ADVERTISEMENT

ಸಾಹಿತ್ಯದ ಒಲವು ಮೂಡಿಸುವ ಕೆಲಸವಾಗಬೇಕು: ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 5:50 IST
Last Updated 13 ಅಕ್ಟೋಬರ್ 2025, 5:50 IST
ಹೊನ್ನಾಳಿಯ ಹಿರೇಕಲ್ಮಠದಲ್ಲಿ ಶಿವಮೊಗ್ಗದ ಭಾರತಾಂಬೆ ಭಾವಸುಧೆ ಸಂಸ್ಥೆ, ಶ್ರೀ ಚನ್ನಪ್ಪಸ್ವಾಮಿ ಜನಸೇವಾ ಟ್ರಸ್ಟ್‍ವತಿಯಿಂದ ಸಾಂಸ್ಕೃತಿಕ ಸಮ್ಮೇಳನ, ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು
ಹೊನ್ನಾಳಿಯ ಹಿರೇಕಲ್ಮಠದಲ್ಲಿ ಶಿವಮೊಗ್ಗದ ಭಾರತಾಂಬೆ ಭಾವಸುಧೆ ಸಂಸ್ಥೆ, ಶ್ರೀ ಚನ್ನಪ್ಪಸ್ವಾಮಿ ಜನಸೇವಾ ಟ್ರಸ್ಟ್‍ವತಿಯಿಂದ ಸಾಂಸ್ಕೃತಿಕ ಸಮ್ಮೇಳನ, ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು   

ಹೊನ್ನಾಳಿ: ಕನ್ನಡ ಸಾಹಿತ್ಯದ ಬಗ್ಗೆ ಒಲವು ಮೂಡಿಸುವ ಹಾಗೂ ಚಿಂತನೆಗೆ ಹಚ್ಚುವ ಕೆಲಸ ಆಗಬೇಕಾಗಿದೆ ಎಂದು ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಭಾನುವಾರ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಶಿವಮೊಗ್ಗದ ಭಾರತಾಂಬೆ ಭಾವಸುಧೆ ಸಂಸ್ಥೆ, ಶ್ರೀ ಚನ್ನಪ್ಪಸ್ವಾಮಿ ಜನಸೇವಾ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಮಟ್ಟದ ಸಾಂಸ್ಕಂತಿಕ ಸಮ್ಮೇಳನ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿಗೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಸಾಹಿತ್ಯದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸಾಹಿತಿ ಭವ್ಯ ಸುಧಾಕರ್ ಅವರು ಸ್ಥಾಪಿಸಿರುವ ಸಂಸ್ಥೆ ಭಾರತಾಂಬೆ ಭಾವಸುಧೆ ಅಡಿಯಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಸಹಕಾರ ನೀಡಬೇಕಾಗಿದೆ.

ಮದ್ರಾಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಸೆಲ್ವಿ ಮಾತನಾಡಿ, 12ನೇ ಶತಮಾನದಿಂದ ಇಂದಿನವರೆಗೂ ವಚನಗಳು ಸಂಸ್ಕಾರ ಹಾಗೂ ಸಾಹಿತ್ಯದ ಭದ್ರತೆಯನ್ನು ನೀಡಿದೆ. ಇಂದಿಗೂ ವಚನಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ಸ್ವಾತಂತ್ರ್ಯಕ್ಕೂ ಮುನ್ನವೇ ತಮಿಳುನಾಡಿನ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿಭಾಗವನ್ನು ಪ್ರಾರಂಭಿಸಿದ ಕೀರ್ತಿ ತಮಿಳುನಾಡಿಗೆ ಸಲ್ಲುತ್ತದೆ. ತಮಿಳು ಹಾಗೂ ಕನ್ನಡ ಭಾಷಿಕರು ಇಬ್ಬರು ತಮ್ಮ ಜೀವನವನ್ನು ನೂರಾರು ವರ್ಷಗಳಿಂದಲೂ ಉಭಯ ರಾಜ್ಯಗಳಲ್ಲಿ ಕಂಡುಕೊಂಡಿದ್ದಾರೆ. ಹಾಗಾಗಿ ಎರಡು ರಾಜ್ಯಗಳ ಭಾಷಿಕರಲ್ಲಿ ಸಾಮರಸ್ಯದ ಜೀವನ ಸಾಗುತ್ತಿದೆ ಎಂದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕವಿ ಜಯಪ್ಪ ಹೊನ್ನಾಳಿ ಮಾತನಾಡಿ, ವೇದನೆ ಇಲ್ಲದೆ ಸಾಧನೆ ಖಂಡಿತಾ ಸಾಧ್ಯವಿಲ್ಲ, ಒಂದು ಸುಂದರವಾದ ಕಾರ್ಯಕ್ರಮ ನಡೆಯಬೇಕಾದರೆ ಬಹುದಿನಗಳ ಶ್ರಮ ಬೇಕಾಗುತ್ತದೆ. ಆಗ ಮಾತ್ರ ಆ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು. 

ಭಾರತಾಂಬೆ ಭಾವಸುಧೆ ಸಂಸ್ಥೆಯ ಸಂಸ್ಥಾಪಕಿ ಭವ್ಯ ಸುಧಾಕರ್ ಜಗಮನೆ, ವಚನಕಾರ ಗಂಗಾಧರಪ್ಪ ಹಾಗೂ ಎಂ.ಪಿ.ಎಂ. ಕೊಟ್ರಯ್ಯ ಮಾತನಾಡಿದರು.

ತಮಿಳುನಾಡಿನ ಮದ್ರಾಸ್ ವಿಶ್ವವಿದ್ಯಾಲಯದ ಸಂಶೋಧನಾ ಅಭ್ಯರ್ಥಿ ಎನ್. ಹೇಮಾ ಅಧ್ಯಕ್ಷತೆಯಲ್ಲಿ ಆಧುನಿಕ ವಚನಕಾರರ ಗೋಷ್ಠಿಯನ್ನು ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.