ಮಾಯಕೊಂಡ: ಹತ್ತಾರು ಗ್ರಾಮಗಳಿಗೆ ಸಂಪರ್ಕ ಸಾಧಿಸುವ, ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನವಾಗಿರುವ ಮಾಯಕೊಂಡದಲ್ಲಿ ಸುಸಜ್ಜಿತ ಬಸ್ ನಿಲ್ದಾಣವೇ ಇಲ್ಲ.
ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಮಾಯಕೊಂಡದಲ್ಲಿ ಪೊಲೀಸ್ ಠಾಣೆ, ನಾಡಕಚೇರಿ, ಪಿಯುಸಿ, ಪ್ರಥಮ ದರ್ಜೆ ಕಾಲೇಜು, ಬ್ಯಾಂಕ್, ಕೃಷಿ ಇಲಾಖೆ, ಆಸ್ಪತ್ರೆ, ಐತಿಹಾಸಿಕ ರಾಜ ಹಿರೇಮದಕರಿ ನಾಯಕರ ಸಮಾಧಿ ಸ್ಥಳ ಇದೆ. ಹೀಗಾಗಿ ನಿತ್ಯ ನೂರಾರು ಜನ ಇಲ್ಲಿ ಬಂದು ಹೋಗುತ್ತಾರೆ. ಅತಿ ಅಗತ್ಯವಿರುವ ಬಸ್ ನಿಲ್ದಾಣವೇ ಇಲ್ಲದಿರುವುದರಿಂದ ಪ್ರಯಾಣಿಕರು ರಸ್ತೆ ಬದಿಯಲ್ಲಿ ನಿಂತು ಬಸ್‌ಗಳಿಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ.
ಒಂದೇ ಗ್ರಾಮದ ಹದಿನೈದು ಸದಸ್ಯರನ್ನು ಹೊಂದಿರುವ ದೊಡ್ಡ ಗ್ರಾಮ ಪಂಚಾಯಿತಿ ಇದಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಒಂದು ಸುಸಜ್ಜಿತ ಬಸ್ ನಿಲ್ದಾಣ ಇಲ್ಲದಂತಾಗಿದೆ. ಇದರಿಂದ ನಿತ್ಯ ಗ್ರಾಮದ ಶಾಲೆ– ಕಾಲೇಜುಗಳಿಗೆ ಬರುವ, ದೂರದ ದಾವಣಗೆರೆಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ತೆರಳುವ ಜನರ ಸಂಕಷ್ಟ ಹೇಳತೀರದಾಗಿದೆ.
ಪ್ರಯಾಣಿಕರು ಬಿಸಿಲು, ಮಳೆಯನ್ನು ಲೆಕ್ಕಿಸದೇ ರಸ್ತೆ ಬದಿಯಲ್ಲಿ ನಿಂತು, ಕಾದು ಬಸ್‌ಗಳನ್ನು ಹತ್ತಬೇಕಿದೆ. ಬಸ್‌ಗಳು ನಡುರಸ್ತೆಯಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಇದೆ. ಇದರಿಂದ ಇತರ ವಾಹನಗಳ ಸಂಚಾರಕ್ಕೂ ಕಿರಿಕಿರಿ ಉಂಟಾಗುತ್ತಿದೆ.
ಮಾಜಿ ಶಾಸಕ ಪ್ರೊ.ಎನ್.ಲಿಂಗಣ್ಣ ಅವರ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆಂದು ಸರ್ಕಾರಿ ಬಾಲಕರ ಶಾಲೆಯ ಮೈದಾನದ ಅಂದಾಜು ಒಂದು ಎಕರೆಯಷ್ಟು ಜಾಗವನ್ನು ಗ್ರಾಮ ಪಂಚಾಯಿತಿಯಿಂದ ಉಚಿತವಾಗಿ ನೀಡಲಾಗಿತ್ತು. ಆದರೆ ಇಲ್ಲಿಯವರೆಗೂ ಬಸ್ ನಿಲ್ದಾಣ ತಲೆ ಎತ್ತಿಲ್ಲ.
ಹಳೆಯ ಶಾಲಾ ಕಟ್ಟಡ ಸಂಪೂರ್ಣ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿನ ಚಪ್ಪಡಿ ಕಲ್ಲು, ಕಬ್ಬಿಣದ ಪೈಪ್‌ಗಳು ಕಳ್ಳರ ಪಾಲಾಗಿವೆ. ತುರ್ತಾಗಿ ಹಳೆಯ ಶಾಲಾ ಕಟ್ಟಡ ಕೆಡವಿ, ನಿವೇಶನದ ಸುತ್ತ ಕಾಂಪೌಂಡ್ ನಿರ್ಮಿಸಿ, ಬಸ್‌ಗಳ ನಿಲುಗಡೆಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.
ದಾವಣಗೆರೆಯಿಂದ ಹೊಳಲ್ಕೆರೆ, ಹೊಸದುರ್ಗಕ್ಕೆ ಸಾಕಷ್ಟು ಬಸ್‌ಗಳಿವೆ. ಇಲ್ಲಿ ಬಸ್ ನಿಲ್ದಾಣ ಇಲ್ಲದೆ ಇರುವುದರಿಂದ ಅವು ಗ್ರಾಮದೊಳಗೆ ಬರುವುದಿಲ್ಲ. ಇದರಿಂದ ಪ್ರಯಾಣಿಕರಿಗೆ ಕಾಯುವ ಶಿಕ್ಷೆ ತಪ್ಪುತ್ತಿಲ್ಲ. ನಿಗಮದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.
ಮಾಜಿ ಶಾಸಕ ಪ್ರೊ.ಎನ್. ಲಿಂಗಣ್ಣ ಅವರ ಅವಧಿಯಲ್ಲಿ ಕೆಎಸ್ಆರ್‌ಟಿಸಿ ನಿಲ್ದಾಣಕ್ಕೆ ನಿವೇಶನ ಹಸ್ತಾಂತರ ಮಾಡಲಾಗಿತ್ತು. ನೀಲನಕ್ಷೆಯೂ ಸಿದ್ಧವಾಗಿತ್ತು. ಆದರೆ ಕಾಮಗಾರಿ ಮಾತ್ರ ನಡೆಯಲಿಲ್ಲ.ಎಂ.ಜಿ. ಗುರುನಾಥ ಗ್ರಾಮದ ಮುಖಂಡ
ಶಾಸಕರು ಶೀಘ್ರವೇ ಗ್ರಾಮದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಅನುದಾನ ನೀಡಿ ಕಾಮಗಾರಿ ಪ್ರಾರಂಭಿಸಬೇಕು. ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕುನಾಗರಾಜ ಉಪ್ಪಾರ್ ಗ್ರಾಮದ ಯುವಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.