ADVERTISEMENT

ಬೆಂಗಳೂರಿನ ಕೆರೆ ಒತ್ತುವರಿಗೆ ಎಲ್ಲ ಪಕ್ಷದ ನಾಯಕರು ಹೊಣೆ: ಸಚಿವ ಬಿ.ಸಿ. ಪಾಟೀಲ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 2:24 IST
Last Updated 7 ಸೆಪ್ಟೆಂಬರ್ 2022, 2:24 IST
ಬಿ.ಸಿ.ಪಾಟೀಲ್, ಕೃಷಿ ಸಚಿವ 
ಬಿ.ಸಿ.ಪಾಟೀಲ್, ಕೃಷಿ ಸಚಿವ    

ದಾವಣಗೆರೆ: ‘ಬೆಂಗಳೂರಿನಲ್ಲಿ ಕೆರೆಗಳು ಒತ್ತುವರಿ ಆಗಿರುವುದರಿಂದ ಮಳೆ ಹೆಚ್ಚು ಬಂದಾಗ ನೆರೆ ಉಂಟಾಗುತ್ತದೆ. ಇದಕ್ಕೆ ಬೆಂಗಳೂರಿನ ಸುತ್ತಮುತ್ತ ಇರುವ ಎಲ್ಲ ಪಕ್ಷಗಳ ನಾಯಕರು ಹೊಣೆ’ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಆರೋಪಿಸಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದಿನ ಕೆಲವು ಸರ್ಕಾರಗಳು ಚರಂಡಿ, ಕಾಲುವೆಗಳನ್ನು ಸರಿ ಮಾಡದೇ ಇರುವುದು ಕೂಡ ನೆರೆಗೆ ಕಾರಣ. ನಮ್ಮ ಸರ್ಕಾರ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸುವ, ರಾಜಕಾಲುವೆ, ಚರಂಡಿಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದೆ’ ಎಂದರು.

‘ಬೆಂಗಳೂರು ಪ್ರವಾಹಕ್ಕೆ ಆ ಪಕ್ಷ, ಈ ಪಕ್ಷ ಕಾರಣ ಎಂದು ದೂಷಿಸುವುದು ಸರಿಯಲ್ಲ. ಈ ರೀತಿಯ ಅಕಾಲಿಕ ಮಳೆ ಬಂದಾಗ ಯಾವ ಸರ್ಕಾರವಾದರೂ ಏನು ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಡಿ.ಕೆ. ಶಿವಕುಮಾರ್‌ ಅವರಿಗೆ ಕಾಮಾಲೆ ಕಣ್ಣು. ಆ ಕಣ್ಣಿಗೆ ನಾವು ಚೆನ್ನಾಗಿ ಕೆಲಸ ಮಾಡುತ್ತಿರುವುದು ಕಾಣುತ್ತಿಲ್ಲ. ಅದಕ್ಕೇ ನಮ್ಮನ್ನು ಟೀಕಿಸುತ್ತಿದ್ದಾರೆ’ ಎಂದು ಅವರು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.