ADVERTISEMENT

ಕಾಂಗ್ರೆಸ್ ಕಡೆಗೆ ಜನರ ಒಲವು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 14:01 IST
Last Updated 19 ಡಿಸೆಂಬರ್ 2021, 14:01 IST
ಚನ್ನಗಿರಿಯ ಕಾಂಗ್ರೆಸ್ ಕಚೇರಿಗೆ ಭಾನುವಾರ ಭೇಟಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಮಾಜಿ ಶಾಸಕ ವಡ್ನಾಳ್ ರಾಜಣ್ಣ ಸ್ವಾಗತಿಸಿದರು.
ಚನ್ನಗಿರಿಯ ಕಾಂಗ್ರೆಸ್ ಕಚೇರಿಗೆ ಭಾನುವಾರ ಭೇಟಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಮಾಜಿ ಶಾಸಕ ವಡ್ನಾಳ್ ರಾಜಣ್ಣ ಸ್ವಾಗತಿಸಿದರು.   

ಚನ್ನಗಿರಿ: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳ ಆಡಳಿತ ವೈಖರಿಯಿಂದ ಬೇಸತ್ತ ರಾಜ್ಯದ ಜನರು ಕಾಂಗ್ರೆಸ್ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂಬುದಕ್ಕೆ ವಿಧಾನಪರಿಷತ್ ಚುನಾವಣೆಯೇ ಸಾಕ್ಷಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.

ಪಟ್ಟಣದ ಕಗತೂರು ರಸ್ತೆಯ ಕಾಂಗ್ರೆಸ್ ಕಚೇರಿಗೆ ಭಾನುವಾರ ಭೇಟಿ ನೀಡಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ವಿಧಾನಪರಿಷತ್ ಚುನಾವಣೆಯಲ್ಲಿ 11 ಸ್ಥಾನಗಳನ್ನು ಪಡೆದುಕೊಂಡರೆ, ವಿರೋಧಪಕ್ಷದಲ್ಲಿರುವ ಕಾಂಗ್ರೆಸ್ 11 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಒಗ್ಗಟ್ಟಾಗಿ ಚುನಾವಣಾ ಪ್ರಚಾರ ನಡೆಸಿದ್ದು ಪ್ರಮುಖ ಕಾರಣ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರಿಗೆ ಹತ್ತಿರವಾದರು. ಈ ಸಾಧನೆಯೇ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

ADVERTISEMENT

‘ಮುಂಬರುವ ಎಲ್ಲ ಚುನಾವಣೆಯನ್ನು ಎಲ್ಲ ಮುಖಂಡರು ಸಾಮೂಹಿಕವಾಗಿ ಪ್ರಚಾರ ನಡೆಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆಗಳ ಏರಿಕೆಯಿಂದಾಗಿ ಜನ ಸಾಮಾನ್ಯರು ಜೀವನ ನಡೆಸುವುದು ದುಸ್ತರವಾಗಿದೆ. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಚರ್ಚೆ ಇಲ್ಲದೇ ಕೇಂದ್ರ ಸರ್ಕಾರ ವಾಪಸ್ ಪಡೆದುಕೊಂಡಿದ್ದು ಸರಿಯಾದ ಮಾರ್ಗವಲ್ಲ. ಈ ಎಲ್ಲ ವೈಫಲ್ಯಗಳಿಂದ ಜನರು ಕಾಂಗ್ರೆಸ್ ಕಡೆಗೆ ಒಲವನ್ನು ತೋರುತ್ತಿದ್ದಾರೆ. ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಸಂಘಟನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ವಡ್ನಾಳ್ ರಾಜಣ್ಣ, ತಾಲ್ಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್, ವಡ್ನಾಳ್ ಜಗದೀಶ್, ವಡ್ನಾಳ್ ಅಶೋಕ್, ಹಿರಿಯ ಮುಖಂಡ ಸಿ. ನಾಗರಾಜ್, ಶಶಿಕಲಾ ಮೂರ್ತಿ, ವಿಜಯಕುಮಾರ್, ಆರ್. ಷಡಾಕ್ಷರಿ, ಜಬೀವುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.