ADVERTISEMENT

ದಾವಣಗೆರೆ: ಜಿಲ್ಲಾಧಿಕಾರಿಗೆ ‘ಇಂದಿರಾ ಪ್ರಿಯದರ್ಶಿನಿ’ ಪ್ರಶಸ್ತಿ

ಪ್ಲಾಸ್ಟಿಕ್‌ ಮುಕ್ತ ಜಿಲ್ಲೆಗೆ ಪರಿಶ್ರಮ, ಕಸ ವಿಲೇವಾರಿಯಲ್ಲಿ ಸುಧಾರಣೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 6:36 IST
Last Updated 19 ನವೆಂಬರ್ 2025, 6:36 IST
ಜಿ.ಎಂ.ಗಂಗಾಧರಸ್ವಾಮಿ
ಜಿ.ಎಂ.ಗಂಗಾಧರಸ್ವಾಮಿ   

ದಾವಣಗೆರೆ: ಜಿಲ್ಲೆಯನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಲು ಅನುಷ್ಠಾನಗೊಳಿಸಿದ ‘ಸಾಗರಮಿತ್ರ’ ಅಭಿಯಾನವೂ ಸೇರಿದಂತೆ ಪರಿಸರ ಸ್ನೇಹಿ ಕಾರ್ಯಚಟುವಟಿಕೆಗಳಿಗಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ‘ಇಂದಿರಾ ಪ್ರಿಯದರ್ಶಿನಿ’ ಪರಿಸರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಅಂಗವಾಗಿ ನೀಡುತ್ತಿರುವ ರಾಜ್ಯಮಟ್ಟದ ಈ ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ. ಬೆಂಗಳೂರಿನಲ್ಲಿ ಬುಧವಾರ ನಡೆಯಲಿರುವ ‘ಸುವರ್ಣ ಮಹೋತ್ಸವ ಸಮಾರಂಭ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪ್ಲಾಸ್ಟಿಕ್‌ ನಿರ್ಮೂಲನೆಗೆ ಮಹಾರಾಷ್ಟ್ರದ ಪುಣೆಯ ‘ಸಾಗರಮಿತ್ರ’ ಸಂಸ್ಥೆ ನಡೆಸಿದ ಪ್ರಯತ್ನದಿಂದ ಪ್ರೇರಣೆಗೊಂಡ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿಲ್ಲೆಯಲ್ಲೂ ಈ ಅಭಿಯಾನ ಆರಂಭಿಸಿದರು. 75,000 ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದ್ದು, 3 ಟನ್‌ಗೂ ಅಧಿಕ ಪ್ಲಾಸ್ಟಿಕ್‌ ಸಂಗ್ರಹಿಸಲಾಗಿದೆ. ಜಿಲ್ಲಾಡಳಿತ ಭವನ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು ಪ್ಲಾಸ್ಟಿಕ್‌ ಮುಕ್ತವಾಗಿವೆ. ಪ್ಲಾಸ್ಟಿಕ್ ಬಾಟಲಿಯನ್ನು ಪುನರ್ಬಳಕೆ ಮಾಡುವ ಯಂತ್ರಗಳನ್ನು ಹಲವೆಡೆ ಅಳವಡಿಸಲಾಗಿದೆ.

ADVERTISEMENT

‘ಜಿಲ್ಲೆಯನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಪ್ಲಾಸ್ಟಿಕ್‌ ಗೋದಾಮು, ಅಂಡಿಗಳ ಮೇಲೆ ದಾಳಿ ನಡೆಸಿ ಜಪ್ತಿ ಮಾಡಲಾಗಿದೆ. ಈವರೆಗೆ ₹ 70 ಲಕ್ಷಕ್ಕೂ ಅಧಿಕ ದಂಡ ವಿಧಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳ ಪಾತ್ರವಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸಂತಸ ವ್ಯಕ್ತಪಡಿಸಿದರು.

‘ಸಾಗರಮಿತ್ರ’ ಅಭಿಯಾನಕ್ಕೆ ಮೆಚ್ಚುಗೆ ಪ್ಲಾಸ್ಟಿಕ್‌ ಮುಕ್ತವಾಗಿರುವ ಜಿಲ್ಲಾಡಳಿತ ಭವನ ಬೆಂಗಳೂರಿನಲ್ಲಿ ಇಂದು ಪ್ರಶಸ್ತಿ ಪ್ರದಾನ

ಕಸ ವಿಲೇವಾರಿ ಕೊಳಚೆ ನೀರು ಶುದ್ಧೀಕರಣ ಸೇರಿ ಹಲವು ವಿಚಾರಗಳಲ್ಲಿ ಜಿಲ್ಲೆ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಾಗಿದೆ

-ಜಿ.ಎಂ. ಗಂಗಾಧರಸ್ವಾಮಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.