ADVERTISEMENT

ಸಾಸ್ವೆಹಳ್ಳಿ | ಭತ್ತದ ಬೆಲೆ ಕುಸಿತ, ರೈತ ಕಂಗಾಲು

ಹೋಬಳಿ ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಮೇ 2020, 20:00 IST
Last Updated 17 ಮೇ 2020, 20:00 IST
ವರ್ತಕರಿಗೆ ಭತ್ತ ಮಾರುತ್ತಿರುವ ರೈತರು
ವರ್ತಕರಿಗೆ ಭತ್ತ ಮಾರುತ್ತಿರುವ ರೈತರು   

ಸಾಸ್ವೆಹಳ್ಳಿ: ರೈತರು ₹ 30 ರಿಂದ ₹ 40 ಸಾವಿರ ಖರ್ಚು ಮಾಡಿ ಭತ್ತವನ್ನು ಬೆಳೆಯುತ್ತಾರೆ. ಎಕರೆಗೆ ಸರಾಸರಿ 20 ರಿಂದ 22 ಕ್ವಿಂಟಲ್ ಭತ್ತ ಸಿಗುತ್ತದೆ. ಬೆಲೆ ಸಿಗದೆ ರೈತರಿಗೆ ನಷ್ಟವಾಗುತ್ತಿದೆ. ಅದ್ದರಿಂದ ಸರ್ಕಾರ ₹ 2500 ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

‘ಈ ಭಾಗದಲ್ಲಿ ಆರ್‌ಎನ್‍ಆರ್, ಜ್ಯೋತಿ, ಜಯಶ್ರೀ, ಸೋನಾ ಮಸೂರಿ, ಕಾವೇರಿ, ಅಮಾನು ಪ್ರಬೇಧದ ಭತ್ತಗಳನ್ನು ಹೆಚ್ಚಾಗಿ ಬೆಳೆಯುತ್ತೇವೆ. ಡಿಸೆಂಬರ್ ತಿಂಗಳಲ್ಲಿ ಕ್ರಮವಾಗಿ ₹ 1900, 2400, 2200, 1850, 1710, 1900 ಬೆಲೆಗೆ ಮಾರಾಟ ಮಾಡಲಾಗಿತ್ತು. ಈಗ ಅವುಗಳ ಬೆಲೆ ಕ್ರಮವಾಗಿ ₹ 1,700, 1,600, 1,900, 1,400, 1,400, 1,600 ದರದಂತೆ ಖರೀದಿಸುತ್ತಿದ್ದಾರೆ. ಕ್ವಿಂಟಲ್‍ಗೆ ಸರಾಸರಿ ₹ 400 ಕಡಿಮೆಯಾಗಿರುವುದರಿಂದ ರೈತರಿಗೆ ಭಾರಿ ನಷ್ಟವಾಗಿದೆ’ ಎಂದು ಬೀರಗೊಂಡನಹಳ್ಳಿ ರೈತ ಪರಮೇಶ್ವರಪ್ಪ ಅಳಲು ತೋಡಿಕೊಂಡರು.

‘ಸಾಲ ಮಾಡಿ ಭತ್ತ ಬೆಳೆದಿರುತ್ತೇವೆ. ಕೊರೊನಾ ಕಾರಣದಿಂದ ಎಪಿಎಂಸಿ ಖರೀದಿಯನ್ನು ಸಮರ್ಥವಾಗಿ ಮಾಡುತ್ತಿಲ್ಲ. ರೈತರು ವಿಧಿಯಿಲ್ಲದೆ ವರ್ತಕರಿಗೆ ನೀಡುತ್ತಿದ್ದಾರೆ. ವರ್ತಕರು ಲಾಭದ ದೃಷ್ಟಿಯಿಂದ ಬಾಯಿಗೆ ಬಂದ ದರಕ್ಕೆ ಖರೀದಿಸುತ್ತಿದ್ದಾರೆ. ನಾವು ಬೆಲೆ ಬರುವವರೆಗೂ ಕಾಯುವ ಸ್ಥಿತಿಯಲ್ಲಿ ಇಲ್ಲ. ಈಗಾಗಲೇ ಕೊರೊನಾದಿಂದ ಎಲ್ಲಾ ಬೆಲೆಗಳು ಗಗನಕ್ಕೆ ಏರಿವೆ. ರೈತರು ಬೆಳೆದ ಬೆಳೆ ಮಾತ್ರ ಪಾತಳಕ್ಕೆ ಕುಸಿಯುತ್ತಿದೆ’ ಎನ್ನುತ್ತಾರೆ ಚೀಲೂರಿನ ರೈತ ಗಿರೀಶ್.

ADVERTISEMENT

‘ಅರ್ಥಿಕ ಚೇತರಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ಯಾಕೇಜ್‍ಗಳಲ್ಲೂ ರೈತರ ಮೂಲ ಸಮಸ್ಯೆಗಳ ಬಗ್ಗೆ ಗಮನ ನೀಡದಿರುವುದು ಬೇಸರ ತಂದಿದೆ. ನಮ್ಮ ಖಾತೆಗೆ ಹಣ ಹಾಕುವುದಕ್ಕಿಂತ ನಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಕೃಷಿ ಕ್ರಾಂತಿಗೆ ಗಮನ ನೀಡಬೇಕು’ ಎಂದು ಚಿಕ್ಕಬಾಸೂರು ರೈತ ಜ್ಞಾನೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಖರೀದಿ ಕೇಂದ್ರ ತೆರೆಯಲು ಒತ್ತಾಯ: ‘365 ದಿನವೂ ಬೆಳೆಗಳಿಗೆ ಅನುಗುಣವಾಗಿ ಆಯಾ ಭಾಗದಲ್ಲಿ ಹೊಬಳಿ ಮಟ್ಟದ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಭತ್ತಕ್ಕೆ ₹2500 ಬೆಂಬಲ ಬೆಲೆ ನಿಗದಿ ಮಾಡಿದರೆ ಮಾತ್ರ ರೈತರಿಗೆ ಅನುಕೂಲ. ಖರೀದಿ ಕೇಂದ್ರದಲ್ಲಿ ಒಬ್ಬ ರೈತ ಇಷ್ಟೆ ಪ್ರಮಾಣದಲ್ಲಿ ತಾನು ಬೆಳೆದ ಬೆಳೆಯನ್ನು ಮಾರಬೇಕು ಎಂಬ ನಿಬಂಧನೆಯನ್ನು ತೆಗೆಯಬೇಕು. ಗುಣಮಟ್ಟಕ್ಕೆ ಬೇಕಾದರೆ ನಿಬಂಧನೆ ಇರಲಿ. ದಾವಣಗೆರೆ ಜಿಲ್ಲೆಯಲ್ಲೂ ಮೆಕ್ಕಜೋಳ ಖರೀದಿ ಕೇಂದ್ರ ತೆರೆಯಬೇಕು. ಕೃಷಿ ಸಚಿವರಿಗೆ ಭತ್ತದ ಖರೀದಿ ಕೇಂದ್ರ ತೆರೆಯಲು ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದರು.

**
ಎಪಿಎಂಸಿಯಲ್ಲಿ ಭತ್ತದ ಖರೀದಿಗೆ ಸರ್ಕಾರದಿಂದ ₹ 1,800 ಬೆಂಬಲ ಬೆಲೆ ಹಾಗೂ 200 ಸಹಾಯಧನ ಇದೆ. ಕ್ವಿಂಟಲ್‍ಗೆ ₹ 2010 ನಿಗದಿ ಮಾಡಿದೆ
-ತುಷಾರ್ ಬಿ ಹೊಸೂರು, ತಹಶಿಲ್ದಾರ್, ಹೊನ್ನಾಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.