ADVERTISEMENT

ಬಾಣಂತಿಯರ ಮರಣ ಪ್ರಮಾಣದಲ್ಲಿ ಇಳಿಕೆ

ಹೊರ ಜಿಲ್ಲೆಗಳೊಂದಿಗೆ ಸಮನ್ವಯ, ಆರೋಗ್ಯ ಇಲಾಖೆಯ ಪ್ರಯತ್ನಕ್ಕೆ ಪ್ರತಿಫಲ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 4:17 IST
Last Updated 20 ಜನವರಿ 2026, 4:17 IST
<div class="paragraphs"><p>ಬಾಣಂತಿ ಮತ್ತು ನವಜಾತ ಶಿಶುಗಳು</p></div>

ಬಾಣಂತಿ ಮತ್ತು ನವಜಾತ ಶಿಶುಗಳು

   

ದಾವಣಗೆರೆ: ಜಿಲ್ಲೆಯಲ್ಲಿ ಬಾಣಂತಿಯರ ಮರಣ ಪ್ರಮಾಣ ಇಳಿಕೆಯತ್ತ ಸಾಗುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡೆಸಿದ ಪ್ರಯತ್ನ ಕೈಗೂಡಲಾರಂಭಿಸಿದೆ. ಹೆರಿಗೆ ಸಂದರ್ಭದಲ್ಲಿ ಸಂಭವಿಸುವ ತಾಯಿಯ ಮರಣ ದರವನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ.

2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 16 ಜನ ಬಾಣಂತಿಯರು ಹೆರಿಗೆ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 6 ದಾವಣಗೆರೆ, 4 ಚಿತ್ರದುರ್ಗ, 4 ವಿಜಯನಗರ ಹಾಗೂ ಒಬ್ಬರು ಹಾವೇರಿ ಜಿಲ್ಲೆಯವರಾಗಿದ್ದಾರೆ. 2024ರ ಏಪ್ರಿಲ್‌ನಿಂದ 2025ರ ಮಾರ್ಚ್‌ವರೆಗೆ ಜಿಲ್ಲೆಯಲ್ಲಿ 35 ಜನ ಬಾಣಂತಿಯರು ಮೃತಪಟ್ಟಿದ್ದರು.

ADVERTISEMENT

ಕಳೆದ ಆರ್ಥಿಕ ವರ್ಷದಲ್ಲಿ ಬಾಣಂತಿಯರು ಸಾವಿಗೀಡಾದ ಬೆಳವಣಿಗೆಯಿಂದ ಜಿಲ್ಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ವೈದ್ಯಕೀಯ ಸೇವೆ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಗರ್ಭಿಣಿ, ಬಾಣಂತಿ ಮತ್ತು ನವಜಾತ ಶಿಶುಗಳ ತುರ್ತು ವೈದ್ಯಕೀಯ ಸೇವೆಯಲ್ಲಿ ಸುಧಾರಣೆ ತಂದಿದೆ.

ಏರ್ಪಟ್ಟ ಸಮನ್ವಯ: 

‘ದಾವಣಗೆರೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ಬೇರೆ ಜಿಲ್ಲೆಗಳ ಜನರೂ ವೈದ್ಯಕೀಯ ಸೇವೆ ಪಡೆಯುತ್ತಾರೆ. ಇದರಲ್ಲಿ ಹೆರಿಗೆ ಉದ್ದೇಶಕ್ಕೆ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆ ಅಧಿಕ. ನೆರೆಯ ಚಿತ್ರದುರ್ಗ, ವಿಜಯನಗರ, ಹಾವೇರಿ ಜಿಲ್ಲೆಗಳ ವಿವಿಧೆಡೆಯ ಗರ್ಭಿಣಿಯರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ದಾಖಲಾಗುತ್ತಾರೆ. ತುರ್ತು ಸಂದರ್ಭದಲ್ಲಿ ಬರುವ ಇವರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ತಾಯಿ– ಶಿಶು ಮರಣ ಪ್ರಮಾಣ ದರ ಹೆಚ್ಚಾಗಿತ್ತು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌. ಷಣ್ಮುಖಪ್ಪ ವಿವರಿಸಿದರು.

ಇದನ್ನು ಮನಗಂಡ ಜಿಲ್ಲಾಡಳಿತ ನಾಲ್ಕು ಜಿಲ್ಲೆಗಳ ನಡುವೆ ಸಮನ್ವಯ ತರಲು ಪ್ರಯತ್ನಿಸಿತು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಹೊರ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ವಾಟ್ಸ್‌ಆಪ್‌ ಗ್ರೂಪ್‌ ರಚಿಸಿದ್ದರು. ತುರ್ತು ಸಂದರ್ಭದಲ್ಲಿ ಹೆರಿಗೆಗೆ ಶಿಫಾರಸ್ಸಾಗಿ ಬರುವ ಗರ್ಭಿಣಿಯರ ಬಗ್ಗೆ ಇಲ್ಲಿ ಮಾಹಿತಿ ಹಂಚಿಕೊಳ್ಳಲಾಗುತ್ತಿತ್ತು. ಗರ್ಭಿಣಿಯನ್ನು ದಾವಣಗೆರೆಯ ಆಸ್ಪತ್ರೆಗೆ ಕರೆತರುವ ಹೊತ್ತಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅನುಕೂಲವಾಗಿದೆ. ಇದರಿಂದ ಬಹುತೇಕ ಬಾಣಂತಿಯರನ್ನು ರಕ್ಷಿಸಲಾಗಿದೆ ಎಂಬುದು ಆರೋಗ್ಯ ಇಲಾಖೆಯ ವಿಶ್ಲೇಷಣೆ.

ಸರಾಸರಿ ಸಾವಿರ ಹೆರಿಗೆ:

ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳು ಸರಾಸರಿ 1,000 ಹೆರಿಗೆ ಆಗುತ್ತಿವೆ. ಡಿಸೆಂಬರ್‌ ತಿಂಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ 467 ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 523 ಹೆರಿಗೆಗಳಾಗಿವೆ. ಹರಿಹರ, ಜಗಳೂರು, ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರಸೂತಿಗೆ ಉತ್ತಮ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಮಾಸಿಕ 100 ಹೆರಿಗೆಗಳು ಆಗುತ್ತಿವೆ.

‘24X7 ಕಾರ್ಯ ನಿರ್ವಹಿಸುವ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 4 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರಸೂತಿ ಸೇವೆ ಲಭ್ಯವಿದೆ. ಶುಶ್ರೂಷಕಿಯರಿಗೂ ಅಗತ್ಯ ತರಬೇತಿ ನೀಡಲಾಗಿದ್ದು, ತುರ್ತು ಸಂದರ್ಭದಲ್ಲಿ ಪ್ರಸೂತಿ ಸೇವೆ ನೀಡುವ ಕೌಶಲ ಹೊಂದಿದ್ದಾರೆ. ಅರಿವಳಿಕೆ, ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಬಾಣಂತಿಯರ ಮರಣ ಪ್ರಮಾಣ ತಗ್ಗಿಸಲು ಇದು ಕೂಡ ಕಾರಣ’ ಎಂದು ವಿವರಿಸುತ್ತಾರೆ ಷಣ್ಮುಖಪ್ಪ.

ಡಾ.ಎಸ್‌. ಷಣ್ಮುಖಪ್ಪ
ಬಾಣಂತಿಯರ ಮರಣ ಪ್ರಮಾಣ ರಾಜ್ಯದ ಇತರೆಡೆಗಿಂತ ಕಡಿಮೆ ಇದೆ. ಗರ್ಭಿಣಿಯರ ಆರೋಗ್ಯ ತಪಾಸಣೆ ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ. ಸಾವಿನ ಪ್ರಕರಣಗಳನ್ನು ವಿಶ್ಲೇಷಿಸಲಾಗುತ್ತಿದೆ
ಡಾ.ಎಸ್‌. ಷಣ್ಮುಖಪ್ಪ ಜಿಲ್ಲಾ ಆರೋಗ್ಯಾಧಿಕಾರಿ

ತಗ್ಗದ ನವಜಾತ ಶಿಶು ಮರಣ

ಬಾಣಂತಿಯರ ಮರಣ ಪ್ರಮಾಣ ತಗ್ಗಿದ್ದರೂ ನವಜಾತ ಶಿಶು ಮರಣ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ತಗ್ಗಿಲ್ಲ. 2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ 224 ನವಜಾತ ಶಿಶುಗಳು ಮೃತಪಟ್ಟಿವೆ. ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ 333 ಶಿಶುಗಳು ಮರಣ ಹೊಂದಿದ್ದವು. ಅವಧಿ ಪೂರ್ವ ಹೆರಿಗೆ ಸಂದರ್ಭದಲ್ಲಿ ಎದುರಾದ ಆರೋಗ್ಯ ಸಮಸ್ಯೆ ಹಾಗೂ ಉಸಿರಾಟದ ತೊಂದರೆ ಸೇರಿದಂತೆ ಹಲವು ಕಾರಣಗಳಿಗೆ ನವಜಾತ ಶಿಶುಗಳು ಪ್ರಾಣ ತೆತ್ತಿವೆ. ತುರ್ತು ಸಂದರ್ಭದಲ್ಲಿ ವೈದ್ಯಕೀಯ ನೆರವು ಸಿಗದೇ ಸಾವುಗಳು ಸಂಭವಿಸುತ್ತಿವೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.