
ದಾವಣಗೆರೆ: ‘ವೀರ ವನಿತೆ ಒನಕೆ ಓಬವ್ವಳ ಧೈರ್ಯ, ಶೌರ್ಯ ಹಾಗೂ ತ್ಯಾಗ ಮನೋಭಾವ ಇಂದಿನ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಿದೆ’ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಒನಕೆ ಓಬವ್ವ ನಡೆದು ಬಂದ ದಾರಿ ಪ್ರತಿಯೊಬ್ಬರಿಗೂ ಆದರ್ಶವಾಗಿದೆ. ಅತ್ಯಂತ ಹಿಂದುಳಿದ ವರ್ಗದ ಮಹಿಳೆಯಾದರೂ, ಸೇವಾ ಮನೋಭಾವ ಬೆಳೆಸಿಕೊಂಡಿದ್ದರು. ಅವರಂತೆ ಪ್ರತಿಯೊಬ್ಬರೂ ಸೇವಾ ಮನೋಭಾವ, ಧೈರ್ಯದ ಗುಣ ಬೆಳೆಸಿಕೊಳ್ಳಬೇಕು. ಓಬವ್ವನ ಸಾಹಸ ಪರಿಗಣಿಸಿ ರಾಜ್ಯದಲ್ಲಿ ಒನಕೆ ಓಬವ್ವ ಅಧ್ಯಯನ ಪೀಠ ಸ್ಥಾಪಿಸಲು ಸರ್ಕಾರದ ಗಮನ ಸೆಳೆಯಲಾಗುತ್ತದೆ’ ಎಂದರು.
‘ದೇಶ ಹಾಗೂ ಸಮಾಜಕ್ಕೆ ಅಗಾಧ ಸೇವೆ ಸಲ್ಲಿಸಿದ ರಾಣಿ ಚನ್ನಮ್ಮ, ಒನಕೆ ಓಬವ್ವ, ಬುದ್ಧ, ಬಸವ ಅಂಬೇಡ್ಕರ್ ಅವರನ್ನು ಸ್ಮರಿಸುತ್ತೇವೆ. ಅಂತೆಯೇ ದುರ್ಗದ ಏಳು ಸುತ್ತಿನ ಕೋಟೆ ಸಣ್ಣ ಪ್ರಾಂತ್ಯವಾಗಿದ್ದರೂ, ತನ್ನ ಜೀವದ ಹಂಗು ತೊರೆದು, ಸಮಯ ಪ್ರಜ್ಞೆಯಿಂದ ಏಕಾಂಗಿಯಾಗಿ ಹೋರಾಡಿದ ದಿಟ್ಟ ಮಹಿಳೆಯ ಧೈರ್ಯ, ಸಾಹಸ, ಶೌರ್ಯ, ದೇಶ ಭಕ್ತಿಯು ಸದಾ ನೆನಪಿನಲ್ಲಿ ಉಳಿಯುವಂತದ್ದು’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.
‘ಭವಿಷ್ಯದ ಪೀಳಿಗೆಯನ್ನು ವಿಘಟಿತರಾಗಿಸದೇ, ಸಂಘಟಿತರಾಗಿ ಸುಸಂಸ್ಕೃತ ದಾರಿಯಲ್ಲಿ ಸಾಗಬೇಕಾದರೆ ಇಂತಹ ಮಹನೀಯರ ಕೊಡುಗೆ, ರಾಷ್ಟ್ರಭಕ್ತಿ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಸಮಾಜ ಸರಿದಾರಿಯಲ್ಲಿ ಸಾಗಲು ಸಾಧ್ಯ’ ಎಂದರು.
‘ಒಬ್ಬ ಸಾಮಾನ್ಯ ಗೃಹಿಣಿಯಾಗಿ, ಕಾವಲುಗಾರನ ಹೆಂಡತಿಯಾಗಿ ಸಮಯ ಪ್ರಜ್ಞೆಯಿಂದ ಕೋಟೆ ರಕ್ಷಣೆಗೆ ಮುಂದಾಗಿದ್ದು ಅವಿಸ್ಮರಣೀಯ. ಈ ಮೂಲಕ ಅಪಾರ ಮೆಚ್ಚುಗೆ ಗುರಿಯಾದವರು ಒನಕೆ ಓಬವ್ವ. ಇಂತಹ ಮಹನೀಯರ ಸಾಧನೆ, ಸಾಹಸ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಬಾರದು’ ಎಂದು ‘ಧೂಡಾ’ ಅಧ್ಯಕ್ಷ ದಿನೇಶ್ ಶೆಟ್ಟಿ ಹೇಳಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್, ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ನವೀನ್ ಮಠದ್, ಅಬಕಾರಿ ಇಲಾಖೆಯ ಉಪ ಆಯುಕ್ತ ಜುನೈದ್, ಛಲವಾದಿ ಸಮುದಾಯದ ಅಧ್ಯಕ್ಷ ರುದ್ರಮುನಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.