ADVERTISEMENT

ದಾವಣಗೆರೆಗೂ ತಟ್ಟಿದ ಸಾರಿಗೆ ಮುಷ್ಕರ: ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 6:09 IST
Last Updated 6 ಆಗಸ್ಟ್ 2025, 6:09 IST
ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರದಿಂದಾಗಿ ದಾವಣಗೆರೆಯ ಬಸ್ ನಿಲ್ದಾಣ ಪ್ರಯಾಣಿಕರು ಹಾಗೂ ಬಸ್‌ಗಳಿಲ್ಲದೇ ಬಿಕೋ ಎನ್ನುತ್ತಿತ್ತು –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರದಿಂದಾಗಿ ದಾವಣಗೆರೆಯ ಬಸ್ ನಿಲ್ದಾಣ ಪ್ರಯಾಣಿಕರು ಹಾಗೂ ಬಸ್‌ಗಳಿಲ್ಲದೇ ಬಿಕೋ ಎನ್ನುತ್ತಿತ್ತು –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ   

ದಾವಣಗೆರೆ: ಸಾರಿಗೆ ಮುಷ್ಕರದ ಪರಿಣಾಮ ಜಿಲ್ಲೆಯಲ್ಲಿ ಮಂಗಳವಾರ ಜನಜೀವನ ಅಸ್ತವ್ಯಸ್ತವಾಗಿತ್ತು. ಸಕಾಲಕ್ಕೆ ಬಸ್ ಸೌಲಭ್ಯ ಸಿಗದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಮುಷ್ಕರ ಅಂತ್ಯವಾದ ಬಳಿಕ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಮುಷ್ಕರದ ಅರಿವಿಲ್ಲದೇ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಬಸ್‌ಗೆ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಂಗಳೂರು, ಚಿತ್ರದುರ್ಗ, ಹುಬ್ಬಳ್ಳಿ, ಹಾವೇರಿ ಸೇರಿದಂತೆ ಕೆಲವೇ ಜಿಲ್ಲೆಗಳಿಗೆ ಬಸ್ ಸೇವೆ ಒದಗಿಸಲಾಯಿತು.

ಬಸ್ ಸಂಚಾರ ತಡೆಯಲು ಪ್ರಯತ್ನಿಸಿದ ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ಅಧ್ಯಕ್ಷ ಎಚ್.ಜಿ. ಉಮೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಒತ್ತಾಯ ಪೂರ್ವಕವಾಗಿ ಬಸ್ ಸಂಚಾರ ತಡೆಯುವ ಯತ್ನವನ್ನು ವಿಫಲಗೊಳಿಸಿದರು. ಬಸ್ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿತ್ತು.

ADVERTISEMENT

ನಸುಕಿನ 5 ಗಂಟೆಯಿಂದಲೇ ಚಟುವಟಿಕೆಯಿಂದ ಕೂಡಿರುತ್ತಿದ್ದ ಬಸ್‌ ನಿಲ್ದಾಣ ಮುಷ್ಕರದ ಅಂಗವಾಗಿ ಭಣಗುಡುತ್ತಿತ್ತು. ಬಹುತೇಕ ನೌಕರರು ಸೇವೆಗೆ ಹಾಜರಾಗದ ಪರಿಣಾಮ ಬಸ್‌ಗಳು ಸೇವೆ ಒದಗಿಸಲು ಸಜ್ಜಾಗಲಿಲ್ಲ. ಒಪ್ಪಂದದ ಮೇರೆಗೆ ಸೇವೆ ಒದಗಿಸುತ್ತಿರುವ ಎಲೆಕ್ಟ್ರಿಕ್‌ ಬಸ್‌ಗಳು ಮಾತ್ರ ಎಂದಿನಂತೆ ಸೇವೆ ನೀಡಿದವು. ನಿಗದಿತ ಸಮಯಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದವು. ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಂತೆ ಕೆಲ ಬಸ್‌ಗಳು ಸೇವೆಗೆ ಸಜ್ಜಾದವು.

‘ದಾವಣಗೆರೆ ವಿಭಾಗದಲ್ಲಿ 411 ಬಸ್‌ಗಳಿದ್ದು, 1,232 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ 220 ಜನರು ಮಂಗಳವಾರ ಕರ್ತವ್ಯಕ್ಕೆ ಹಾಜರಿದ್ದಾಗಿದ್ದರು. ಮುಷ್ಕರ ಘೋಷಣೆಯಾಗುತ್ತಿದ್ದಂತೆ ರಜೆಗಳನ್ನು ರದ್ದುಪಡಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಗುತ್ತಿಗೆ ಆಧಾರದಲ್ಲಿ ಕಾರ್ಯರ್ವಹಿಸುತ್ತಿರುವ ಎಲ್ಲ 58 ನೌಕರರು ಕರ್ತವ್ಯ ನಿರ್ವಹಿಸಿದರು. ಜಿಲ್ಲೆಯ 156 ಮಾರ್ಗಗಳಲ್ಲಿ 80 ಮಾರ್ಗಗಳಲ್ಲಿ ಬಸ್‌ ಸೇವೆ ಒದಗಿಸಲಾಗಿದೆ. ಸಂಜೆ 4ರ ವರೆಗೆ 244 ಬಸ್‌ಗಳಲ್ಲಿ 106 ಬಸ್‌ ಸೇವೆ ಒದಗಿಸಿವೆ’ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ಮಾಹಿತಿ ನೀಡಿವೆ.

ಹರಿಹರ, ಹೊನ್ನಾಳಿ, ಸಂತೆಬೆನ್ನೂರು, ಜಗಳೂರು ಸೇರಿದಂತೆ ಜಿಲ್ಲೆಯ ಹಲವು ಭಾಗಗಳಿಗೆ ಬಸ್‌ ಸಂಚಾರ ಕಂಡುಬಂದಿತು. ದಾವಣಗೆರೆ ನಗರದಲ್ಲಿ ಸಂಚರಿಸುತ್ತಿದ್ದ 58 ನಗರ ಸಾರಿಗೆ ಬಸ್‌ಗಳಲ್ಲಿ 15 ಬಸ್‌ಗಳು ಮಾತ್ರ ಸೇವೆ ಒದಗಿಸಿದವು. ವಿಭಾಗೀಯ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹವಾಗುತ್ತಿದ್ದ ₹ 75ರಿಂದ 80 ಲಕ್ಷ ಆದಾಯದಲ್ಲಿ ಬಹುತೇಕ ಖೋತಾ ಆಯಿತು.

ಸಾರಿಗೆ ಮುಷ್ಕರವು ವಿದ್ಯಾರ್ಥಿಗಳ ಮೇಲೆ ಹೆಚ್ಚು ಪರಿಣಾಮ ಬೀರಿದಂತೆ ಕಂಡುಬಂದಿತು. ಶಾಲೆ–ಕಾಲೇಜುಗಳಿಗೆ ರಜೆ ಇರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರದಾಡಿದರು. ಬಸ್‌ ಲಭ್ಯವಾಗದ ಕಾರಣಕ್ಕೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮನೆಗೆ ಮರಳಿದರು. ಇದರಿಂದ ಶಾಲೆ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ ಇತ್ತು.

ತವರು ಮನೆಯಿಂದ ಬೆಂಗಳೂರಿಗೆ ಮರಳಲು ಬಸ್‌ ನಿಲ್ದಾಣಕ್ಕೆ ಬಂದೆ. ಸಾರಿಗೆ ಮುಷ್ಕರದ ಬಗ್ಗೆ ಮಾಹಿತಿ ಇರಲಿಲ್ಲ. ಎಲೆಕ್ಟ್ರಿಕ್‌ ಖಾಸಗಿ ಬಸ್‌ಗಳಲ್ಲಿ ‘ಶಕ್ತಿ’ ಯೋಜನೆಯ ಸೇವೆ ಸಿಗುತ್ತಿಲ್ಲ.
– ಸಹನಾ, ಬೆಂಗಳೂರು

ಸಾರಿಗೆ ಬಸ್‌ಗಳಿಗೆ ಪರ್ಯಾಯವಾಗಿ ಖಾಸಗಿ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಸೇವೆ ಒದಗಿಸಲು ಖಾಸಗಿ ಬಸ್‌ಗಳಿಗೆ ಅನುಮತಿ ನೀಡಲಾಗಿತ್ತು. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಖಾಸಗಿ ಬಸ್‌ಗಳು ಸಂಚರಿಸಿದವು. ದಿನವಿಡೀ ಹೀಗೆ 42 ಖಾಸಗಿ ಬಸ್‌ಗಳು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಸೇವೆ ಒದಗಿಸಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಶ್ರಾವಣ ಮಾಸದಲ್ಲಿ ಉಕ್ಕಡಗಾತ್ರಿಯ ಕರಿಬಸವೇಶ್ವರಸ್ವಾಮಿ ದರ್ಶನ ಪಡೆಯುವುದು ವಾಡಿಕೆ. ಪೂಜಾ ಕೈಂಕರ್ಯ ಮುಗಿಸಿ ಮಂಗಳವಾರ ಊರಿಗೆ ಮರಳಲು ತೊಂದರೆ ಉಂಟಾಯಿತು.
– ನರಸಮ್ಮ, ಚಿತ್ರದುರ್ಗ
ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರದಿಂದಾಗಿ ದಾವಣಗೆರೆಯ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಮಂಗಳವಾರ ಬಿಕೋ ಎನ್ನುತ್ತಿತ್ತು –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರದಿಂದಾಗಿ ದಾವಣಗೆರೆಯ ಬಸ್ ನಿಲ್ದಾಣದಲ್ಲಿ ಸೇವೆಗೆ ಸಜ್ಜಾಗದೇ ನಿಂತಿದ್ದ ಬಸ್‌ಗಳು –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರದಿಂದಾಗಿ ಬಸ್‌ ಸೇವೆ ಲಭ್ಯವಾಗದೇ ದಾವಣಗೆರೆ ನಿಲ್ದಾಣದಲ್ಲಿ ಮಗುವಿನ ಕೈಹಿಡಿದು ಭಾರವಾದ ಚೀಲ ಹೊತ್ತ ಪ್ರಯಾಣಿಕರು ಖಾಸಗಿ ಬಸ್‌ ಹುಡುಕುತ್ತಾ ಸಾಗಿದ ದೃಶ್ಯ –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರದಿಂದಾಗಿ ಖಾಸಗಿ ಬಸ್‌ಗಳು ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಸೇವೆ ಒದಗಿಸಿದವು. ಖಾಸಗಿ ಬಸ್‌ಗಳಿಗೆ ಪ್ರಯಾಣಿಕರು ಮುಗಿಬಿದಿದ್ದು ಕಂಡುಬಂದಿತು–ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ದಾವಣಗೆರೆಯ ರೈಲ್ವೆ ನಿಲ್ದಾಣದ ಬಳಿ ಅಪರೂಪಕ್ಕೊಮ್ಮೆ ಆಗಮಿಸಿದ ಕೆಎಸ್‌ಆರ್‌ಟಿಸಿ ಬಸ್‌ಗೆ ಪ್ರಯಾಣಿಕರು ಮುಗಿಬಿದ್ದ ಪರಿ –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.