
ಮಲೇಬೆನ್ನೂರು: ‘ಸಮಾಜದಲ್ಲಿ ಸಮನ್ವಯತೆ, ಸಾಮರಸ್ಯ, ಒತ್ತಡದ ಬದುಕಿನಲ್ಲಿ ಮಾನಸಿಕ ನೆಮ್ಮದಿ ಕಾಪಾಡಲು ಸಾಮೂಹಿಕ ಪೂಜೆ ಕಾರ್ಯಕ್ರಮ ಸಹಕಾರಿ’ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.
ಸಮೀಪದ ನಿಟ್ಟೂರು ಗ್ರಾಮದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟಿನ ಪ್ರಗತಿಬಂಧು ಸ್ಸಹಾಯ ಒಕ್ಕೂಟಗಳ ಸದಸ್ಯರು ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯ ನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
‘ಮದ್ಯಪಾನ, ದುಶ್ಚಟ ನಿರ್ಮೂಲನೆ ಮಾಡುವ ಜೊತೆಗೆ ಆರೋಗ್ಯ, ಶಿಕ್ಷಣ, ಪಿಂಚಣಿ, ಶಿಷ್ಯವೇತನ, ಕಾಯಕ, ಮನೆ ನಿರ್ಮಿಸಿಕೊಟ್ಟು ಆರ್ಥಿಕ ಚೈತನ್ಯ ತುಂಬಿದ ಧರ್ಮಸ್ಥಳ ಸಂಘಟನೆ ಯೋಜನೆ ಗ್ರಾಮೀಣ ಪ್ರದೇಶದ ಬಡ ಸಾಮಾನ್ಯ ವರ್ಗದ ಬದುಕು ಬದಲಿಸಿದೆ. ಮೇಲ್ವರ್ಗಕ್ಕೆ ಸೀಮಿತವಾಗಿದ್ದ ಪೂಜಾವಿಧಿ ವ್ರತಾಚರಣೆ ಕುಗ್ರಾಮಗಳ ಜನಸಾಮಾನ್ಯರು ಸಾಮೂಹಿಕವಾಗಿ ಕಡಿಮೆ ಖರ್ಚಿನಲ್ಲಿ ಆಚರಿಸುವ ಸದಾವಕಾಶ ಸಂಘಟನೆ ರೂಪಿಸಿ ಧರ್ಮಾನುಷ್ಠಾನಗೊಳಿಸು ತ್ತಿರುವುದು ಉತ್ತಮ ಸಂಪ್ರದಾಯ’ ಎಂದರು.
‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗೆ ಶಕ್ತಿ ತುಂಬಿ, ಸ್ವಾವಲಂಬಿ ಬದುಕು ಸಾಧಿಸುವ ಸನ್ಮಾರ್ಗ ತೋರಿಸಿದೆ’ ಎಂದು ರೂಪಾ ಪಾಟೀಲ್ ಹೇಳಿದರು.
ಗ್ರಾಮದ ಹಿರಿಯ ಮುಖಂಡ ಕೆ.ಏಕಾಂತಪ್ಪ ಧಾರ್ಮಿಕ ಸಭೆ ಉದ್ಘಾಟಿಸಿದರು. ಪೂಜಾ ಸಮಿತಿ ಅಧ್ಯಕ್ಷ ಸತೀಶ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧು ತಿಮ್ಮಣ್ಣ, ಮರಳುಸಿದ್ದಪ್ಪ, ಪಟೇಲ್ ಮಂಜುನಾಥ್, ಧನಂಜಯ, ಯೋಜನಾಧಿಕಾರಿ ವಸಂತ್ ದೇವಾಡಿಗ, ಜನಜಾಗೃತಿ ವೇದಿಕೆ ಸದಸ್ಯರಾದ ಜಿಗಳಿ ಪ್ರಕಾಶ್, ಹನುಮಂತರಾಯ, ಕರಿಬಸಪ್ಪ, ಮಲ್ಲೇಶ್, ನಾಗೇಶ್, ಎನ್.ಜಿ. ಬಸವನಗೌಡ, ವಿವಿಧೆಡೆಯಿಂದ ಆಗಮಿಸಿದ ಪ್ರಗತಿಬಂಧು ಸ್ವ–ಸಹಾಯ ಒಕ್ಕೂಟಗಳ ಸದಸ್ಯರು ಇದ್ದರು.
ಮಾರುತಿ ಕಾರ್ಯಕ್ರಮ ನಿರೂಪಿಸಿದರು, ಮೇಲ್ವಿಚಾರಕ ಯೋಗೇಶ್ ಸ್ವಾಗತಿಸಿದರು, ಶೋಭಾ ವಂದಿಸಿದರು.
ಸತ್ಯನಾರಾಯಣ ಪೂಜೆ, ಪಠಣ ಹಾಗೂ ಸಾಮೂಹಿಕ ಆರತಿ ನಂತರ ಪ್ರಸಾದ ವಿತರಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.