ADVERTISEMENT

ಮಾಯಕೊಂಡ | ಹಿಂಗಾರು ಕಟಾವು ಆರಂಭ: ರೈತರ ಕೈ ಹಿಡಿದ ರಾಗಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:49 IST
Last Updated 3 ಮಾರ್ಚ್ 2026, 2:49 IST
ಮಾಯಕೊಂಡ ಸಮೀಪದ ಜಮೀನೊಂದರಲ್ಲಿ ಯಾಂತ್ರಿಕೃತವಾಗಿ ರಾಗಿ ಕಟಾವು ಮಾಡುತ್ತಿರುವುದು.
ಮಾಯಕೊಂಡ ಸಮೀಪದ ಜಮೀನೊಂದರಲ್ಲಿ ಯಾಂತ್ರಿಕೃತವಾಗಿ ರಾಗಿ ಕಟಾವು ಮಾಡುತ್ತಿರುವುದು.   

ಮಾಯಕೊಂಡ: ಸಮೃದ್ಧವಾಗಿ ಬೆಳೆದು ನಿಂತಿರುವ ರಾಗಿ ಬೆಳೆ ಒಣಗಿ ಕಟಾವಿಗೆ ಬಂದಿದ್ದು, ಯಂತ್ರಗಳ‌ ಮೂಲಕ ಕಟಾವು ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ. 

ಮಾಯಕೊಂಡ, ಆನಗೋಡು, ಅಣಜಿ ಹೋಬಳಿಗಳ ಬಹುತೇಕ ಹಳ್ಳಿಗಳ ರೈತರು ಈ ಬಾರಿ ಮೆಕ್ಕೆಜೋಳ ಬೆಳೆ ಬೆಳೆದ ನಂತರ ರಾಗಿ ಬಿತ್ತನೆ ಮಡಿದ್ದರು. ಕಡಿಮೆ ಖರ್ಚಿನ, ನಿರೀಕ್ಷಿತ ಆದಾಯ‌ ತರುತ್ತಿರುವ ರಾಗಿ ಬೆಳೆ ರೈತರ ಕೈ ಹಿಡಿದಿದೆ. ಈಗಾಗಲೇ ಕಟಾವು ಯಂತ್ರಗಳು ರಾಗಿ ಜಮೀನುಗಳಲ್ಲಿ ಸದ್ದು ಮಾಡುತ್ತಿದ್ದು, ರೈತರಿಗೆ ರಾಗಿ ಕೊಯ್ಲು, ಸಾಗಣೆ, ಒಕ್ಕಣೆ, ತೂರುವ ಕಷ್ಟ ಇಲ್ಲದಂತಾಗಿದೆ.

ದಾವಣಗೆರೆ ತಾಲ್ಲೂಕಿನಲ್ಲಿ ಈ ವರ್ಷ ಹಿಂಗಾರು ಹಂಗಾಮಿನಲ್ಲಿ 1,457 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದ್ದು, ಮೂರು ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ರೈತರಿಗೆ ಬೆಳೆ ಕೈಸೇರುತ್ತಿದೆ. ಮೊದಲೆಲ್ಲ ರಾಗಿ ಬಿತ್ತನೆಗೆ ಭೂಮಿ ಸಿದ್ಧತೆ, ಬಿತ್ತನೆ, ಎಡೆಕುಂಟೆ, ಕಳೆ, ಗೊಬ್ಬರ, ಕಟಾವು, ಒಕ್ಕಣೆ ಸೇರಿ ಸಂಪೂರ್ಣ ಬೆಳೆ ಮುಗಿಯುವ ವೇಳೆಗೆ ಒಂದು ಎಕರೆ ರಾಗಿ ಬೆಳೆಯಲು ₹ 20,000ಕ್ಕೂ ಹೆಚ್ಚು ಖರ್ಚು ಬರುತ್ತಿತ್ತು. ಈಗ ಸಂಪೂರ್ಣ ಯಾಂತ್ರೀಕರಣದಿಂದ ಬೆಳೆ ಬೆಳೆಯಲು ₹ 15,000 ಖರ್ಚು ತಗಲುತ್ತದೆ. ರಾಗಿ ಪ್ರತಿ ಕ್ವಿಂಟಲ್‌ಗೆ ₹ 3,500ರಿಂದ ₹ 3,800 ದರ ಇದ್ದು, ರೈತರಿಗೆ ಲಾಭ ತರುತ್ತಿದೆ.

ADVERTISEMENT

ಜೊತೆಗೆ ರಾಗಿ ಹುಲ್ಲಿಗೆ ಬೇಡಿಕೆ ಹೆಚ್ಚುತ್ತಿದ್ದು, ಪೆಂಡಿ ಕಟ್ಟಿದ್ದ ಹುಲ್ಲಿಗೆ ಅಂದಾಜು ₹ 250ರಿಂದ ₹ 300ರಂತೆ ಖರೀದಿಸುತ್ತಿದ್ದು, ಬೆಳೆ ಬೆಳೆದ ಖರ್ಚೆಲ್ಲ ಹುಲ್ಲಿನಲ್ಲಿಯೇ ಬರುತ್ತದೆ. ಆದ್ದರಿಂದ ಈಗ ರಾಗಿ ಬೆಳೆ ಸುಲಭವಾಗಿದೆ ಎಂಬುದು ರೈತರ ಅಭಿಪ್ರಾಯ.  

ಹುಲ್ಲು ಪೆಂಡಿ ಕಟ್ಟುವ ಯಂತ್ರಗಳನ್ನು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ನೀಡಲಾಗುತ್ತಿದ್ದು ಹುಲ್ಲು ಒಟ್ಟುಗೂಡಿಸಲು ಬಣವೆ ಹಾಕಲು ಬೇಕಾಗುತ್ತಿದ್ದ ಕೂಲಿ ಆಳುಗಳ ಸಮಸ್ಯೆ ತಗ್ಗುತ್ತದೆ 
ಬೀರಪ್ಪ ಕೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಾಯಕೊಂಡ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.