ADVERTISEMENT

ಸೋಂಕು ಪ್ರಕರಣಗಳ ಹೆಚ್ಚಳ, ಹರಿಹರದಲ್ಲಿ ನಾಳೆಯಿಂದ ಮತ್ತೆ ಲಾಕ್‍ಡೌನ್‍

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 14:20 IST
Last Updated 24 ಜೂನ್ 2020, 14:20 IST
ಹರಿಹರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಶಾಸಕ ಎಸ್‍. ರಾಮಪ್ಪ ನೇತೃತ್ವದಲ್ಲಿ ಬುಧವಾರ ಅಧಿಕಾರಿಗಳ ಹಾಗೂ ವರ್ತಕರ ಸಭೆ ನಡೆಯಿತು
ಹರಿಹರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಶಾಸಕ ಎಸ್‍. ರಾಮಪ್ಪ ನೇತೃತ್ವದಲ್ಲಿ ಬುಧವಾರ ಅಧಿಕಾರಿಗಳ ಹಾಗೂ ವರ್ತಕರ ಸಭೆ ನಡೆಯಿತು   

ಹರಿಹರ:ನಗರದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೂ. 25 ರಿಂದ ಔಷಧ ಅಂಗಡಿಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ವ್ಯಾಪಾರ-ವಹಿವಾಟುಗಳನ್ನು ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರ ವರೆಗೆ ನಡೆಸಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಗಿದೆ ಎಂದು ಶಾಸಕ ಎಸ್. ರಾಮಪ್ಪ ತಿಳಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕೋವಿಡ್‍-19 ತಡೆಗಾಗಿ ಬುಧವಾರ ನಡೆದ ಅಧಿಕಾರಿಗಳ ಹಾಗೂ ವರ್ತಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವರ್ತಕರ ಸಂಘ ಹಾಗೂ ವ್ಯಾಪಾರಿಗಳ ಸಲಹೆಯಂತೆ ಕೊರೊನಾ ಸೋಂಕು ತಡೆಗಾಗಿ ಔಷಧ ಹಾಗೂ ಆಸ್ಪತ್ರೆಗಳನ್ನು ಹೊರತುಪಡಿಸಿ ಮದ್ಯದಂಗಡಿ, ದಿನಸಿ, ತರಕಾರಿ, ಹಣ್ಣು ಸೇರಿ ಎಲ್ಲಾ ರೀತಿಯ ವ್ಯವಹಾರಗಳನ್ನು ಬೆಳಿಗ್ಗೆ 8 ರಿಂದ ಮಧ‍್ಯಾಹ್ನ 2ರ ವರೆಗೆ ಮಾತ್ರ ನಡೆಸುವಂತೆ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ನಗರದಲ್ಲಿ ಕೋವಿಡ್‍ ಪ್ರಕರಣಗಳು ಹರಡದಂತೆ ತಡೆಯಲು ಅಧಿಕಾರಿಗಳು ಸರ್ವ ಪ್ರಯತ್ನ ನಡೆಸಿದ್ದಾರೆ. ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲಿಸುವ ಜತೆಗೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲಿಸುವ ಮೂಲಕ ಸಹಕರಿಸಬೇಕು. ನಗರದ ಅಗಸರ ಬೀದಿ ಹಾಗೂ ಪರಿಶಿಷ್ಟ ಕಾಲೊನಿಗಳನ್ನು ಸೀಲ್‍ಡೌನ್‍ ಮಾಡಲಾಗಿದೆ. ಈ ಪ್ರದೇಶಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಹಾಗೂ ಭದ್ರತೆಗೆ ಕ್ರಮ ಜರುಗಿಸಲಾಗಿದೆ. ಮದುವೆ ಹಾಗೂ ಶುಭ ಸಮಾರಂಭಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದರು.

ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ‘ನಗರದಲ್ಲಿ ಕೊರೊನಾ ಸೋಂಕಿನ 12 ಪ್ರಕರಣಗಳು ಧೃಡಪಟ್ಟಿವೆ. ಸೋಂಕಿತರು ವಾಸಿಸಿರುವ ಪ್ರದೇಶಗಳನ್ನು ಸೀಲ್‍ಡೌನ್‍ ಮಾಡಲಾಗಿದೆ. ಈ ಪ್ರದೇಶಗಳ ಉಸ್ತುವಾರಿಗೆ ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ’ ಎಂದು ತಿಳಿಸಿದರು.

ನಗರಸಭೆ ಸದಸ್ಯ ಶಂಕರ್‌ ಖಟಾವಕರ್‌, ಪೌರಾಯುಕ್ತೆ ಎಸ್‍. ಲಕ್ಷ್ಮೀ, ಸಿಪಿಐ ಶಿವಪ್ರಸಾದ್‍, ಪಿಎಸ್‍ಐ ಶೈಲಜಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಮೋಹನ್, ಮುಖಂಡರಾದ ಶಿವಪ್ರಕಾಶ್ ಶಾಸ್ತ್ರೀ, ಮಾಲತೇಶ ಭಂಡಾರಿ, ವರ್ತಕರು ಹಾಗೂ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.