ದಾವಣಗೆರೆ: ಜಿಲ್ಲೆಯ ಚನ್ನಗಿರಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ಡಿಪೊ ನಿರ್ಮಾಣವಾಗಿ 11 ತಿಂಗಳು ಕಳೆದರೂ ಉದ್ಘಾಟನೆಯಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸ್ಥಳೀಯ ಶಾಸಕ ಬಸವರಾಜು ವಿ. ಶಿವಗಂಗಾ ನಡುವಿನ ಮುಸುಕಿನ ಗುದ್ದಾಟದಲ್ಲಿ ನೂತನ ಘಟಕ ನನೆಗುದಿಗೆ ಬಿದ್ದಿದೆ.
ಚನ್ನಗಿರಿ ಸಮೀಪದ ಅಜ್ಜಿಹಳ್ಳಿಯ 3 ಎಕರೆ 32 ಗುಂಟೆ ಪ್ರದೇಶದಲ್ಲಿ ₹ 8 ಕೋಟಿ ವೆಚ್ಚದಲ್ಲಿ ನೂತನ ಡಿಪೊ ನಿರ್ಮಿಸಲಾಗಿದೆ. ಕಾಮಗಾರಿ ಪೂರ್ಣಗೊಂಡು ಹಸ್ತಾಂತರವಾಗಿದೆ. ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿ ಕಡ್ಡಾಯ. ಆದರೆ, ಉಸ್ತುವಾರಿ ಸಚಿವರು ಮತ್ತು ಶಾಸಕರ ದಿನಾಂಕ ಹೊಂದಾಣಿಕೆಯಾಗದೇ ಡಿಪೊ ಉದ್ಘಾಟನೆಗೆ ಕಾಲ ಕೂಡಿ ಬರುತ್ತಿಲ್ಲ.
ಹೊಸದಾಗಿ ಪ್ರಾರಂಭವಾಗಲಿರುವ ಚನ್ನಗಿರಿ ಡಿಪೊಗೆ 207 ಸಿಬ್ಬಂದಿಯನ್ನು ನಿಯೋಜಿಸಿ ಕೆಎಸ್‌ಆರ್‌ಟಿಸಿ ಆ. 1ರಂದು ಆದೇಶಿಸಿದೆ. ಡೀಸೆಲ್ ಬಂಕ್ ಕೂಡ ಆ. 25ರಿಂದ ಸಜ್ಜಾಗಿದೆ. ಪೂರ್ವ ನಿಗದಿಯಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆ.30ರಂದು ಮಧ್ಯಾಹ್ನ 3ಕ್ಕೆ ಡಿಪೊ ಉದ್ಘಾಟಿಸಬೇಕಿತ್ತು. ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗ ಸಿದ್ಧತೆ ಮಾಡಿಕೊಂಡಿತ್ತು. ಕೊನೆಯ ಗಳಿಗೆಯಲ್ಲಿ ಕಾರ್ಯಕ್ರಮ ರದ್ದಾಯಿತು.
ದಶಕದ ಹೋರಾಟ: 272 ಗ್ರಾಮಗಳನ್ನು ಹೊಂದಿರುವ ಚನ್ನಗಿರಿ ತಾಲ್ಲೂಕು ಶಿವಮೊಗ್ಗ–ಚಿಕ್ಕಮಗಳೂರು–ಚಿತ್ರದುರ್ಗ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಸ್ಥಳ. ಚನ್ನಗಿರಿ ಪಟ್ಟಣದ ಮೂಲಕ ನಿತ್ಯ ನೂರಾರು ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾದುಹೋಗುತ್ತವೆ. ಕೆಎಸ್‌ಆರ್‌ಟಿಸಿ ಬಸ್ ಡಿಪೊಗೆ ಒತ್ತಾಯಿಸಿ ದಶಕದಿಂದ ನಡೆದ ಹೋರಾಟದ ಪರಿಣಾಮವಾಗಿ 2022ರಲ್ಲಿ ಮಂಜೂರಾತಿ ಸಿಕ್ಕಿತ್ತು. ಡಿಪೊ ನಿರ್ಮಾಣ ಕಾಮಗಾರಿ 2024ರ ಅಕ್ಟೋಬರ್‌ನಲ್ಲಿ ಪೂರ್ಣಗೊಂಡಿದೆ.
‘40 ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ ಒಪ್ಪಿಗೆ ನೀಡಿದೆ. ಡಿಪೊ ಉದ್ಘಾಟನೆ ಆಗದೇ ಬಸ್ ಸೇವೆ ಲಭ್ಯವಾಗುತ್ತಿಲ್ಲ. ಡಿಪೊ ಉದ್ಘಾಟಿಸುವಂತೆ ಶಾಸಕರು, ಉಸ್ತುವಾರಿ ಸಚಿವರು, ಸಾರಿಗೆ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಆಷಾಢದ ಬಳಿಕ ಘಟಕ ಉದ್ಘಾಟನೆ ಮಾಡುವುದಾಗಿ ಕೆಎಸ್‌ಆರ್‌ಟಿಸಿ ಮುಖ್ಯ ಎಂಜಿನಿಯರ್ ಜುಲೈನಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಆದರೂ, ಡಿಪೊ ಸಾರ್ವಜನಿಕರ ಸೇವೆಗೆ ಲಭ್ಯವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಚನ್ನಗಿರಿ ತಾಲ್ಲೂಕಿನ ದೊಡ್ಡಘಟ್ಟ ಗ್ರಾಮದ ಎಸ್.ರಂಗಸ್ವಾಮಿ.
ಚನ್ನಗಿರಿ ಡಿಪೊಗೆ ಚಾಲನೆ ನೀಡುವಂತೆ ಕೋರಿ ರೈತ ಸಂಘದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಚೆಗೆ ಮನವಿ ಸಲ್ಲಿಸಿದ್ದರು. ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರಿಗೂ ಸಾರ್ವಜನಿಕರು ಅಹವಾಲು ಸಲ್ಲಿಸಿದ್ದರು. ಲೋಕಾರ್ಪಣೆಗೊಳ್ಳದ ಡಿಪೊದ ಬಣ್ಣ ದಿನಕಳೆದಂತೆ ಹೊಳಪು ಕಳೆದುಕೊಳ್ಳುತ್ತಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಂಪರ್ಕಕ್ಕೆ ಸಿಗಲಿಲ್ಲ.
ಸಚಿವ–ಶಾಸಕರಲ್ಲಿಲ್ಲ ಹೊಂದಾಣಿಕೆ
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಬಸವರಾಜು ವಿ. ಶಿವಗಂಗಾ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಬಹಿರಂಗವಾಗಿದೆ. ಪರಸ್ಪರ ಆರೋಪ–ಪ್ರತ್ಯಾರೋಪ ಮಾಡಿಕೊಂಡಿದ್ದು ಗುಟ್ಟಾಗಿ ಉಳಿದಿಲ್ಲ. ‘ಆಡಳಿತಾತ್ಮಕ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿರುವ ಸಚಿವ ಮಲ್ಲಿಕಾರ್ಜುನ್ ಅವರನ್ನು ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆಯಿಂದ ಬದಲಾಯಿಸಿ’ ಎಂದು ಶಾಸಕ ಬಸವರಾಜು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಡಿಸೆಂಬರ್‌ನಲ್ಲಿ ಪತ್ರ ಬರೆದಿದ್ದರು. ‘ಸರಿಯಾಗಿ ವರ್ತಿಸುವುದು ಹಿರಿಯರಿಗೆ ಗೌರವ ಕೊಡುವುದನ್ನು ಬಸವರಾಜು ಕಲಿಯಲಿ’ ಎಂದು ಸಚಿವ ಮಲ್ಲಿಕಾರ್ಜುನ್ ತಿರುಗೇಟು ನೀಡಿದ್ದರು. ಈ ಬೆಳವಣಿಗೆಯ ಬಳಿಕ ಹೊಂದಾಣಿಕೆಯ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.
ವರ್ಗಾವಣೆಯಾಗಿ ಬಂದು ವಾರ ಕಳೆದಿದೆ. ಹಲವು ಸಂಗತಿಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಚನ್ನಗಿರಿ ಡಿಪೊಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶೀಘ್ರವೇ ಉದ್ಘಾಟನೆ ಆಗಲಿದೆಬಿ.ಎಸ್. ಶಿವಕುಮಾರಯ್ಯ, ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ
ನನ್ನ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಊರಲ್ಲಿಲ್ಲದ ಕಾರಣಕ್ಕೆ ಆ.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ದಿನಾಂಕಕ್ಕೆ ಕಾಯುತ್ತಿದ್ದೇವೆಬಸವರಾಜು ವಿ., ಶಿವಗಂಗಾ ಶಾಸಕ ಚನ್ನಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.