ADVERTISEMENT

ಕೊರೊನಾ ಭಯದ ಸಮಯ ದುರ್ಬಳಕೆ: ಪಿ.ವಿ. ಲೋಕೇಶ್

ಕಿಸಾನ್‌ ಸಭಾ ಜಾಗೃತಿ ಸಭೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 16:26 IST
Last Updated 11 ಅಕ್ಟೋಬರ್ 2020, 16:26 IST
ದಾವಣಗೆರೆಯ ಪಂಪಾಪತಿ ಭವನದಲ್ಲಿ ಜಿಲ್ಲಾ ಎಐಕೆಎಸ್ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ಎ ಲೋಕೇಶ್ ಉದ್ಘಾಟಿಸಿದರು
ದಾವಣಗೆರೆಯ ಪಂಪಾಪತಿ ಭವನದಲ್ಲಿ ಜಿಲ್ಲಾ ಎಐಕೆಎಸ್ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ಎ ಲೋಕೇಶ್ ಉದ್ಘಾಟಿಸಿದರು   

ದಾವಣಗೆರೆ: ಜಗತ್ತನ್ನು ಕೊರೊನಾ ಸೋಂಕು ನಡುಗಿಸಿದೆ. ಇಂಥ ಭಯದ ವಾತಾವರಣವನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಹಾಗೂ ಆಲ್‌ ಇಂಡಿಯಾ ಕಿಸಾನ್‌ ಸಭಾ (ಎಐಕೆಎಸ್‌) ರಾಜ್ಯ ಸಂಚಾಲಕ ಪಿ.ವಿ. ಲೋಕೇಶ್ ತಿಳಿಸಿದರು.

ಇಲ್ಲಿನ ಪಂಪಾಪತಿ ಭವನದಲ್ಲಿ ಭಾನುವಾರ ನಡೆದ ಎಐಕೆಎಸ್ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಭೆ ಹಾಗೂ ಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಹಾರ ಸಂಪತ್ತನ್ನು ಸೃಷ್ಟಿಸುವ ರೈತ ಸಮುದಾಯದ ಮೇಲೆ ದಾಳಿ ನಡೆಸುತ್ತಿದೆ. ಯಾವುದೇ ಚರ್ಚೆ ನಡೆಸದೇ ಮೂರು ಸುಗ್ರೀವಾಜ್ಞೆಗಳನ್ನು ಜಾರಿಗೆ ತರುವ ಮೂಲಕ ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ADVERTISEMENT

ಕೃಷಿಕರು ಬೆಳೆದಿರುವ ದಾಸ್ತಾನುಗಳನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಲು ಅವಕಾಶವಿತ್ತು. ಈಗ ಜಾರಿಗೊಳ್ಳುತ್ತಿರುವ ಕಾಯ್ದೆಯಿಂದಾಗಿ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಬಹುದು. ಇದರಿಂದಾಗಿ ಎಪಿಎಂಸಿ ಹಾಗೂ ರೈತರಿಗೆ ದೊಡ್ಡ ಹೊಡೆತ ಬೀಳಲಿದೆ. ಈ ಹಿಂದೆ ರಾಷ್ಟ್ರೀಯ ತುರ್ತು ಸಂದರ್ಭದಲ್ಲಿ ಆಹಾರ ವಸ್ತುಗಳನ್ನು ಸಂಗ್ರಹ ಮಾಡುವುದಕ್ಕೆ ಅವಕಾಶವಿತ್ತು. ಈಗಿನ ಕಾಯ್ದೆಯಲ್ಲಿ ಅದಕ್ಕೆ ಅವಕಾಶವಿಲ್ಲ. ರೈತ ವಿರೋಧಿಯಾಗಿರುವ ಈ ಕಾಯ್ದೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂವಿಧಾನದ 7ನೇ ಷೆಡ್ಯೂಲ್ ಪ್ರಕಾರ 97 ಕ್ಷೇತ್ರಗಳಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವ ಅಧಿಕಾರ ಹೊಂದಿದೆ. ರಾಜ್ಯ ಸರ್ಕಾರ ತನ್ನದೇ ವ್ಯಾಪ್ತಿಯಲ್ಲಿ ಬರುವಂತಹ 66 ಕ್ಷೇತ್ರಗಳಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವ ಅಧಿಕಾರ ಹೊಂದಿದೆ ಎಂದು ಮಾಹಿತಿ ನೀಡಿದರು.

ಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಎಐಕೆಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜಿ. ಉಮೇಶ್, ‘ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆಗಳ ಸುಗ್ರೀವಾಜ್ಞೆ ವಿರೋಧಿಸಿ ಎಐಕೆಎಸ್‌ನಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೋರಾಟ ರೂಪಿಸಬೇಕಾಗುತ್ತದೆ’ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ‘ಚಪ್ಪಲಿ, ಬೂಟು ಮಾರುವ ಅಂಗಡಿಗಳಿಗೆ ಹವಾ ನಿಯಂತ್ರಣ ವ್ಯವಸ್ಥೆ ಇದೆ. ಆದರೆ, ಬೆಳೆಯುವ ತರಕಾರಿ, ದವಸ–ಧಾನ್ಯಗಳನ್ನು ಸಂರಕ್ಷಿಸು ಘಟಕಗಳು ಇನ್ನೂ ಬಂದಿಲ್ಲ. ರೈತರು ಇಂದಿಗೂ ಬೀದಿಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರುವ ವ್ಯವಸ್ಥೆ ಇದೆ. ರೈತರು ಮತ್ತು ಕಾರ್ಮಿಕರ ಮೇಲೆ ನಿರಂತರ ದಬ್ಭಾಳಿಕೆ ನಡೆಯುತ್ತಿದೆ. ರೈತ, ಕಾರ್ಮಿಕರು ಒಂದಾಗಿ ಆಳುವ ಸರ್ಕಾರಗಳ ವಿರುದ್ಧ ಹೋರಾಟ ಮಾಡಬೇಕು’ ಎಂದು ತಿಳಿಸಿದರು.

ಕೆ.ಎಸ್.ಜನಾರ್ದನ್, ಆನಂದರಾಜ್, ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಕೊಪ್ಪಳದ ಹುಲಿಗೆಪ್ಪ, ಯೇಸುಜಾನ್‌ಶೌರಿ, ಪಿ.ಕೆ.ಲಿಂಗರಾಜು, ಭೀಮಾರೆಡ್ಡಿ, ವಿ.ಲಕ್ಷಣ್, ಟಿ.ನಾಗರಾಜ್, ಬಾನಪ್ಪ ಆವರಗೆರೆ, ಸಿದ್ದೇಶ್, ಆವರಗೆರೆ ಚಂದ್ರು, ಆವರಗೆರೆ ವಾಸು, ಐರಣಿ ಚಂದ್ರು, ಮಹಮ್ಮದ್ ರಫೀಕ್ ಚನ್ನಗಿರಿ, ಸುರೇಶ್‌ ಯರಗುಂಟೆ, ಕೆರೆಗುಡಿಹಳ್ಳಿ ಹಾಲೇಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.