ADVERTISEMENT

ದಾವಣಗೆರೆ | ದಾಂಪತ್ಯ ಜೀವನಕ್ಕೆ 21 ಜೋಡಿ

ದುರ್ಗಾಂಬಿಕಾ ದೇಗುಲದಲ್ಲಿ ಸಾಮೂಹಿಕ ವಿವಾಹ, ವಧು–ವರರನ್ನು ಹರಸಿದ ಸಂಸದೆ–ಸಚಿವ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 6:37 IST
Last Updated 4 ಅಕ್ಟೋಬರ್ 2025, 6:37 IST
ದಾವಣಗೆರೆಯ ದುರ್ಗಂಬಿಕಾ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಓಂಕಾರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಇದ್ದಾರೆ –ಪ್ರಜಾವಾಣಿ ಚಿತ್ರ
ದಾವಣಗೆರೆಯ ದುರ್ಗಂಬಿಕಾ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಓಂಕಾರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ಬಾಸಿಂಗ ಧರಿಸಿದ ವಧು–ವರರ ಕಣ್ಣುಗಳಲ್ಲಿ ಹೊಸ ಜೀವನದ ಬೆಳಕು ಕಾಣುತ್ತಿತ್ತು. ಗರಿಗರಿ ಬಟ್ಟೆ ತೊಟ್ಟು ಕೊರಳಿಗೆ ಹೂಮಾಲೆ ಹಾಕಿಕೊಂಡಿದ್ದ ಜೋಡಿ ಮಾಂಗಲ್ಯ ಧಾರಣೆಗೆ ಕಾತುರರಾಗಿದ್ದರು. ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡುತ್ತಿದ್ದಂತೆ ಎಲ್ಲರ ಮೊಗ ಅರಳಿದವು.

ಇಲ್ಲಿನ ದುರ್ಗಾಂಬಿಕಾ ದೇಗುಲದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹದಲ್ಲಿ ಕಂಡುಬಂದ ದೃಶ್ಯಗಳಿವು. ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ ನವರಾತ್ರಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಈ ಕಲ್ಯಾಣದಲ್ಲಿ 21 ಜೋಡಿ ವಧು–ವರರು ಕೌಟುಂಬಿಕ ಜೀವನಕ್ಕೆ ಕಾಲಿಟ್ಟರು.

‘ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಮಹತ್ತರ ಘಟ್ಟ. ಹೊಸ ಬದುಕು, ಮನೆಯನ್ನು ಮಹಿಳೆ ಪ್ರವೇಶ ಮಾಡುತ್ತಾಳೆ. ದಾಂಪತ್ಯದಲ್ಲಿ ಪರಸ್ಪರ ಗೌರವ, ಪ್ರೀತಿ, ನಂಬಿಕೆ ಇರಲಿ. ವಿಜಯದಶಮಿ ಹಬ್ಬದ ಬನ್ನಿಯ ರೀತಿಯಲ್ಲಿ ಬದುಕು ಕೂಡ ಬಂಗಾರವಾಗಲಿ’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಭಿಪ್ರಾಯಪಟ್ಟರು.

ADVERTISEMENT

‘ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಪೇಕ್ಷೆಯಂತೆ ದೇಗುಲ ಟ್ರಸ್ಟ್‌ 20 ವರ್ಷಗಳಿಂದ ಸಾಮೂಹಿಕ ವಿವಾಹವನ್ನು ಉಚಿತವಾಗಿ ಆಯೋಜಿಸುತ್ತಿದೆ. ಮದುವೆ ಹೆಸರಿನಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಸರಳ ಮತ್ತು ಸಾಮೂಹಿಕ ವಿವಾಹಕ್ಕೆ ಪ್ರೋತ್ಸಾಹ ನೀಡಬೇಕಿದೆ. ಮುಂದಿನ ವರ್ಷ ಇನ್ನೂ ಹೆಚ್ಚಿನ ಜನರು ಸಾಮೂಹಿಕ ವಿವಾಹದ ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.

ಆವರಗೊಳ್ಳ ಪುರುವರ್ಗಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ‘ಕುಟುಂಬದಲ್ಲಿ ವಾದ, ವಿರೋಧ ಹಾಗೂ ಹಗೆತನ ಇರಬಾರದು. ಇವುಗಳಿಂದ ದೂರವಿದ್ದು ಬದುಕು ಕಟ್ಟಿಕೊಂಡರೆ ವೈವಾಹಿಕ ಜೀವನ ಅರ್ಥಪೂರ್ಣ. ಇಂತಹ ಆದರ್ಶದ ಬದುಕು ನಿಮ್ಮದಾಗಲಿ’ ಎಂದು ಹರಸಿದರು.

ವಿವಾಹ ಕಾರ್ಯಕ್ರಮದ ಬಳಿಕ ಮಹಿಳೆಯರು ಕಳಸ ಹೊತ್ತು ಮೆರವಣಿಗೆ ನಡೆಸಿದರು. ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಸ್ಮರಣಾರ್ಥ ಅನ್ನಸಂತರ್ಪಣೆ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಮೇಯರ್‌ ಎಚ್.ಬಿ. ಗೋಣೆಪ್ಪ, ಪ್ರವಚನಕಾರ ಸಿದ್ದೇಶ್ವರ ಮರಿಕಟ್ಟೆ, ಉಮೇಶ್‍ರಾವ್ ಸಾಳಂಕಿ, ಹನುಮಂತರಾವ್ ಸಾವಂತ್, ಬಡಗಿ ರಾಮಕೃಷ್ಣ, ಸೊಪ್ಪಿನ ಗುರುರಾಜ್, ಹನುಮಂತ ಜಾಧವ್, ಶಂಕರರಾವ್ ಸಿಂಧೆ, ಮುದೇಗೌಡರ ವಿಶ್ವನಾಥ ಹಾಜರಿದ್ದರು.

ನವರಾತ್ರಿ ಉತ್ಸವದ ಅಂಗವಾಗಿ ಆಯೋಜನೆ ಸರಳ ಮದುವೆಗೆ ಸಲಹೆ ನೀಡಿದ ಸಂಸದೆ ಆದರ್ಶ ದಂಪತಿಗಳಂತೆ ಬದುಕಲು ಕಿವಿಮಾತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.