ಜಗಳೂರು: ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಸಮೀಪ ಗುರುವಾರ ರಾತ್ರಿ ದಾಳಿಂಬೆ ತೋಟಕ್ಕೆ ನುಗ್ಗಿದ ಕಳ್ಳರು ಲಕ್ಷಾತರ ರೂಪಾಯಿ ಮೌಲ್ಯದ 4 ಟನ್‌ಗೂ ಹೆಚ್ಚು ದಾಳಿಂಬೆ ಹಣ್ಣುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಗ್ರಾಮದ ರವಿಕುಮಾರ್ ಎಂಬುವವರ ತೋಟಕ್ಕೆ ನುಗ್ಗಿರುವ ಐದಾರು ಮಂದಿ ಕಳ್ಳರು ನಾಲ್ಕು ಟನ್‌ಗೂ ಹೆಚ್ಚು ಹಣ್ಣುಗಳನ್ನು ಕಿತ್ತುಕೊಂಡು ಹೋಗಿದ್ದಾರೆ.
ಮೂರು ಲಕ್ಷಕ್ಕೂ ಹೆಚ್ಚು ಬೆಲೆಯ ದಾಳಿಂಬೆ ಹಣ್ಣುಗಳನ್ನು ಕಳವು ಮಾಡಲಾಗಿದೆ. ಸಾಲ ಮಾಡಿ ಬೆಳೆದ ಫಸಲು ಕೈಸೇರುವ ಮುನ್ನವೇ ಕಳ್ಳರ ಪಾಲಾಗಿರುವುದು ಆತಂಕ ತಂದಿದೆ ಎಂದು ರೈತ ರವಿಕುಮಾರ್ ತಿಳಿಸಿದ್ದಾರೆ.
ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಪಿಐ ಸಿದ್ರಾಮಯ್ಯ, ಎಸ್.ಐ. ಶರಣ ಬಸಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಿರೇಮಲ್ಲನಹೊಳೆ, ಚಿಕ್ಕಮಲ್ಲನಹೊಳೆ, ಕಮಂಡಲಗುಂದಿ ಮತ್ತು ತಾಯಿಟೊಣೆ ಮುಂತಾದ ಗ್ರಾಮಗಳಲ್ಲಿ ವ್ಯಾಪಕವಾಗಿ ದಾಳಿಂಬೆ ಬೆಳೆಯಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಹಿಂದಿ ಮಾತನಾಡುತ್ತಿದ್ದ ಕೆಲವರು ಜಮೀನಿನ ಬಳಿ ಬಂದು ಹೋಗಿರುವ ಬಗ್ಗೆ ಮಾಹಿತಿ ದೊರೆತಿದ್ದು, ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಸಿಪಿಐ ಸಿದ್ರಾಮಯ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.