೆ ನಡೆದುಕೊಂಡು ಹೋಗಲು ಸಾಧ್ಯವೇ. ಆ ಸ್ಥಳದ ಕುರಿತು ಪುನರ್ ಪರಿಶೀಲಿಸಬೇಕು.
– ಕೊತ್ತಂಬರಿ ಹಳದಪ್ಪ, ಆಟೊ ಚಾಲಕರ ಸಂಘದ ತಾಲ್ಲೂಕು ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.