ADVERTISEMENT

ಚೆಲ್ಲು ಭತ್ತ ವಿಧಾನದತ್ತ ಆಕರ್ಷಿತರಾದ ರೈತರು

ತಣಿಗೆರೆ ಗ್ರಾಮದ ಶೇ 90ರಷ್ಟು ಕೃಷಿಕರ ಒಲವು: ಅನಗತ್ಯ ವೆಚ್ಚಕ್ಕೂ ಕಡಿವಾಣ

ಕೆ.ಎಸ್.ವೀರೇಶ್ ಪ್ರಸಾದ್
Published 23 ಫೆಬ್ರುವರಿ 2023, 2:49 IST
Last Updated 23 ಫೆಬ್ರುವರಿ 2023, 2:49 IST
ಸಂತೇಬೆನ್ನೂರು ಸಮೀಪದ ಮೆದಿಕೆರೆ ಗ್ರಾಮದಲ್ಲಿ ಚೆಲ್ಲುಭತ್ತ ವಿಧಾನದಲ್ಲಿ ಬೆಳೆದ ಭತ್ತದ ಸಸಿಗಳು
ಸಂತೇಬೆನ್ನೂರು ಸಮೀಪದ ಮೆದಿಕೆರೆ ಗ್ರಾಮದಲ್ಲಿ ಚೆಲ್ಲುಭತ್ತ ವಿಧಾನದಲ್ಲಿ ಬೆಳೆದ ಭತ್ತದ ಸಸಿಗಳು   

ಸಂತೇಬೆನ್ನೂರು: ಹೋಬಳಿ ವ್ಯಾಪ್ತಿಯ ನೀರಾವರಿ ಪ್ರದೇಶದಲ್ಲಿ ದಶಕಗಳಿಂದ ಸಾಂಪ್ರದಾಯಿಕ ನಾಟಿ ಪದ್ಧತಿಯಲ್ಲಿ ಭತ್ತ ಬೆಳೆಯುವುದು ರೂಢಿಯಲ್ಲಿತ್ತು. ಈ ಬೇಸಿಗೆ ಹಂಗಾಮಿನಲ್ಲಿ ಬಹುತೇಕ ರೈತರು ನಾಟಿ ಪದ್ಧತಿಗೆ ವಿದಾಯ ಹೇಳಿ, ಭತ್ತದ ಬೀಜಗಳನ್ನು ಹದಗೊಳಿಸಿದ ಗದ್ದೆಗೆ ಚೆಲ್ಲುವ ಮೂಲಕ ಪರಿವರ್ತನೆ ಹಾದಿ ತುಳಿದಿದ್ದಾರೆ.

‘ಭತ್ತದ ನಾಟಿಗೆ ಒಂದು ತಿಂಗಳು ಪೂರ್ವಭಾವಿಯಾಗಿ ಮಡಿಗಳಲ್ಲಿ ಸಸಿ ಬೆಳೆಸಬೇಕು. ಸುಮಾರು ಒಂದು ಎಕರೆಗೆ 30 ಕೆ.ಜಿ. ಭತ್ತದ ಬೀಜದ ಅವಶ್ಯಕತೆ ಇತ್ತು. ಆದರೆ ಚೆಲ್ಲು ಭತ್ತ ವಿಧಾನದಲ್ಲಿ ಎಕರೆಗೆ ಕೇವಲ 10 ಕೆ.ಜಿ. ಭತ್ತದ ಬೀಜ ಸಾಕು. ಭತ್ತದ ನಾಟಿಗೆ ಕೂಲಿಗಳನ್ನು ಕಾಯಬೇಕು. ಪ್ರತಿ ಎಕರೆಗೆ ₹ 3,500 ನಾಟಿ ಕೂಲಿ ದರ ಇತ್ತು. ಸಮಯಕ್ಕೆ ಸರಿಯಾಗಿ ನಾಟಿ ಕಾರ್ಯ ನಡೆಯುತ್ತಿರಲಿಲ್ಲ. ಈ ಎಲ್ಲ ಒತ್ತಡದಿಂದ ದೂರವಾಗಲು ಚೆಲ್ಲು ಭತ್ತ ವಿಧಾನಕ್ಕೆ ಮೊರೆ ಹೋದೆವು. ತಣಿಗೆರೆ ಗ್ರಾಮದಲ್ಲಿ ಶೇ 90ರಷ್ಟು ರೈತರು ಚೆಲ್ಲು ಭತ್ತ ವಿಧಾನ ಅನುಸರಿಸಿದ್ದಾರೆ’ ಎನ್ನುತ್ತಾರೆ ರೈತ ಜಗದೀಶ್ ದೊಡ್ಮನೆ.

‘ಚೆಲ್ಲು ಭತ್ತದಲ್ಲಿ ಬೀಜಗಳನ್ನು ಹದ ಮಾಡಿದ ಗದ್ದೆಗಳಲ್ಲಿ ಎರಚುವ ಸುಲಭ ವಿಧಾನ. ಕೇವಲ ಮನೆಯ ಇಬ್ಬರು ಸದಸ್ಯರು ದಿನಕ್ಕೆ 6ರಿಂದ 7 ಎಕರೆ ಭತ್ತದ ಬೀಜಗಳನ್ನು ಚೆಲ್ಲಬಹುದು. ಶ್ರಮ, ಖರ್ಚು ಉಳಿದಿದೆ. ಇಳುವರಿಯಲ್ಲಿಯೂ ಬದಲಾವಣೆ ಆಗಿಲ್ಲ. ಕಳೆದ ಬಾರಿ ಎಕರೆಗೆ 30ರಿಂದ 40 ಚೀಲ ಭತ್ತದ ಇಳುವರಿ ಬಂದಿದೆ. ವರ್ಷದಿಂದ ವರ್ಷಕ್ಕೆ ತ್ವರಿತಗತಿಯಲ್ಲಿ ರೈತರು ಚೆಲ್ಲು ಭತ್ತ ವಿಧಾನಕ್ಕೆ ಬದಲಾಗಿದ್ದಾರೆ. ಮೆದಿಕೆರೆ ಗ್ರಾಮದಲ್ಲಿ ಶೇ 50ರಷ್ಟು ರೈತರು ಈ ಪದ್ಧತಿ ಅನುಸರಿಸಿದ್ದಾರೆ. 10 ಎಕರೆಯಲ್ಲಿ ಭತ್ತ ಚೆಲ್ಲಿದ್ದೇನೆ’ ಎನ್ನುತ್ತಾರೆ ಮೆದಿಕೆರೆ ಸ್ವಾಮಿ.

ADVERTISEMENT

ನಾಟಿ ಪದ್ಧತಿಯಲ್ಲಿ ಪ್ರತಿ ಎಕರೆಗೆ 3 ಕ್ವಿಂಟಲ್ ರಾಸಾಯನಿಕ ಗೊಬ್ಬರ ಬಳಸಲಾಗುತ್ತಿತ್ತು. ಭತ್ತ ಚೆಲ್ಲುವ ವಿಧಾನದಲ್ಲಿ ಒಂದೂವರೆ ಕ್ವಿಂಟಲ್ ಗೊಬ್ಬರ ಸಾಕಾಗುತ್ತದೆ. ಆರ್‌ಎನ್‌ಆರ್ ಹಾಗೂ ಸೋನಾ ತಳಿಯ ಭತ್ತವು ಚೆಲ್ಲು ವಿಧಾನದಲ್ಲಿ ಸಮೃದ್ಧವಾಗಿ ಬೆಳೆಯುತ್ತಿದೆ. ಈ ವಿಧಾನದಿಂದ ಪ್ರತಿ ಎಕರೆಗೆ ಸುಮಾರು ₹ 15,000ದಷ್ಟು ರೈತರಿಗೆ ಉಳಿತಾಯ ಆಗಲಿದೆ ಎನ್ನುತ್ತಾರೆ ಭೀಮನೆರೆ
ವೆಂಕಟೇಶ್

ಹೋಬಳಿ ವ್ಯಾಪ್ತಿಯಲ್ಲಿ 2,500 ಹೆಕ್ಟೇರ್ ನೀರಾವರಿ ಪ್ರದೇಶ ಇದೆ. ಕೆಲವು ಗ್ರಾಮಗಳಲ್ಲಿ ಚೆಲ್ಲು ಭತ್ತ ವಿಧಾನ ಅನುಸರಿಸಿದ್ದಾರೆ. ಉಳಿದಂತೆ ನಾಟಿ ಪದ್ಧತಿ ಮುಂದುವರಿದಿದೆ. ಕೃಷಿಯಲ್ಲಿ ಪ್ರಯೋಗ ಶೀಲತೆ ಇದ್ದರೆ ಒಳಿತು ಎನ್ನುತ್ತಾರೆ ಕೃಷಿ ಅಧಿಕಾರಿ
ಕೇಶವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.