ADVERTISEMENT

ಹಳೇ ನಾಟಕ ಆಡುವವರು ಕಡಿಮೆ

ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಾಟಕ ಪ್ರದರ್ಶನ ಉದ್ಘಾಟಿಸಿದ ಶಾಸಕ ರವೀಂದ್ರನಾಥ್‌

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 15:47 IST
Last Updated 19 ಜನವರಿ 2020, 15:47 IST
ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ‘ಕ್ರಾಂತಿವೀರ ಸಂಗೊಳ್ಳಿರಾಯಣ್ಣ’ ನಾಟಕ ಪ್ರದರ್ಶನವನ್ನು ಶಾಸಕ ಎಸ್.ಎ. ರವೀಂದ್ರನಾಥ್ ಉದ್ಘಾಟಿಸಿದರು
ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ‘ಕ್ರಾಂತಿವೀರ ಸಂಗೊಳ್ಳಿರಾಯಣ್ಣ’ ನಾಟಕ ಪ್ರದರ್ಶನವನ್ನು ಶಾಸಕ ಎಸ್.ಎ. ರವೀಂದ್ರನಾಥ್ ಉದ್ಘಾಟಿಸಿದರು   

ದಾವಣಗೆರೆ: ಹಳೇ ನಾಟಕಗಳನ್ನು ಆಡುವವರ ಸಂಖ್ಯೆ ಈಗ ಕಡಿಮೆಯಾಗಿದೆ. ಹೊಸ ಸಾಮಾಜಿಕ ನಾಟಕಗಳಿಗಷ್ಟೇ ಈಗಿನ ಕಲಾವಿದರು ಒತ್ತು ನೀಡುತ್ತಿದ್ದಾರೆ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ಹೇಳಿದರು.

ಪುಟ್ಟರಾಜಗವಾಯಿ ಕಲಾ ನಾಟಕ ಸಂಘದ ಉದ್ಘಾಟನೆ ಹಾಗೂ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನಾಟಕ ಪ್ರದರ್ಶನಕ್ಕೆ ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಸಂಗೊಳ್ಳಿ ರಾಯಣ್ಣ ಒಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ. ಆತ ಕಿತ್ತೂರು ರಾಣಿ ಚನ್ನಮ್ಮನ ಸೇನಾಧಿಪತಿಯಾಗಿ ಬ್ರಿಟಿಷರ ಜತೆಗೆ ಹೋರಾಟ ಮಾಡಿದ ವೀರ. ಈತ ಹುಟ್ಟಿದ, ಬೆಳೆದ ಹೋರಾಡಿದ ಜಾಗಗಳು ಬೆಳಗಾವಿ ಜಿಲ್ಲೆಯಲ್ಲಿವೆ. ಅಂಥ ಸಂಗೊಳ್ಳಿ ರಾಯಣ್ಣನ ಹೆಸರಲ್ಲಿ ನಾಟಕ ಮಾಡುತ್ತಿರುವುದು ಒಳ್ಳೆಯ ವಿಚಾರ. ಇನ್ನೂ 50 ವರ್ಷಗಳ ಕಾಲ ನಾಟಕವನ್ನು ನೆನಪು ಇಟ್ಟುಕೊಳ್ಳುವಂತೆ ನೀವು ಅಭಿನಯಿಸಿ ಎಂದು ಹಾರೈಸಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಹದಡಿ ಚಂದ್ರಗಿರಿ ಮಠದ ಪರಮಹಂಸ ಮುರಳೀಧರ ಸ್ವಾಮೀಜಿ, ‘ಭೂಮಿಯ ಮೇಲೆ ಹುಟ್ಟಿದ ನಾವು ನಮ್ಮ ದೇಹವನ್ನು ದೇಶಕ್ಕಾಗಿ ಮುಡಿಪಾಗಿಡಬೇಕು. ಅಂಥ ತ್ಯಾಗಮಯ ಜೀವನವನ್ನು ನಡೆಸಿದ ವೀರ ಸಂಗೊಳ್ಳಿ ರಾಯಣ್ಣ. ತನ್ನ ಜೀವನದ ಮೂಲಕ ಸ್ವಾತಂತ್ರ್ಯ ಹೋರಾಟದ ಜತೆಗೆ ಸಮಾಜ ಸುಧಾರಕರೂ ಆಗಿದ್ದರು’ ಎಂದು ವಿವರಿಸಿದರು.

‘ಉಸಿರು ಎಂಬುದು ಶಿವ. ಉಸಿರು ನಿಂತ ಮೇಲೆ ನಮ್ಮ ದೇಹ ಬರೀ ಶವ. ನಾನು ಅಂದರೆ ಕಾಣುವ ದೇಹವೇ? ಕಾಣದ ಆತ್ಮವೇ? ಇಂಥ ಅರಿವನ್ನು ಮೂಡಿಸಲು ಸಾಧು ಸಂತರು, ಗುರುಗಳು ಬೇಕು. ಕಲಿಯಬೇಕು ಎಂಬ ಮನಸ್ಸು ಇದ್ದರೆ ನಾವು ಸದಾ ವಿದ್ಯಾರ್ಥಿಗಳಾಗಿರುತ್ತೇವೆ. ಜಗತ್ತೆಲ್ಲ ಗುರುಗಳು ಇರುತ್ತಾರೆ’ ಎಂದು ವಿಶ್ಲೇಷಿಸಿದರು.

ಕನಕ ಪಟ್ಟಣ ಸಹಕಾರ ಬ್ಯಾಂಕ್‌ ಅಧ್ಯಕ್ಷ ಎಚ್‌.ಜಿ. ಸಂಗಪ್ಪ, ಹಿರಿಯ ಪತ್ರಕರ್ತ ಕೆ. ಚಂದ್ರಣ್ಣ, ಬಾನುವಳ್ಳಿ ವೆಂಕಟೇಶ್ವರ ಡ್ರಾಮಾಸಿರಿ ಮಾಲೀಕ ವಿ.ಕೆ. ರಮೇಶ್‌ ಶ್ರೇಷ್ಠಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಎಸ್‌. ಸಿದ್ಧರಾಮಪ್ಪ ಅವರನ್ನು ಸನ್ಮಾನಿಸಲಾಯಿತು.

ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ, ಉಪಾಧ್ಯಕ್ಷ ಹಾಲೇಕಲ್ಲು ಎಸ್‌.ಟಿ. ಅರವಿಂದ, ಗೌರವ ಕಾರ್ಯದರ್ಶಿ ಎಸ್‌.ಎಚ್‌. ಪ್ರಕಾಶ್‌, ಕುರುಬರ ಸಂಘದ ನಿರ್ದೇಶಕಿ ಸುನಂದಮ್ಮ, ದೂಡ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಪಾಲಿಕೆ ಸದಸ್ಯರಾದ ಬಿ.ಜಿ. ಅಜಯ್‌ ಕುಮಾರ್‌, ಮಂಜುನಾಯ್ಕ್‌, ದಿಳ್ಳೆಪ್ಪ ಅವರೂ ಇದ್ದರು.

ಉಮಾದೇವಿ ಪ್ರಾರ್ಥಿಸಿದರು. ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ಚಂದ್ರ ದೊಡ್ಮನಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.