ಎಂ.ಪಿ.ರೇಣುಕಾಚಾರ್ಯ ಮತ್ತು ಬಸವಜಯ ಮೃತ್ಯುಂಜಯ ಸ್ವಾಮೀಜಿ
ದಾವಣಗೆರೆ: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್ ನಡೆಸಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಮುಗಿಸಲು ಪೊಲೀಸ್ ಅಧಿಕಾರಿಗಳೇ ಸಂಚು ರೂಪಿಸಿದ್ದರು’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದರು.
‘ಸ್ವಾಮೀಜಿಯನ್ನು ಮುಗಿಸಿದರೆ ಮೀಸಲಾತಿ ಹೋರಾಟ ನಿಲ್ಲುತ್ತದೆ ಎಂದು ಪೊಲೀಸರು ಭಾವಿಸಿದ್ದರು. ಸಮುದಾಯದವರ ಜೊತೆಗೆ ಸ್ವಾಮೀಜಿ ಮೇಲೂ ಹಲ್ಲೆ ನಡೆಸಿರುವುದು ಖಂಡನೀಯ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಕಿತ್ತೂರು ರಾಣಿ ಚನ್ನಮ್ಮಳ ವಂಶಸ್ಥರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಇದನ್ನು ಎಲ್ಲ ಸಮುದಾಯಗಳ ಮಠಾಧೀಶರು ಖಂಡಿಸಬೇಕು. ಇಲ್ಲವಾದರೆ ಯಾರಿಗೂ ಉಳಿಗಾಲವಿಲ್ಲದಂತಾಗುತ್ತದೆ’ ಎಂದರು.
‘ಲಾಠಿ ಚಾರ್ಜ್ ಬದಲು ಮುತ್ತು ಕೊಡಬೇಕಿತ್ತಾ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹಗುರವಾಗಿ ಮಾತನಾಡಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಹೋರಾಟದ ದಿಕ್ಕು ತಪ್ಪಿಸಲು ಅವರೇ ಕಲ್ಲು ತೂರಾಟಕ್ಕೆ ಕುಮ್ಮಕ್ಕು ನೀಡಿರಬಹುದು’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.