ADVERTISEMENT

ಮಾಯಕೊಂಡ: ತರಕಾರಿಗೆ ಬೈ.. ಹಿಂಗಾರು ರಾಗಿ ಬೆಳೆಗೆ ಜೈ...

ದರ ಏರಿಳಿತಕ್ಕೆ ಬೇಸತ್ತ ರೈತ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:22 IST
Last Updated 1 ಜನವರಿ 2026, 7:22 IST
ಮಾಯಕೊಂಡ ಗ್ರಾಮದ ನೂತನ್ ಎಂ.ವಿ ರೈತನ ಜಮೀನಿನಲ್ಲಿ ರಾಗಿ ಬೆಳೆ ಸೊಂಪಾಗಿ ಬೆಳೆದಿರುವುದು 
ಮಾಯಕೊಂಡ ಗ್ರಾಮದ ನೂತನ್ ಎಂ.ವಿ ರೈತನ ಜಮೀನಿನಲ್ಲಿ ರಾಗಿ ಬೆಳೆ ಸೊಂಪಾಗಿ ಬೆಳೆದಿರುವುದು    

ಮಾಯಕೊಂಡ: ತರಕಾರಿ ಬೆಳೆಗಳಿಗೆ ಹೆಸರುವಾಸಿಯಾದ ಈ ಭಾಗದಲ್ಲಿ ನಿರೀಕ್ಷಿತ ಬೆಲೆ ಸಿಗದ ಕಾರಣ ರೈತರು ಈ ಬಾರಿ ತರಕಾರಿ ಬೆಳೆಯಿಂದ ವಿಮುಖರಾಗಿ ರಾಗಿ ಬೆಳೆಯತ್ತ ಹೊರಳಿದ್ದಾರೆ.

ದಾವಣಗೆರೆ ತಾಲ್ಲೂಕಿನ ಮಾಯಕೊಂಡ, ಆನಗೋಡು, ಅಣಜಿ ಹೋಬಳಿಗಳ ಹೆಚ್ಚಿನ ಸಂಖ್ಯೆಯ ರೈತರು‌ ಬೇಸಿಗೆ ಬೆಳೆಯಾಗಿ ತರಕಾರಿ ಬೆಳೆ ಬೆಳೆಯುತ್ತಿದ್ದರು. ಆದರೆ, ಮೂರು ವರ್ಷಗಳಿಂದ ತರಕಾರಿ ದರದಲ್ಲಿ ಏರಿಳಿತ ಉಂಟಾಗಿದ್ದರಿಂದ ಪೆಟ್ಟು ತಿಂದ ರೈತರು ಪರ್ಯಾಯವಾಗಿ ರಾಗಿ ಬೆಳೆಯಲು ಮುಂದಾಗಿದ್ದಾರೆ. ಈಗಾಗಲೇ ಬಿತ್ತನೆ ಕಾರ್ಯ ಬಹುತೇಕ ಮುಗಿದಿದ್ದು, ಕೊಳವೆ ಬಾವಿಗಳ ಮೂಲಕ ನೀರುಣಿಸುತ್ತಿದ್ದಾರೆ.

ಮೆಕ್ಕೆಜೋಳ ಬೆಳೆದ ನಂತರ ಯಾವ ಬೆಳೆ ಬೆಳೆಯಬೇಕು ಎಂಬ ಯೋಚನೆಯಲ್ಲಿದ್ದ ರೈತರಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಹಾಗೂ ನಿರೀಕ್ಷಿತ ಆದಾಯ‌ ತರುತ್ತಿರುವ ರಾಗಿ ಬೆಳೆ ಕೈ ಹಿಡಿಯುತ್ತಿದೆ. ಕಳೆದ ಮೂರು ವರ್ಷಗಳಿಂದ ರಾಗಿ ಬಿತ್ತನೆಯತ್ತ ರೈತರು ಆಸಕ್ತಿ ಹೆಚ್ಚಿಸಿಕೊಂಡಿದ್ದಾರೆ.

ADVERTISEMENT

ಇದರ ಪರಿಣಾಮ, ಮುಂಗಾರಿನಲ್ಲಿ 1,170 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ‌ ಬಿತ್ತನೆಯಾಗಿದೆ. ಹಿಂಗಾರು ಬಿತ್ತನೆಯಲ್ಲಿ ಕಳೆದ ವರ್ಷ 1,200 ಹೆಕ್ಟೇರ್‌ ಬಿತ್ತನೆಯಾಗಿತ್ತು. ಈ ವರ್ಷ ಈಗಾಗಲೇ 1,457 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಬರೀ ಮೂರು ತಿಂಗಳು ಸಲಹಿದರೆ ಬೆಳೆ ಕೈಸೇರುತ್ತದೆ ಎಂಬ ಭರವಸೆ ರೈತರಲ್ಲಿದೆ.

ಮೊದಲೆಲ್ಲ ರಾಗಿ ಬಿತ್ತನೆಗೆ ಭೂಮಿ ಸಿದ್ಧತೆ, ಬಿತ್ತನೆ, ಎಡೆಕುಂಟೆ, ಕಳೆ, ಗೊಬ್ಬರ, ಕಟಾವು, ಒಕ್ಕಣೆ ಸೇರಿ ಸಂಪೂರ್ಣ ಬೆಳೆ ಮುಗಿಯುವ ವೇಳೆಗೆ ಒಂದು ಎಕರೆ ರಾಗಿ ಬೆಳೆಯಲು ₹ 20,000 ಖರ್ಚು ಬರುತ್ತಿತ್ತು. ಈಗ ಸಂಪೂರ್ಣ ಯಾಂತ್ರೀಕರಣದಿಂದಾಗಿ ₹ 15,000ದ ಒಳಗೆ ಖರ್ಚು ಬರುತ್ತದೆ. ಜೊತೆಗೆ ರಾಗಿ ಹುಲ್ಲಿಗೆ ಬೇಡಿಕೆ ಹೆಚ್ಚುತ್ತಿದ್ದು, ಪ್ರತಿ ಪೆಂಡಿ ಹುಲ್ಲಿಗೆ ಅಂದಾಜು ₹ 250ರಂತೆ ಖರೀದಿಸುತ್ತಿದ್ದು, ಬೆಳೆ ಬೆಳೆದ ಖರ್ಚೆಲ್ಲ ಹುಲ್ಲು ಮಾರಿದರೆ ವಾಪಸ್‌ ಸಿಗುತ್ತದೆ. ಆದ್ದರಿಂದ ಈಗ ರಾಗಿ ಬೆಳೆ ಸುಲಭವಾಗಿದೆ ಎಂದು ರೈತರು ಹೇಳಿದ್ದಾರೆ.

ಈ ಬಾರಿ ಮೆಕ್ಕೆಜೋಳ ಕಟಾವು ಮಾಡಿದ ನಂತರ ಮೂರು ಎಕರೆಯಲ್ಲಿ ರಾಗಿ ಬಿತ್ತನೆ ಮಾಡಿದ್ದೇನೆ. ಇನ್ನೆರಡು ತಿಂಗಳು ನಿರ್ವಹಣೆ ಮಾಡಿದರೆ ಫಸಲು ಕೈಗೆ ಬರುವ ನಿರೀಕ್ಷೆ ಇದೆ
– ಹಾಲೇಶ್ ಎಚ್.ಆರ್, ರೈತ
ಈ ಬಾರಿ ತಾಲ್ಲೂಕಿನಲ್ಲಿ 1457 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಬಿತ್ತಲಾಗಿದೆ. ರೈತರು ಯಂತ್ರಗಳಿಗೆ ಇಲಾಖೆಯಿಂದ ನೆರವು ಪಡೆದು ಉತ್ತಮ‌ ಬೆಳೆ‌ ಬೆಳೆದು ಹೆಚ್ಚು ಲಾಭ ಪಡೆಯಬೇಕು
– ಶ್ರೀಧರ್ ಮೂರ್ತಿ, ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.