ADVERTISEMENT

ಹರಪನಹಳ್ಳಿ: ಮೂಲಸೌಕರ್ಯ ವಂಚಿತ ಮಾರುಕಟ್ಟೆಗಳು

ಅವ್ಯವಸ್ಥೆಗಳ ತಾಣವಾಗಿರುವ ಮಾರುಕಟ್ಟೆಗಳನ್ನು ದುರಸ್ತಿಪಡಿಸಲು ಆಗ್ರಹ

ವಿಶ್ವನಾಥ ಡಿ.
Published 28 ಡಿಸೆಂಬರ್ 2021, 5:36 IST
Last Updated 28 ಡಿಸೆಂಬರ್ 2021, 5:36 IST
ಹರಪನಹಳ್ಳಿ ಪಟ್ಟಣದ ಅಯ್ಯನಕೆರೆ ಬೈಪಾಸ್ ರಸ್ತೆಗೆ ಹೊಂದಿಕೊಂಡಿರುವ ಕೋಳಿ ಮಾರುಕಟ್ಟೆ
ಹರಪನಹಳ್ಳಿ ಪಟ್ಟಣದ ಅಯ್ಯನಕೆರೆ ಬೈಪಾಸ್ ರಸ್ತೆಗೆ ಹೊಂದಿಕೊಂಡಿರುವ ಕೋಳಿ ಮಾರುಕಟ್ಟೆ   

ಹರಪನಹಳ್ಳಿ: ಪಟ್ಟಣದಲ್ಲಿ ನಡೆಯುತ್ತಿರುವ ತಾಲ್ಲೂಕು ಕೇಂದ್ರಿತ ವಿವಿಧ ಮಾರುಕಟ್ಟೆಗಳು ಮೂಲಸೌಕರ್ಯವಿಲ್ಲದೇ ಅವ್ಯವಸ್ಥೆಗಳ ತಾಣವಾಗಿವೆ. ದುರಸ್ತಿಪಡಿಸಲು ಒತ್ತಾಯ ಕೇಳಿಬಂದಿದೆ.

ಪಟ್ಟಣದ ಅಯ್ಯನಕೆರೆ ಬೈಪಾಸ್ ರಸ್ತೆಯಲ್ಲಿ ತಲೆ ಎತ್ತಿರುವ ಕೋಳಿ, ಮೀನು, ಕುರಿ ಮಾಂಸದ ಮಾರುಕಟ್ಟೆಗಳಿಗೆ ಮೂಲ ಸೌಕರ್ಯಗಳಿಲ್ಲ. ತಾತ್ಕಾಲಿಕ ನಿರ್ಮಿಸಿದ ಶೆಡ್ಗಳಲ್ಲಿ ಕೋಳಿ, ಕುರಿ, ಮೀನು ಕತ್ತರಿಸಿ ಮಾರಾಟ ಮಾಡುತ್ತಾರೆ. ಅವುಗಳಿಂದ ಬರುವ ತ್ಯಾಜ್ಯ ಅಯ್ಯನಕೆರೆಯನ್ನು ಸೇರುತ್ತದೆ. ಪಟ್ಟಣದ ಚರಂಡಿಯಿಂದ ಹರಿಯುವ ನೀರು ಕೆರೆಗೆ ಸೇರ್ಪಡೆ ಆಗಿ, ಇಡೀ ಪರಿಸರವನ್ನೇ ಹಾಳು ಮಾಡಿವೆ. ಇದರ ದುರ್ವಾಸನೆ ಹೊಂದಿಕೊಂಡಿರುವ ಕ್ರೀಡಾಂಗಣವನ್ನೇ ಆವರಿಸಿದೆ.

ಕೋಟೆ ಆಂಜನೇಯ ದೇವಸ್ಥಾನದ ಬಳಿಯಿರುವ ಹೋಲ್‌ಸೇಲ್ ಮಾರುಕಟ್ಟೆ ಕಿಷ್ಕಿಂದೆಯಂತಾಗಿದೆ. ಪರಿಣಾಮ ತರಕಾರಿಗಳನ್ನು ಹೇರಿಕೊಂಡು ಬರುವ ವಾಹನಗಳಿಗೆ ಪಾರ್ಕಿಂಗ್ ಸ್ಥಳವಿಲ್ಲದಂತಾಗಿದೆ. ಪಟ್ಟಣದಲ್ಲಿರುವ ದಿನವಹಿ ಮಾರುಕಟ್ಟೆಯನ್ನು ಪೌರ ಕಾರ್ಮಿಕರು ನಿತ್ಯವೂ ಸ್ವಚ್ಛ ಮಾಡುತ್ತಿದ್ದಾರೆ. ಆದರೆ ಹಂದಿಗಳ ಹಾವಳಿ ಹೆಚ್ಚಾಗಿದೆ. ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ.

ADVERTISEMENT

ಮಾರುಕಟ್ಟೆಯಲ್ಲಿ ಶೌಚಾಲಯವಿದ್ದರೂ ಜನರು ಬಳಸುವುದಿಲ್ಲ. ಇದರಿಂದ ವ್ಯಾಪಾರಸ್ಥರು, ಗ್ರಾಹಕರು ಬೇಸತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಈಗಿರುವ ವ್ಯಾಪಾರಿ ಕಟ್ಟೆಗಳು ಹಾಳಾಗಿದ್ದು, ಸ್ವಲ್ಪ ಮಳೆ ಬಂದರೂ ಓಡಾಡುವುದು ಕಷ್ಟವಾಗುತ್ತದೆ. ಕೂಡಲೇ ಪುರಸಭೆ ಅಧಿಕಾರಿಗಳು ವೈಜ್ಞಾನಿಕ ಮಾರುಕಟ್ಟೆ ನಿರ್ಮಿಸಬೇಕು ಎಂಬುದು ತರಕಾರಿ ವ್ಯಾಪಾರಿಗಳ ಸಂಘದ ಒತ್ತಾಯ.

‘ಕೊಟ್ಟೂರು ರಸ್ತೆ ಅಗ್ನಿಶಾಮಕ ಠಾಣೆ ಹತ್ತಿರ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಿಸಿರುವ ವೈಜ್ಞಾನಿಕ ಕುರಿ ಮಾರ್ಕೆಟ್ ಅವ್ಯವಸ್ಥೆಯ ತಾಣವಾಗಿದೆ. ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ಕಲ್ಪಿಸಿ ನಿರ್ಮಿಸಿದ್ದರೂ, ಮಾರುಕಟ್ಟೆಗೆ ಬಂದಿದ್ದ ಕಂಪ್ಯೂಟರ್, ತೂಕದ ಯಂತ್ರಗಳು ಅಳವಡಿಸಿಲ್ಲ. ಈಚೆಗೆ ಕುರಿ ಮಾರಕಟ್ಟೆ ಒಳ ಪ್ರವೇಶಿಸಲು ನಿರ್ಮಿಸಿದ್ದ ಕಿರು ಸೇತುವೆ ಸಂಪೂರ್ಣ ಕಳಪೆ ಆಗಿದೆ. ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ರೈತ ಮುಖಂಡ ಮಲ್ಲೇಶ್ ದೂರಿದರು.

ಪಟ್ಟಣದಲ್ಲಿರುವ ಮಾರುಕಟ್ಟೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ. ಪಟ್ಟಣದಲ್ಲಿ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ನಿಷೇಧಿಸಲಾಗಿದೆ. ಇದರ ಪರಿಣಾಮ ಮಾರ್ಕೆಟ್‌ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಇಲ್ಲ. ನಿತ್ಯವೂ ಸ್ವಚ್ಛತೆಗೆ ಗಮನ ಹರಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ತಿಳಿಸಿದರು.

***

ಕೋಳಿ, ಕುರಿ ಮತ್ತು ಮೀನು ಮಾಂಸದ ಮಾರುಕಟ್ಟೆಗೆ ಮೂಲಸೌಕರ್ಯ ಒದಗಿಸಬೇಕು. ಆಧುನೀಕರಣಗೊಳಿಸಬೇಕು.

ಜಿ.ವೆಂಕಟೇಶ್, ವ್ಯಾಪಾರಿ, ದೇವರ ತಿಮ್ಲಾಪುರ

***

ಪುರಸಭೆಯಿಂದ ಅಂದಾಜು ₹ 2.70 ಕೋಟಿ ವೆಚ್ಚದಲ್ಲಿ ವೈಜ್ಞಾನಿಕ ತರಕಾರಿ ಮಾರುಕಟ್ಟೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

- ಮಂಜುನಾಥ್ ಇಜಂತಕರ್‌, ಅಧ್ಯಕ್ಷ ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.