ADVERTISEMENT

ಜಗಳೂರು| ಮುಖ್ಯರಸ್ತೆ ವಿಸ್ತರಣೆಗೆ ಸೂಕ್ತ ಕ್ರಮ: ಸಚಿವ ಸತೀಶ ಜಾರಕಿಹೊಳಿ ಭರವಸೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 3:02 IST
Last Updated 9 ಜನವರಿ 2026, 3:02 IST
ಜಗಳೂರಿನಲ್ಲಿ ಬುಧವಾರ ರಸ್ತೆ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರಗತಿಪರ ಒಕ್ಕೂಟದ ಪದಾಧಿಕಾರಿಗಳು ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಮಾಡಿದರು
ಜಗಳೂರಿನಲ್ಲಿ ಬುಧವಾರ ರಸ್ತೆ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರಗತಿಪರ ಒಕ್ಕೂಟದ ಪದಾಧಿಕಾರಿಗಳು ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಮಾಡಿದರು   

ಜಗಳೂರು: ಪಟ್ಟಣದ ಮಧ್ಯೆ ಹಾದು ಹೋಗಿರುವ ಮಲ್ಪೆ–ಮೊಳಕಾಲ್ಮುರು ರಾಜ್ಯ ಹೆದ್ದಾರಿಯನ್ನು ರಸ್ತೆಯ ಮಧ್ಯಭಾಗದಿಂದ ಇಕ್ಕೆಲಗಳಲ್ಲಿ 69 ಅಡಿ ವಿಸ್ತರಿಸುವ ಬಗ್ಗೆ ಶಾಸಕ ಬಿ. ದೇವೇಂದ್ರಪ್ಪ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ತಾಲ್ಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ದುರ್ಗಾಂಭಿಕಾ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬುಧವಾರ ಪಟ್ಟಣಕ್ಕೆ ಆಗಮಿಸಿದ್ದ ಅವರು ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ನೀಡಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದರು.

ಈ ರಾಜ್ಯ ಹೆದ್ದಾರಿ ಅತ್ಯಂತ ಇಕ್ಕಟ್ಟಾಗಿದ್ದು, ರಸ್ತೆ ಅಪಘಾತಗಳು ಸಾಮಾನ್ಯವಾಗಿವೆ. ‌ಪಾದಚಾರಿಗಳು ಹಾಗೂ ಬೈಕ್ ಸವಾರರು ಅಂಗೈಯಲ್ಲಿ ಜೀವ ಹಿಡಿದು ಆತಂಕದಿಂದ ಓಡಾಡುವ ಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ಪಟ್ಟಣ ಬೆಳೆಯಲಿದ್ದು, ತಾಲ್ಲೂಕು ಕೇಂದ್ರದ ಅಭಿವೃದ್ಧಿಗೆ ಪೂರಕವಾಗಿ ರಸ್ತೆ ವಿಸ್ತರಣೆಗೆ ಅಗತ್ಯ ಅನುದಾನ ಬಿಡುಗಡೆ ಮಾಡುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.

ADVERTISEMENT

ಹಲವರು ರಸ್ತೆಯನ್ನು ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ದಶಕಗಳ ನಂತರ ಮೊದಲ ಬಾರಿಗೆ ಶಾಸಕ ಬಿ. ದೇವೇಂದ್ರಪ್ಪ ಅವರು ರಸ್ತೆ ವಿಸ್ತರಣೆಯಂತಹ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದು, ತಾಲ್ಲೂಕಿನ ಜನ ವಿಸ್ತರಣೆಯನ್ನು ಬೆಂಬಲಿಸಿದ್ದಾರೆ. ಆದರೆ, ಕೆಲವು ಕಟ್ಟಡಗಳ ಮಾಲೀಕರು ಅಸಹಕಾರ ತೋರುತ್ತಿದ್ದಾರೆ. ಕಾನೂನು ಬದ್ಧವಾಗಿ ಕಟ್ಟಡಗಳ ಮಾಲೀಕರಿಗೆ ಸೂಕ್ತ ಪರಿಹಾರ ಕೊಟ್ಟಾದರೂ 69 ಅಡಿ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಪ್ರಗತಿಪರ ಹೋರಾಟ ಒಕ್ಕೂಟದ ಅಧ್ಯಕ್ಷ ಸಣ್ಣೋಬಯ್ಯ, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್, ಆರ್. ಓಬಳೇಶ್, ಮಹಾಲಿಂಗಪ್ಪ ಎಚ್.ಎಂ. ಹೊಳೆ, ಇಂದಿರಮ್ಮ, ಬೊಮ್ಮಕ್ಕ, ಎ. ರಂಗಪ್ಪ ಮತ್ತಿತರರು ಇದ್ದರು.