ADVERTISEMENT

ದಾವಣಗೆರೆ: ದ್ವಿಶತಕದ ಅಂಚಿಗೆ ಬಂದ ಸೋಂಕಿತರ ಸಂಖ್ಯೆ

93 ಮಂದಿ ಬಿಡುಗಡೆ * ವೃದ್ಧೆಯರಿಬ್ಬರು, ವೃದ್ಧ, ಇಬ್ಬರು ಮಹಿಳೆಯರು ಸಾವು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 16:20 IST
Last Updated 4 ಆಗಸ್ಟ್ 2020, 16:20 IST
ಮಲೇಬೆನ್ನೂರು ಪಟ್ಟಣದಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಸಿಬ್ಬಂದಿ ವೃದ್ಧೆಯೊಬ್ಬರ ಗಂಟಲು ದ್ರವ ಸಂಗ್ರಹಿಸಿದರು. ಉಪ ತಹಶಿಲ್ದಾರ್ ರವಿ, ರಾಜಸ್ವ ನಿರೀಕ್ಷಕ ಸಮೀರ್ ಅಹ್ಮದ್ ಇದ್ದರು.
ಮಲೇಬೆನ್ನೂರು ಪಟ್ಟಣದಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಸಿಬ್ಬಂದಿ ವೃದ್ಧೆಯೊಬ್ಬರ ಗಂಟಲು ದ್ರವ ಸಂಗ್ರಹಿಸಿದರು. ಉಪ ತಹಶಿಲ್ದಾರ್ ರವಿ, ರಾಜಸ್ವ ನಿರೀಕ್ಷಕ ಸಮೀರ್ ಅಹ್ಮದ್ ಇದ್ದರು.   

ದಾವಣಗೆರೆ: ಒಂದು ವರ್ಷದ ಮೂವರು ಸೇರಿ 12 ಮಕ್ಕಳು, 90 ವರ್ಷದ ಇಬ್ಬರು ಸೇರಿ 51 ಹಿರಿಯರು ಒಳಗೊಂಡಂತೆ ಒಟ್ಟು 191 ಮಂದಿಗೆ ಸೋಂಕು ಇರುವುದು ಮಂಗಳವಾರ ದೃಢಪಟ್ಟಿದೆ. ಐವರು ಮೃತಪಟ್ಟಿದ್ದಾರೆ. 93 ಮಂದಿ ಗುಣಮುಖರಾಗಿದ್ದಾರೆ.

ಚನ್ನಗಿರಿ ತಾಲ್ಲೂಕಿನ ನವಿಲೇಹಾಳ್‌ ನಿವಾಸಿ 65 ವರ್ಷದ ವೃದ್ಧ ಉಸಿರಾಟದ ಸಮಸ್ಯೆಯಿಂದ ಜುಲೈ 31ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆ.2ರಂದು ಮೃತಪಟ್ಟಿದ್ದಾರೆ. ಹರಿಹರ ಕಾಳಿದಾಸ ನಗರದ 68 ವರ್ಷದ ವೃದ್ಧೆ ಉಸಿರಾಟದ ಸಮಸ್ಯೆಗಾಗಿ ಜುಲೈ 25ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಆ.2ರಂದು ನಿಧನರಾದರು.

ಚೌಕಿಪೇಟೆಯ 56 ವರ್ಷದ ಮಹಿಳೆ ಜುಲೈ 27ರಂದು ಆಸ್ಪತ್ರೆಗೆ ದಾಖಲಾಗಿದ್ದು, ಆಗಸ್ಟ್‌ 3ರಂದು ಅಸುನೀಗಿದರು. ಭಾರತ್‌ ಕಾಲೊನಿಯ 45 ವರ್ಷದ ಮಹಿಳೆ ಆ.1ರಂದು ಆಸ್ಪತ್ರೆಗೆ ಬಂದಿದ್ದು, 3ರಂದು ಮೃತಪಟ್ಟರು. ಹಾವೇರಿ ಜಿಲ್ಲೆ ರಾಣೆಬೆನ್ನೂರು ಚಿದಂಬರ ರಸ್ತೆಯ 60 ವರ್ಷದ ವೃದ್ಧೆ ಆ.1ರಂದು ಆಸ್ಪತ್ರೆಗೆ ಬಂದಿದ್ದು, 3ರಂದು ನಿಧನರಾದರು. ಈ ಮೂವರಿಗೂ ಉಸಿರಾಟದ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡ ಇತ್ತು.

ADVERTISEMENT

ಐವರು ಬಾಲಕರು, ಏಳು ಬಾಲಕಿಯರಿಗೆ ಕೊರೊನಾ ಇರುವುದು ಖಚಿತವಾಗಿದೆ. 31 ವೃದ್ಧರು , 20 ವೃದ್ಧೆಯರಿಗೆ ಸೋಂಕು ತಗುಲಿದೆ. 18ರಿಂದ 59 ವರ್ಷದೊಳಗಿನ 73 ಪುರುಷರು ಮತ್ತು 55 ಮಹಿಳೆಯರಿಗೂ ಕೊರೊನಾ ಬಂದಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 96 ಮಂದಿಗೆ, ಹೊನ್ನಾಳಿ ತಾಲ್ಲೂಕಿನ 39, ಹರಿಹರ ತಾಲ್ಲೂಕಿನ 35, ಚನ್ನಗುರಿ ತಾಲ್ಲೂಕಿನ 10, ಜಗಳೂರು ತಾಲ್ಲೂಕಿನ 9 ಮಂದಿ ಸೋಂಕು ತಗುಲಿದವರಲ್ಲಿ ಇದ್ದಾರೆ. ಅಲ್ಲದೇ ಹೊರ ಜಿಲ್ಲೆಯಿಂದ ಬಂದು ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.

ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿದ್ದ 8 ಮಂದಿಗೆ, ಸಿಟಿ ಸೆಂಟ್ರಲ್‌ ಆಸ್ಪತ್ರೆಯ ನಾಲ್ವರಿಗೆ, ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗೆ ಕೊರೊನಾ ಬಂದಿದೆ. ನಗರದ ಬಹುತೇಕ ಕಾಲೊನಿಗಳಲ್ಲಿ ಕಂಡು ಬಂದಿದೆ. ಅಲ್ಲದೇ ದಾವಣಗೆರೆ ತಾಲ್ಲೂಕಿನ ಬಾಡಾ, ಕಾಡಜ್ಜಿ, ವಡ್ಡಿನಹಳ್ಳಿ ಮುಂತಾದ ಗ್ರಾಮಾಂತರ ಪ್ರದೇಶಗಳಲ್ಲೂ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಮಂಗಳವಾರ ಗುಣಮುಖರಾಗಿ ಬಿಡುಗಡೆಗೊಂಡವರಲ್ಲಿ 60, 66, 70,71, 76, 80 ವರ್ಷದ ವೃದ್ಧರು, 60, 67,68, 69, 71, 87 ವರ್ಷದ ವೃದ್ಧೆಯರು ಸೇರಿದ್ದಾರೆ. 6, 12, 13, 15 ವರ್ಷದ ಬಾಲಕರು, 10, 11 ವರ್ಷದ ಬಾಲಕಿಯರೂ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 2616 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. 1654 ಮಂದಿ ಗುಣಮುಖರಾಗಿದ್ದಾರೆ. 62 ಮಂದಿ ಮೃತಪಟ್ಟಿದ್ದಾರೆ. 900 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 10 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.