ADVERTISEMENT

ಏತ ನೀರಾವರಿ ಯೋಜನೆಡಿ 4 ಕೆರೆಗಳಿಗೆ ಶೀಘ್ರ ನೀರು

ಜಗಳೂರು: ₹ 5.10 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 7:01 IST
Last Updated 21 ಡಿಸೆಂಬರ್ 2025, 7:01 IST
ಜಗಳೂರು ತಾಲ್ಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಶಾಸಕ ಬಿ. ದೇವೇಂದ್ರಪ್ಪ ಅವರು ಶನಿವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು
ಜಗಳೂರು ತಾಲ್ಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಶಾಸಕ ಬಿ. ದೇವೇಂದ್ರಪ್ಪ ಅವರು ಶನಿವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು   

ಜಗಳೂರು: ತುಂಗಭದ್ರಾ ನದಿಯಿಂದ ತಾಲ್ಲೂಕಿನ 57 ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯಡಿ ಶೀಘ್ರ ಮಾಗಡಿ, ಅಗಸನಹಳ್ಳಿ, ಮಡ್ರಹಳ್ಳಿ, ಬಸವನಕೋಟೆ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಶಾಸಕ ಬಿ. ದೇವೇಂದ್ರಪ್ಪ ಭರವಸೆ ನೀಡಿದರು.

ತಾಲ್ಲೂಕಿನ ಸೊಕ್ಕೆ ಗ್ರಾಮದ ಹಳ್ಳದಲ್ಲಿ ₹ 2.10 ಕೋಟಿ ವೆಚ್ಚದ ಚೆಕ್ ಡ್ಯಾಂ, ಸಿದ್ದಯ್ಯನ ಕೋಟೆ ಗ್ರಾಮದಲ್ಲಿ ₹ 50 ಲಕ್ಷ ವೆಚ್ಚದ ವಾಲ್ಮೀಕಿ ಭವನ, ಹಳ್ಳದಲ್ಲಿ ₹ 2.50 ಕೋಟಿ ವೆಚ್ಚದ ಚೆಕ್ ಡ್ಯಾಂ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕೊಂಡುಕುರಿ ಅಭಯಾರಣ್ಯದ ನಡುವೆ ಪೈಪ್‌ಲೈನ್ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ತಾಂತ್ರಿಕ ಸಮಸ್ಯೆ ಎದುರಾಗಿದ್ದ ಕಾರಣ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಅರಣ್ಯ ಸಚಿವ ಈಶ್ವರಖಂಡ್ರೆ ಬಳಿ ಈ ಬಗ್ಗೆ ಚರ್ಚಿಸಿದ್ದು, ಶೀಘ್ರ ಸಮಸ್ಯೆ ಬಗೆಹರಿದು ನಾಲ್ಕು ಕೆರೆಗಳು ಮೈದುಂಬಲಿವೆ’ ಎಂದರು.

ADVERTISEMENT

‘ಸಿದ್ದಯ್ಯನಕೋಟೆ ಗ್ರಾಮದಲ್ಲಿ ₹ 3 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಗ್ರಾಮಕ್ಕೆ ₹ 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿಪಡಿಸಿದ ತೃಪ್ತಿಯಿದೆ. ಮಧ್ಯೆಯೂ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಲಾಗಿದ್ದು ಕ್ಷೇತ್ರದ ಅಭಿವೃದ್ಧಿ ಪರ್ವ ನಡೆಯುತ್ತಿದೆ’ ಎಂದು ಬಣ್ಣಿಸಿದರು.

ಸೊಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಮ್ಮ, ಬಸವನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮರಿಯಮ್ಮ, ಉಪಾಧ್ಯಕ್ಷೆ ನಗೀನಬಾನು, ಸದಸ್ಯರಾದ ಜೋತಿರ್ಲಿಂಗಪ್ಪ, ರಾಜು, ಲಲಿತಮ್ಮ, ತಾಲ್ಲೂಕು ಪಂ‌ಚಾಯಿತಿ ಇಒ ಕೆಂಚಪ್ಪ, ಸಣ್ಣ ನೀರಾವರಿ ಇಲಾಖೆ ಎಇಇ ಪ್ರವೀಣ್, ನಿರ್ಮಿತಿ ಕೇಂದ್ರ ಎಇಇ ಮಹಾಂತೇಶ್, ರಾಘವೇಂದ್ರ, ರುದ್ರಮುನಿ, ರಜಿತ್, ಪಿಡಿಒಗಳಾದ ವಿರೂಪಾಕ್ಷಿ, ಶಿವಕುಮಾರ್, ಮುಖಂಡರಾದ ಬಿ. ಮಹೇಶ್ವರಪ್ಪ, ಮಡ್ರಹಳ್ಳಿ ಗಿರೀಶ್, ಟೀಪುಸಾಬ್, ಹನುಮಂತಪ್ಪ, ಇರ್ಫಾನ್, ಶಿಕ್ಷಕ ಸಿದ್ದೇಶ್, ಪಲ್ಲಾಗಟ್ಟೆ ಶೇಖರಪ್ಪ ಇದ್ದರು‌.

ಖಾಲಿಕೊಡ ಹಿಡಿದು ನೀರಿಗಾಗಿ ಅಳಲು: ಸಿದ್ದಯ್ಯನಕೋಟೆ ಗ್ರಾಮದ ಮಹಿಳೆಯರು ಖಾಲಿ ಕೊಡಗಳೊಂದಿಗೆ ಶಾಸಕರ ಎದುರು ನೀರಿಗಾಗಿ ಅಳಲು ತೋಡಿಕೊಂಡರು.

‘ಗ್ರಾಮಗಳಲ್ಲಿ ಯಾವುದೇ ಸಮಸ್ಯೆ ಇದ್ದರೂ ಯಾವುದೇ ಸಮಯದಲ್ಲಿ ನನಗೇ ನೇರವಾಗಿ ಕರೆ ಮಾಡಿ. ನೀರಿನ ಸಮಸ್ಯೆಯನ್ನು ವಾರದೊಳಗೆ ಇತ್ಯರ್ಥ ಪಡಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.