
ದಾವಣಗೆರೆ: ನಗರದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಜಲಮೂಲಗಳಲ್ಲಿ ಒಂದಾಗಿರುವ ಕುಂದುವಾಡ ಕೆರೆಗೆ ಇನ್ನು ಕೆಲವೇ ದಿನಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾಗಳ ಕಣ್ಗಾವಲು ಹಾಗೂ ಭದ್ರತಾ ಸಿಬ್ಬಂದಿಯ ಕಾವಲು ದೊರೆಯಲಿದೆ.
ಈಚೆಗೆ ಮೀನು ಹಿಡಿಯಲೆಂದು ರಾತ್ರಿ ವೇಳೆ ಕೆರೆಗೆ ಇಳಿದು ಮೀನಿನ ಬಲೆಗೆ ಸಿಲುಕಿ ಹೊರಬರಲಾರದೇ ಇಬ್ಬರು ಯುವಕರು ಮೃತಪಟ್ಟಿದ್ದರು. ಈ ದುರ್ಘಟನೆಯಿಂದ ಎಚ್ಚೆತ್ತಿಕೊಂಡಿರುವ ಮಹಾನಗರ ಪಾಲಿಕೆಯು ಮುಂದಿನ ದಿನಗಳಲ್ಲಿ ಆಗಬಹುದಾದ ಅವಘಡಗಳನ್ನು ತಪ್ಪಿಸಲು ಹಾಗೂ ಕುಡಿಯುವ ನೀರು ಕಲುಷಿತವಾಗದಂತೆ ತಡೆಗಟ್ಟಲು ಸುರಕ್ಷತಾ ಕ್ರಮಕ್ಕೆ ಮುಂದಾಗಿದೆ.
ಕುಂದುವಾಡ ಕೆರೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದ ಕಾರಣಕ್ಕೆ ‘ದಾವಣಗೆರೆ ಸ್ಮಾರ್ಟ್‌ಸಿಟಿ’ಯು ಕೆರೆಯ ನಿರ್ವಹಣೆಯ ಜವಾಬ್ದಾರಿ ಹೊತ್ತಿತ್ತು. ಕೆರೆಯ ಬಳಿ ಭದ್ರತಾ ಸಿಬ್ಬಂದಿಯಾಗಲೀ, ಸಿ.ಸಿ. ಟಿವಿ ಕ್ಯಾಮೆರಾಗಳಾಗಲೀ ಇರಲಿಲ್ಲ. ಈ ಕಾರಣಕ್ಕೆ ಕೆರೆಯ ಬಳಿ ಅವಘಡಗಳು ಸಂಭವಿಸಿದರೂ, ನಿಖರ ಕಾರಣ ತಿಳಿಯುತ್ತಿರಲಿಲ್ಲ.
ಈಚೆಗೆ ಸ್ಮಾರ್ಟ್‌ಸಿಟಿಯು ಕುಂದುವಾಡ ಕೆರೆಯನ್ನು ಮಹಾನಗರ ಪಾಲಿಕೆಯ ಅಧೀನಕ್ಕೆ ಒಪ್ಪಿಸಿದೆ. ಇಬ್ಬರು ಯುವಕರು ಕೆರೆಯಲ್ಲಿ ಮೃತಪಟ್ಟ ಬಳಿಕ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಎಂಜಿನಿಯರ್‌ಗಳು ಭಾಗವಹಿಸಿದ್ದರು. ಈ ಕೆರೆಯ ಸಂರಕ್ಷಣೆಯ ನಿಟ್ಟಿನಲ್ಲಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
252 ಎಕರೆ ವ್ಯಾಪ್ತಿ:
ಕುಂದುವಾಡ ಕೆರೆಯು 252 ಎಕರೆ ವ್ಯಾಪ್ತಿ ಹೊಂದಿದೆ. ಕೆರೆಯ ಸುತ್ತಲೂ 4–5 ಕಿ.ಮೀ. ವಾಯುವಿಹಾರ ಪಥ ಇದೆ. ವ್ಯಾಯಾಮ ಉಪಕರಣಗಳೂ ಇವೆ. ಕೆರೆಯ ಪ್ರವೇಶ ಹಾಗೂ ನಿರ್ಗಮನ ಸ್ಥಳ ಸೇರಿದಂತೆ ಮೂರು ಪಾಯಿಂಟ್‌ಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ.
ಈ ಮೂರು ಪಾಯಿಂಟ್‌ಗಳಲ್ಲೂ 24x7 ಭದ್ರತಾ ಸಿಬ್ಬಂದಿ ನಿಯೋಜನೆ, ಕೆರೆ ಹಾಗೂ ದಡದಲ್ಲಿನ ಕಳೆ (ಹುಲ್ಲು) ತೆಗೆಯಲು ಗಾರ್ಡನರ್ ನೇಮಕಕ್ಕೂ ನಿರ್ಧರಿಸಲಾಗಿದೆ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಉದಯಕುಮಾರ್ ಎಂ.ಎಚ್ ತಿಳಿಸಿದರು.
ಶುಲ್ಕ ವಿಧಿಸುವ ಚಿಂತನೆ:
ಕೆರೆಯ ನೀರನ್ನು ಕುಡಿಯಲು ಬಳಸುತ್ತಿರುವ ಕಾರಣಕ್ಕೆ ಕೆರೆಯಲ್ಲಿ ಯಾವುದೇ ರೀತಿಯ ಜಲ ಕ್ರೀಡೆಗಳನ್ನು ನಡೆಸಲು ಸಾಧ್ಯವಿಲ್ಲ. ಹೀಗಾಗಿ ಕೆರೆಯಿಂದ ಯಾವುದೇ ಆರ್ಥಿಕ ಸಂಪನ್ಮೂಲವನ್ನು ನಿರೀಕ್ಷಿಸಲಾಗುತ್ತಿಲ್ಲ. ಪೂರ್ಣ ಪ್ರಮಾಣದಲ್ಲಿ ಪಾಲಿಕೆಯೇ ಅನುದಾನ ಒದಗಿಸಲೂ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಕೆರೆಯ ನಿರ್ವಹಣೆಗೆ ಸಾರ್ವಜನಿಕರ ಸಹಯೋಗ ಪಡೆಯುವ ಚಿಂತನೆ ಇದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಸುಂದರ ಪರಿಸರದ ಕಾರಣ ಕುಂದವಾಡ ಕೆರೆಯು ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ. ಕುಂದುವಾಡ ಕೆರೆಯ ದಡದಲ್ಲಿ ನಿತ್ಯವೂ ನೂರಾರು ಜನ ವಾಯುವಿಹಾರ ಹಾಗೂ ವ್ಯಾಯಾಮದಲ್ಲಿ ತೊಡಗುತ್ತಾರೆ. ಅವರಿಗೆ ತಿಂಗಳಿಗೆ ಕನಿಷ್ಠ ₹ 30 ಶುಲ್ಕ ವಿಧಿಸುವುದು ಹಾಗೂ ಕುಂದುವಾಡ ಕೆರೆ ವೀಕ್ಷಣೆಗೆ ಬರುವವರಿಗೆ ₹ 5 ಪ್ರವೇಶ ಶುಲ್ಕ ವಿಧಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಮಾತ್ರವಲ್ಲದೇ ಕೆರೆಯ ನಿಗದಿತ ಸ್ಥಳದಲ್ಲಿ ಸಿಮೆಂಟ್ ಆಸನಗಳನ್ನು ಅಳವಡಿಸಲು ದಾನಿಗಳಿಗೆ ಅವಕಾಶ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ವಿವರಿಸಿದರು.
ಕುಂದುವಾಡ ಕೆರೆ ಸುತ್ತ ಸಿ.ಸಿ.ಟಿವಿ ಕ್ಯಾಮೆರಾ ಅಳವಡಕೆ ಭದ್ರತಾ ಸಿಬ್ಬಂದಿ ನೇಮಿಸಲು ನಿರ್ಧರಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಇವರೆಡೂ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ.ರೇಣುಕಾ ಆಯುಕ್ತರು ಮಹಾನಗರ ಪಾಲಿಕೆ
ಜಾಕ್‌ವೆಲ್‌ನಲ್ಲಿ ಚಪ್ಪಲಿ ನಿರುಪಯುಕ್ತ ವಸ್ತುಗಳು! ನಗರಕ್ಕೆ ಕುಡಿಯುವ ನೀರು ಪೂರೈಸುವಲ್ಲಿ ಕುಂದುವಾಡ ಕೆರೆಯಷ್ಟೇ ಟಿ.ವಿ. ಸ್ಟೇಷನ್ ಕೆರೆಯ ಪಾತ್ರವೂ ಬಹುಮುಖ್ಯ. ಟಿ.ವಿ. ಸ್ಟೇಷನ್ ಕೆರೆಯ ಜಾಕ್‌ವೆಲ್‌ನ ಒಳಗಡೆ ಇರುವ ನೀರಿನಲ್ಲಿ ಚಪ್ಪಲಿ ಖಾಲಿ ವಾಟರ್ ಬಾಟಲಿಗಳು ಹಾಗೂ ಇನ್ನಿತರ ನಿರುಪಯುಕ್ತ ವಸ್ತುಗಳು ಬಿದ್ದಿವೆ. ಮಾತ್ರವಲ್ಲದೇ ಪಕ್ಷಿಯೊಂದು ಸತ್ತು ಬಿದ್ದಿದೆ. ಜಾಕ್‌ವೆಲ್‌ಗೆ ತೆರಳುವ ಮಾರ್ಗದಲ್ಲಿರುವ ಗೇಟ್ ತೆರೆದುಕೊಂಡಿದೆ. ಮುಚ್ಚಲು ಸಾಧ್ಯವಾಗದ ಸ್ಥಿತಿಗೆ ಅದು ತಲುಪಿದೆ. ಯಾರು ಬೇಕಾದರೂ ಸುಲಭವಾಗಿ ಒಳ ಪ್ರವೇಶಿಸಬಹುದಾಗಿದೆ. ಹೀಗಾಗಿ ಕೆಲ ಕಿಡಿಗೇಡಿಗಳು ಜಾಕ್‌ವೆಲ್ ಸ್ಥಳಕ್ಕೆ ತೆರಳಿ ಗೋಡೆಯ ಮೇಲೆ ಅಸಹ್ಯವಾಗಿ ಬರೆಯುವುದು ನೀರಿನಲ್ಲಿ ನಿರುಪಯುಕ್ತ ವಸ್ತುಗಳನ್ನು ಬಿಸಾಡುವಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ. ‘ಜಾಕ್‌ವೆಲ್‌ನಲ್ಲಿನ ವಸ್ತುಗಳನ್ನು ತೆಗೆದುಹಾಕಿ ಯಾರೊಬ್ಬರೂ ಒಳಗಡೆ ಪ್ರವೇಶಿಸಲು ಸಾಧ್ಯವಾಗದ ರೀತಿ ಕ್ರಮ ಕೈಗೊಳ್ಳಬೇಕು’ ಎಂದು ಬೆಳಿಗ್ಗೆ ಕೆರೆಯ ದಡದಲ್ಲಿ ನಡಿಗೆಯಲ್ಲಿ ತೊಡಗಿದ್ದ ನಾಗರಿಕರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.