ADVERTISEMENT

ಓಮಿಕ್ರಾನ್‌ ಸೋಂಕಿನ ಬಗ್ಗೆ ನಿಗಾ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 4:19 IST
Last Updated 29 ನವೆಂಬರ್ 2021, 4:19 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ವೈರಸ್ ಸೋಂಕು ತಡೆಗೆ ಜಿಲ್ಲೆಯಾದ್ಯಂತ ಕ್ರಮ ಕೈಗೊಳ್ಳ ಲಾಗಿದೆ. ಎಲ್ಲ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ವಿದೇಶಗಳಿಗೆ ಹೋಗಿ ಬರುವವರ ಬಗ್ಗೆ, ಬೇರೆ ರಾಜ್ಯಗಳಿಂದ ಬರುವವರ ಬಗ್ಗೆ ನಿಗಾ ಇಡಲಾಗಿದೆ. ಇಲ್ಲಿ ಕಲಿಯಲು ಬೇರೆಡೆಯಿಂದ ಬಂದ ವಿದ್ಯಾರ್ಥಿಗಳ ಬಗ್ಗೆಯೂ ಮುತುವರ್ಜಿ ವಹಿಸಲಾಗಿದೆ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಆಫ್ರಿಕಾದ ದೇಶಗಳಲ್ಲಿ ಒಮಿಕ್ರಾನ್ ರೂಪಾಂತರಿ ತಳಿ ಅಬ್ಬರ ಜೋರಾಗಿದೆ. ನೆರೆಯ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹೊರಗಿನಿಂದ ಬಂದವರನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

ADVERTISEMENT

ಜಿಲ್ಲಾ ಸರ್ವೇಕ್ಷಣಾ ತಂಡವು ಈಗಾಗಲೇ ಪರಿಶೀಲನೆಯಲ್ಲಿ ತೊಡಗಿದೆ. ವಿದೇಶ ಪ್ರವಾಸ ಮಾಡಿ ಬಂದವರು, ಕೇರಳದಿಂದ ಬಂದಂತಹ ವಿದ್ಯಾರ್ಥಿಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ರಾಜ್ಯ ಮಟ್ಟದಿಂದ ವಿದೇಶ ಪ್ರವಾಸ ಮಾಡಿ ಬಂದವರ ಮಾಹಿತಿ ಬಂದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಸದ್ಯಕ್ಕೆ ಜಿಲ್ಲೆಯಲ್ಲಿ ಭಯದ ವಾತಾವರಣ ಇಲ್ಲ ಎಂದು ಮಾಹಿತಿ ನೀಡಿದರು.

ಸೋಂಕು ಇಲ್ಲ ಎಂದು ಯಾರೂ ಮೈಮರೆಯಬಾರದು. ಮಾಸ್ಕ್ ಧರಿಸಬೇಕು. ಅಂತರ ಕಾಪಾಡಿಕೊಳ್ಳಬೇಕು. ಸ್ಯಾನಿಟೈಸರ್‌ ಬಳಸಬೇಕು ಎಂದು ತಿಳಿಸಿದರು.

‘ಸದ್ಯ ಹೊರಗಿನವರಿಲ್ಲ’

‘ಮಹಾರಾಷ್ಟ್ರ ಮತ್ತು ಕೇರಳದಿಂದ 15 ದಿನಗಳ ಈಚೆಗೆ ಯಾರೂ ಬಂದಿಲ್ಲ. ವಿದ್ಯಾರ್ಥಿಗಳೆಲ್ಲ ಮೂರು ತಿಂಗಳ ಹಿಂದೆಯೇ ಬಂದಿದ್ದಾರೆ. ಆದರೂ ಎಲ್ಲ ಕಡೆ ನಿಗಾ ಇರಿಸಿದ್ದೇವೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮೈಸೂರು, ಧಾರವಾಡ, ಬೆಂಗಳೂರುಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಹಾಗಾಗಿ ಹೊರ ಜಿಲ್ಲೆಯಿಂದ ಬರುವವರ ಬಗ್ಗೆಯೂ ಎಚ್ಚರದಿಂದ ಇರಬೇಕಾಗುತ್ತದೆ. ಸದ್ಯ ಓಮಿಕ್ರಾನ್‌ ಅಂದರೆ ಬಿ.1.1.529 ವೈರಸ್‌ ರಾಜ್ಯದಲ್ಲಿ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.