ಚನ್ನಗಿರಿ: ‘ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯಕರ ಸದೃಢ ದೇಹ ಮತ್ತು ಪೌಷ್ಟಿಕಾಂಶ ಇರುವ ಆಹಾರ ಅಗತ್ಯ. ಆರೋಗ್ಯವಂತ ಶಿಶುವಿನಿಂದ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾಧ ಸೌಭಾಗ್ಯ ಬುಷೇರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪೌಷ್ಟಿಕ ಆಹಾರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಪ್ರಕೃತಿದತ್ತವಾಗಿ ಬೆಳೆದ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇರುತ್ತದೆ. ಪೌಷ್ಟಿಕ ಆಹಾರದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಅಂಶವನ್ನು ಹೆಚ್ಚಿಸಲು ತಾಯಿ ಗರ್ಭದಲ್ಲಿ ಇರುವಾಗಿನಿಂದಲೂ ಮಗು ಹುಟ್ಟುವವರೆಗೂ ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪೌಷ್ಟಿಕಾಂಶ ಇರುವ ಆಹಾರವನ್ನು ವಿತರಿಸುತ್ತದೆ. ಅವುಗಳನ್ನು ಉಪಯೋಗಿಸಬೇಕು’ ಎಂದರು.
ತಾ.ಪಂ. ಇಒ ಎಂ.ಆರ್. ಪ್ರಕಾಶ್, ಸಿಡಿಪಿಒ ಆರ್.ನಿರ್ಮಲ, ಕಾರ್ಯದರ್ಶಿ ಜಿ.ಎಸ್. ಮೋಹನ್, ಉಪಾಧ್ಯಕ್ಷ ಸಿ.ತಿಪ್ಪೇಶ್, ಹಿರಿಯ ಆರೋಗ್ಯಾಧಿಕಾರಿ ಟಿ.ಲೋಕೇಶ್ ಉಪಸ್ಥಿತರಿದ್ದರು. ವಕೀಲರಾದ ಕೆ.ಎಸ್. ಪ್ರತಿಭಾ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಎಚ್. ಮೋಹನ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.