ದಾವಣಗೆರೆ: ಒಳಮೀಸಲಾತಿಯನ್ನು ಕಲ್ಪಿಸದೇ 56 ಸಾವಿರ ಹುದ್ದೆಗಳ ಭರ್ತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಣಯವನ್ನು ವಿರೋಧಿಸಿ ಮಾರ್ಚ್ 6ರಂದು ದಾವಣಗೆರೆ ಬಂದ್ ನಡೆಸಲು ಮಾದಿಗ ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ.
ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಈ ಬಗ್ಗೆ ಭಾನುವಾರ ಸಭೆ ನಡೆಯಿತು. ಬಂದ್ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.
‘ಮಾದಿಗ ಸಮುದಾಯದ ಪ್ರತಿನಿಧಿಗಳು (ಶಾಸಕರು, ಸಚಿವರು) ಸದನದಲ್ಲಿ ಒಳ ಮೀಸಲಾತಿ ಪರ ಗಟ್ಟಿಯಾಗಿ ಮಾತನಾಡದಿರುವುದು ಸರಿಯಲ್ಲ. ಸರ್ಕಾರದ ಕಿವಿ ಹಿಂಡಿ, ಒಳಮೀಸಲಾತಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಒತ್ತಾಯಿಸಬೇಕು’ ಎಂದು ಮುಖಂಡ ಆಲೂರು ನಿಂಗರಾಜು ಆಗ್ರಹಿಸಿದರು.
‘ಒಳ ಮೀಸಲಾತಿ ಮಾದಿಗ ಸಮುದಾಯದ ಹಕ್ಕು. ಶಿಕ್ಷಣ, ಉದ್ಯೋಗಕ್ಕಾಗಿ ಮಾದಿಗ ಸಮುದಾಯದವರು ಮೂರೂವರೆ ದಶಕದಿಂದ ನಿರಂತರ ಹೋರಾಟ ನಡೆಸಿದೆ. ಸುಪ್ರೀಂ ಕೋರ್ಟ್‌ನ ಆದೇಶದಂತೆ ರಾಜ್ಯ ಸರ್ಕಾರವು ಒಳ ಮೀಸಲಾತಿ ಕಲ್ಪಿಸಿದ ನಂತರವೇ 56 ಸಾವಿರ ಹುದ್ದೆಗಳ ಭರ್ತಿಗೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.
‘ಮಾದಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ದಲಿತ ಪರ, ಮಾದಿಗ ಪರ ಸಂಘಟನೆಗಳ ಮುಖಂಡರ ನೇತೃತ್ವದ ಹೋರಾಟವು ಪಕ್ಷಾತೀತವಾಗಿ ನಡೆಯಲಿದ್ದು, ಎಲ್ಲಾ ಪಕ್ಷಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹೋರಾಟವನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
‘ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಇಲ್ಲದೇ, ನೇಮಕಾತಿ ನಡೆಸಬಾರದು. ನಮ್ಮ ಸಮುದಾಯದ ಸಚಿವರು, ಶಾಸಕರು ಸರ್ಕಾರದ ಮೇಲೆ ಈ ಬಗ್ಗೆ ಒತ್ತಡ ಹೇರುವ ಮೂಲಕ ಒಳ ಮೀಸಲಾತಿ ಜಾರಿಗಾಗಿ ಶ್ರಮಿಸಬೇಕು’ ಎಂದು ಆಗ್ರಹಿಸಿದರು.
ಮಾದಿಗ ಸಮುದಾಯದ ನಾಯಕರಾದ ಪ್ರೊ.ಎಚ್.ವಿಶ್ವನಾಥ್, ಎಂ.ಹಾಲೇಶ್, ಎಚ್.ಸಿ.ಗುಡ್ಡಪ್ಪ, ಪಾಲಿಕೆ ಮಾಜಿ ಸದಸ್ಯ ಎಂ.ಹಾಲೇಶ್, ಕಡತಿ ಅಂಜಿನಪ್ಪ, ಎಚ್.ಮಲ್ಲೇಶ, ಉಚ್ಚಂಗಿ ಪ್ರಸಾದ, ರಾಘವೇಂದ್ರ ಕಡೇಮನಿ, ನಿಂಗರಾಜ ಚಿಕ್ಕನಹಳ್ಳಿ, ಕುಂದುವಾಡ ಮಂಜುನಾಥ, ಕೆಟಿಜೆ ನಗರ ಎಂ.ರವಿಕುಮಾರ, ಟಿ.ರವಿಕುಮಾರ ಸೇರಿದಂತೆ ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು.