ADVERTISEMENT

ಅಸ್ಗರ್ ಕೊಲೆ ಯತ್ನ ಆರೋಪಿಗೆ ನೆರವು: ಕಾಂಗ್ರೆಸ್ ನಾಯಕಿ ಸವಿತಾ ನಾಯ್ಕ ಬಂಧನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 19:07 IST
Last Updated 21 ನವೆಂಬರ್ 2025, 19:07 IST
   

ದಾವಣಗೆರೆ: ಜೆಡಿಎಸ್‌ ಮುಖಂಡ ಟಿ.ಅಸ್ಗರ್ ಕೊಲೆಯತ್ನ ಪ್ರಕರಣದ ತನಿಖೆ ನಡೆಸುತ್ತಿರುವ ಅಜಾದ್ ನಗರ ಠಾಣೆಯ ಪೊಲೀಸರು, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕಿ ಸವಿತಾ ಮಲ್ಲೇಶ್ ನಾಯ್ಕ ಅವರನ್ನು ಬಂಧಿಸಿದ್ದಾರೆ.

ಸವಿತಾ ಅವರನ್ನು ಶುಕ್ರವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು, ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ. ನ್ಯಾಯಾಧೀಶರ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇಲ್ಲಿನ ಬಾಷಾ ನಗರದಲ್ಲಿ ನ.10ರಂದು ಆಯೋಜಿಸಿದ್ದ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದ ಅಸ್ಗರ್ ಮೇಲೆ ಕಾಂಗ್ರೆಸ್ ಮುಖಂಡ ಖಾಲೀದ್ ಪೈಲ್ವಾನ್ ದಾಳಿ ನಡೆಸಿ ಚಾಕುವಿನಿಂದ ಇರಿದಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ಅಸ್ಗರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ADVERTISEMENT

‘ಅಸ್ಗರ್ ‌ಕೊಲೆಗೆ ಯತ್ನಿಸಿದ ಆರೋಪಿ ಖಾಲೀದ್ ಪೈಲ್ವಾನ್‌ಗೆ ಸವಿತಾ ಸಹಾಯ ಮಾಡಿದ್ದು ತನಿಖೆಯಿಂದ ಗೊತ್ತಾಗಿದೆ. ಆರೋಪಿಗೆ ಆಶ್ರಯ ಕಲ್ಪಿಸಿ, ಹಣಕಾಸಿನ ನೆರವು ನೀಡಿ ತಪ್ಪಿಸಿಕೊಳ್ಳಲು ಸಹಕರಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸವಿತಾ ಮಲ್ಲೇಶ್‌ ನಾಯ್ಕ ಅವರು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆ ಬಳಿಕ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.