ADVERTISEMENT

ದಾವಣಗೆರೆ| ಪಟಾಕಿ ಕಿಡಿಗೆ ಹೊತ್ತಿ ಉರಿದ ಮೆಡಿಕಲ್‌ ಗೋದಾಮು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 5:28 IST
Last Updated 25 ಅಕ್ಟೋಬರ್ 2022, 5:28 IST
ದಾವಣಗೆರೆಯ ಮೈಸೂರು ಮೆಡಿಕಲ್ ಬಯೋ ಕೆಮಿಕಲ್ ಏಜೆನ್ಸಿಯ ಎರಡನೇ ಮಹಡಿಯಲ್ಲಿ ಬೆಂಕಿ ಅವಘಡ ಉಂಟಾಯಿತು
ದಾವಣಗೆರೆಯ ಮೈಸೂರು ಮೆಡಿಕಲ್ ಬಯೋ ಕೆಮಿಕಲ್ ಏಜೆನ್ಸಿಯ ಎರಡನೇ ಮಹಡಿಯಲ್ಲಿ ಬೆಂಕಿ ಅವಘಡ ಉಂಟಾಯಿತು   

ದಾವಣಗೆರೆ: ದೀಪಾವಳಿ ಪ್ರಯುಕ್ತ ಪೂಜೆ ಸೋಮವಾರ ಮಾಡಿ ಬಳಿಕ ಹಚ್ಚಿದ ಪಟಾಕಿಯ ಕಿಡಿ ಹಾರಿ ಮೆಡಿಕಲ್‌ ಏಜೆನ್ಸಿಯ ಗೋದಾಮು ಹೊತ್ತಿ ಉರಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಜೀವಹಾನಿ ಉಂಟಾಗಿಲ್ಲ.

ಇಲ್ಲಿನ ಅಕ್ಕಮಹಾದೇವಿ ರಸ್ತೆಯಲ್ಲಿ ಇರುವ ಮೈಸೂರು ಮೆಡಿಕಲ್ ಬಯೋ ಕೆಮಿಕಲ್ ಏಜೆನ್ಸಿಯಲ್ಲಿ ಈ ಅವಘಡ ಉಂಟಾಗಿದೆ. ಚಿದಂಬರ ದೀಕ್ಷಿತ್‌–ಅಶೋಕ್‌ ಕುಮಾರ್‌ ಜಂಟಿ ಮಾಲೀಕತ್ವದ ಈ ಸಂಸ್ಥೆಯಲ್ಲಿ ಸೋಮವಾರ ಸಂಜೆ ಪೂಜೆ ನಡೆದಿತ್ತು. ರಾತ್ರಿ 7.30ರ ಹೊತ್ತಿಗೆ ಪೂಜೆ ಮುಗಿದಿತ್ತು. ಬಳಿಕ ಅಲ್ಲೇ ಎದುರು ರಸ್ತೆಯಲ್ಲಿ ಸಂಸ್ಥೆಯ ಸಿಬ್ಬಂದಿ ಸಹಿತ ಎಲ್ಲರೂ ಸೇರಿ ಪಟಾಕಿ ಹೊಡೆದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಹೊಗೆ ವಾಸನೆ ಬಂದಿದೆ. ಏನೆಂದು ನೋಡಿದಾಗ ಈ ಕಟ್ಟಡದ ಎರಡನೇ ಮಹಡಿಯಲ್ಲಿ ಇರುವ ಗೋದಾಮಿನಿಂದ ಬೆಂಕಿಯ ಕೆನ್ನಾಲಗೆ ಹೊರಚಾಚುತ್ತಿರುವುದು ಕಾಣಿಸಿಕೊಂಡಿದೆ.

ಅಗ್ನಿಶಾಮಕ ದಳದ ಎರಡು ವಾಹನಗಳು ಬಂದಿದ್ದು, ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ಬಡಾವಣೆ ಪೊಲೀಸರು ಮತ್ತು ಸಂಚಾರ ಪೊಲೀಸರು ವಾಹನ ಸಂಚಾರವನ್ನು ಬದಲಿ ಮಾರ್ಗದಲ್ಲಿ ಮಾಡಿದರು. ಬೆಸ್ಕಾಂನವರು ಈ ಮಾರ್ಗದಲ್ಲಿ ವಿದ್ಯುತ್‌ ಕಡಿತಗೊಳಿಸಿ ಹೆಚ್ಚಿನ ಅಪಾಯ ಆಗದಂತೆ ನೋಡಿಕೊಂಡರು.

ADVERTISEMENT

‘ಲಕ್ಷ್ಮೀ ಪೂಜೆ ಮಾಡಿದ ಮೇಲೆ ನಮ್ಮ ಹುಡುಗರು ಪಟಾಕಿ ಸಿಡಿಸುತ್ತಿದ್ದರು. ಮೇಲೆ ಬೆಂಕಿ ಹೊತ್ತಿ ಉರಿದಿದೆ. ಅದು ಪಟಾಕಿಯಿಂದ ಉಂಟಾಗಿದೆಯೇ? ಶಾರ್ಟ್ ಸರ್ಕೀಟ್‌ ಅಥವಾ ಬೇರೆ ಕಾರಣವೇ ಎಂಬುದು ಗೊತ್ತಾಗಿಲ್ಲ. ಎಷ್ಟು ನಷ್ಟವಾಗಿದೆ ಎಂದು ಇನ್ನಷ್ಟೇ ಪರಿಶೀಲಿಸಬೇಕಿದೆ’ ಎಂದು ಸಂಸ್ಥೆಯ ಮಾಲೀಕರಲ್ಲಿ ಒಬ್ಬರಾದ ಚಿದಂಬರ ದೀಕ್ಷಿತ್‌ ತಿಳಿಸಿದರು.

‘ಹೊಗೆಯ ವಾಸನೆ ಬಂತು. ಕೂಡಲೇ ಹೋದೆವು. ಆದರೆ ಹೊಗೆ ಮತ್ತು ಬೆಂಕಿಯಿಂದಾಗಿ ಒಳಗೆ ಹೋಗಲು ಆಗಲಿಲ್ಲ. ಆನಂತರ ಅಗ್ನಿಶಾಮಕದಳಕ್ಕೆ ತಿಳಿಸಿದೆವು’ ಎಂದು ಸಂಸ್ಥೆಯ ಮ್ಯಾನೇಜರ್‌ ಆನಂದ ಕುಮಾರ್‌ ಮಾಹಿತಿ ನೀಡಿದರು.

‘ಬೆಂಕಿ ನಂದಿಸಲಾಗಿದೆ. ಔಷಧ ಸಾಮಗ್ರಿ ಸುಟ್ಟು ಹೋಗಿದೆ. ನಷ್ಟ ಅಂದಾಜು ಮಾಡಿಲ್ಲ’ ಎಂದು ಅಗ್ನಿಶಾಮಕದಳದ ಜಿಲ್ಲಾ ಅಧಿಕಾರಿ ಬಸವಪ್ರಭು ಶರ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.