
ಜಗಳೂರು: ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರ ಜೀವನಾಧಾರವಾಗಿರುವ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದು ಮಾಡಿರುವುದು ಜನವಿರೋಧಿ ನೀತಿಯಾಗಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಆರೋಪಿಸಿದರು.
ತಾಲ್ಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ, ತಮಲೇಹಳ್ಳಿ, ಲಕ್ಕಂಪುರ, ಕ್ಯಾಸೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿವಿಧ ಇಲಾಖೆಗಳು, ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಸಿ.ಸಿ. ರಸ್ತೆ, ಚರಂಡಿ, ಚೆಕ್ ಡ್ಯಾಂ ನಿರ್ಮಿಸುವ ₹15.32 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
‘ಗಾಂಧೀಜಿ ಹೆಸರನ್ನು ದಾಖಲೆಗಳಲ್ಲಿ, ನಾಮಫಲಕಗಳಲ್ಲಿ ಅಳಿಸಬಹುದು. ಆದರೆ ಜನಮಾನಸದಿಂದ ಅಲ್ಲ’ ಎಂದರು.
ತಮಲೇಹಳ್ಳಿಯಲ್ಲಿ ₹50 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 57 ಕೆರೆ ತುಂಬಿಸುವ ಯೋಜನೆಯಡಿ ಗ್ರಾಮದ ಕೆರೆಗೆ ನೀರು ಹರಿಸಲಾಗಿದೆ. ಕೆರೆಯನ್ನು ಸಂಪರ್ಕಿಸುವ ರಸ್ತೆ, ಜಾಲರ ಅಳವಡಿಕೆ, ಹೂಳೆತ್ತುವ ಕಾಮಗಾರಿ, ವಿದ್ಯುತ್ ದೀಪ ಅಳವಡಿಕೆ ಮಾಡಲಾಗುವುದು ಎಂದರು.
‘ಕ್ಯಾಸೇನಹಳ್ಳಿ ತಿಮ್ಮಿನಕಟ್ಟೆ ಬಳಿ ₹1.24 ಕೋಟಿ ವೆಚ್ಚದ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಜನ, ಜಾನುವಾರುಗಳಿಗೆ ನೀರು ದೊರೆತು, ಅಂತರ್ಜಲ ಹೆಚ್ಚಳವಾಗಲಿದೆ. ಮೇಲ್ದಂಡೆ ಯೋಜನೆಯ ಶೇ 35ರಷ್ಟು ಕಾಮಗಾರಿ ಪ್ರಗತಿಯಲ್ಲಿದೆ. 9 ಕೆರೆಗಳು ಭರ್ತಿಯಾಗಲಿವೆ. ಹನಿ ನೀರಾವರಿ ಕಲ್ಪಿಸುವ 62 ಗ್ರಾಮಗಳಿಗೆ ಪಿವಿಸಿ ಪೈಪ್‌ಲೈನ್ ಕಾಮಗಾರಿ ಶೇ 50ರಷ್ಟು ಪೂರ್ಣವಾಗಿದೆ. ರೈತರು ಜಮೀನುಗಳಲ್ಲಿ ಕಾಮಗಾರಿ ನಡೆಸಲು ಸಹಕರಿಸಬೇಕು’ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಎಇಇ ಅಫ್ರೀನ್ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಗುರುಮೂರ್ತಿ, ಗ್ರಾ.ಪಂ ಅಧ್ಯಕ್ಷೆ ಅಶ್ವಿನಿ ಅಂಜಿನಪ್ಪ, ಸದಸ್ಯೆ ಚೌಡಮ್ಮ ತಿಮಣ್ಣ, ಅಜ್ಜಪ್ಪ, ಹನುಮಂತಾಪುರ ಚಿತ್ತಪ್ಪ, ಸೂರಲಿಂಗಪ್ಪ, ಇಇ ಶಶಿಧರ್, ಎಇಇ ಭಾರತಿ, ಎಇ ಆನಂದ, ಪಿ.ಆರ್.ಇ.ಡಿ ಎಇಇ ಶಿವಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.