ADVERTISEMENT

‘ಕೆ–ಸೆಟ್‌’ ವಾಣಿಜ್ಯಶಾಸ್ತ್ರ ಪರೀಕ್ಷೆ ಆಂಗ್ಲ ಮಾಧ್ಯಮಕ್ಕೆ ಸೀಮಿತ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 16:00 IST
Last Updated 24 ನವೆಂಬರ್ 2024, 16:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ದಾವಣಗೆರೆ: ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆ ‘ಕೆ-ಸೆಟ್’ನ ವಾಣಿಜ್ಯಶಾಸ್ತ್ರ ವಿಷಯವನ್ನು ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶ ಸಿಗದಿರುವುದಕ್ಕೆ ಕೆಲ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದಿನ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮಕ್ಕೆ ಅವಕಾಶ ನೀಡುವಂತೆ ಕೋರಿಕೊಂಡಿದ್ದಾರೆ.

ಅಭ್ಯರ್ಥಿಗಳ ಈ ಆಕ್ಷೇಪವನ್ನು ತಳ್ಳಿಹಾಕಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆಯ ಪ್ರಕಾರ ಪರೀಕ್ಷೆ ನಡೆಸಲಾಗಿದೆ ಎಂಬುದಾಗಿ ಸ್ಪಷ್ಟಪಡಿಸಿದೆ. ಎಲ್ಲ ವಿಷಯಗಳ ಪರೀಕ್ಷೆಯ ಮಾಧ್ಯಮದ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂಬುದಾಗಿ ತಿಳಿಸಿದೆ.

ADVERTISEMENT

‘ವಾಣಿಜ್ಯಶಾಸ್ತ್ರ ವಿಷಯದ ಪರೀಕ್ಷೆಯನ್ನು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಬರೆಯಲು ಈವರೆಗೆ ಅವಕಾಶವಿತ್ತು. ಆದರೆ, ಭಾನುವಾರ ನೀಡಿದ ಪ್ರಶ್ನೆ ಪತ್ರಿಕೆ ಕೇವಲ ಆಂಗ್ಲ ಮಾಧ್ಯಮದಲ್ಲಿತ್ತು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಇದರಿಂದ ತೊಂದರೆ ಉಂಟಾಯಿತು’ ಎಂದು ಮೋತಿ ವೀರಪ್ಪ ಕಾಲೇಜಿನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಅಳಲು ತೋಡಿಕೊಂಡರು.

‘ವಾಣಿಜ್ಯಶಾಸ್ತ್ರ ವಿಷಯದ ಪರೀಕ್ಷೆ ಆಂಗ್ಲ ಮಾಧ್ಯಮದಲ್ಲಿ ಮಾತ್ರ ನಡೆಸಲಾಗುತ್ತದೆ ಎಂಬ ಮಾಹಿತಿಯನ್ನು ನಾಲ್ಕೂವರೆ ತಿಂಗಳ ಹಿಂದೆ ಹೊರಡಿಸಿದ ಅಧಿಸೂಚನೆಯಲ್ಲಿ ನೀಡಲಾಗಿತ್ತು. ಕಳೆದ ವರ್ಷವೇ ಈ ಬದಲಾವಣೆಯಾಗಿದ್ದು, ಇದನ್ನು ಅಭ್ಯರ್ಥಿಗಳು ಗಮನಿಸಬೇಕಿತ್ತು’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ತಿಳಿಸಿದ್ದಾರೆ.

1,060 ಅಭ್ಯರ್ಥಿಗಳ ಗೈರು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ‘ಕೆ-ಸೆಟ್’ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 7,304 ಅಭ್ಯರ್ಥಿಗಳ ಪೈಕಿ 6,244 ಅಭ್ಯರ್ಥಿಗಳು ಹಾಜರಾಗಿದ್ದರು. 1,060 ಅಭ್ಯರ್ಥಿಗಳು ಗೈರಾಗಿದ್ದರು.

‘ದಾವಣಗೆರೆ ನಗರದ 17 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ಪರೀಕ್ಷೆ ನಡೆಯಿತು. ಪ್ರತಿಯೊಬ್ಬರನ್ನು ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಾವಕಾಶ ಕಲ್ಪಿಸಲಾಯಿತು. ಪರೀಕ್ಷೆ ಸುಗಮವಾಗಿ ನಡೆಯಿತು’ ಎಂದು ಡಿಡಿಪಿಯು ಕರಿಸಿದ್ಧಪ್ಪ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.