
ದಾವಣಗೆರೆ: ‘ನಂದಿನಿ ಹಾಲು ಉತ್ಪಾದಕ ಸಂಸ್ಥೆಯಲ್ಲಿ ಆಹಾರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ. ಪ್ರತೀ ಹಂತದಲ್ಲೂ ಹಾಲಿನ ಪರಿಶೀಲನೆ ನಡೆಯುತ್ತದೆ’ ಎಂದು ಶಿಮುಲ್ ಹಾಲು ಒಕ್ಕೂಟದ ನಿರ್ದೇಶಕ ಬಿ.ಜಿ. ಬಸವರಾಜಪ್ಪ ತಿಳಿಸಿದರು.
ನಗರದ ಎವಿಕೆ ರಸ್ತೆಯಲ್ಲಿರುವ ರಂಗಮಹಲ್‌ನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ, ಶಿಮುಲ್ ಹಾಲು ಒಕ್ಕೂಟದ (ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ) ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳಿಗೆ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
‘ನಂದಿನಿ ಹಾಲು ಉತ್ಪಾದಕ ಸಂಸ್ಥೆಯು ಉತ್ತಮವಾಗಿ ಕೆಲಸ ಮಾಡುತ್ತಿದೆ. ಎಲ್ಲಾ ರೀತಿಯಲ್ಲೂ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದೆ. ಅನ್ಯ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಕೃತಕ ಹಾಲು ಉತ್ಪಾದಿಸಿ, ಮಾರಾಟ ಮಾಡುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಶಿಮುಲ್ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳು ಕಳಪೆ ಹಾಲನ್ನು ತಿರಸ್ಕರಿಸಿ, ಶುದ್ಧವಾದ ಹಾಲನ್ನೇ ತೆಗೆದುಕೊಳ್ಳುವುದರಿಂದ ನಂದಿನಿ ಸಂಸ್ಥೆ ದೇಶದಲ್ಲಿ ಎರಡನೇ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ. ನಮ್ಮವರಿಗೆ ತರಬೇತಿ ನೀಡುವ ಅವಶ್ಯಕತೆ ಇಲ್ಲ. ತರಬೇತಿ ಹೆಸರಿನಲ್ಲಿ ನಮ್ಮ ಸಿಬ್ಬಂದಿಯನ್ನು ಕರೆಸಿ ತೊಂದರೆ ನೀಡುವುದು ಬೇಡ’ ಎಂದು ಹೇಳಿದರು.
‘ನಂದಿನಿ ಹಾಲಿನ ಗುಣಮಟ್ಟ ಉತ್ತಮವಾಗಿದ್ದು, ನಮ್ಮ ಮೇಲೆಯೇ ಏಕೆ ಹೊಸ ಹೊಸ ಕಾನೂನುಗಳನ್ನು ಹೇರುತ್ತೀರಿ’ ಎಂದು ಅಧಿಕಾರಿಗಳಿಗೆ ಒಕ್ಕೂಟದ ಉಪಾಧ್ಯಕ್ಷ ಚೇತನ್ ನಾಡಿಗೇರ್ ಪ್ರಶ್ನಿಸಿದರು.
‘ಕಳಪೆ ಹಾಲು ಉತ್ಪಾದಕ ಸಂಸ್ಥೆಗಳ ಮೇಲೆ ಮೊದಲು ಕ್ರಮ ಕೈಗೊಂಡು ನಂತರ ನಂದಿನಿ ಹಾಲಿನ ಪರಿಶೀಲನೆಗೆ ಮುಂದಾಗಿ’ ಎಂದು ಅಧಿಕಾರಿಗಳಿಗೆ ಹೇಳಿದರು.
‘ಪ್ರತಿಯೊಬ್ಬ ನಾಗರಿಕರಿಗೂ ಗುಣಮಟ್ಟದ ಆಹಾರ ಪದಾರ್ಥ ಸಿಗುವಲ್ಲಿ ಹಾಲು ಉತ್ಪಾದಕ ಸಿಬ್ಬಂದಿ ಪಾತ್ರ ಬಹಳ ಮುಖ್ಯ. ಆದ್ದರಿಂದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣೀಕರಣದ ರಾಜ್ಯ ಘಟಕದ ಮುಖ್ಯಸ್ಥ ರಾಘವೇಂದ್ರ ಶೆಟ್ಟಿ ತರಬೇತಿಯನ್ನು ಸಮರ್ಥಿಸಿಕೊಂಡರು.
ಶಿಮುಲ್ ಹಾಲು ಒಕ್ಕೂಟದ ನಿರ್ದೇಶಕ ಜಗದೀಶಪ್ಪ ಬಣಕಾರ, ಎಫ್‌ಎಸ್‌ಎಸ್‌ಎಐ ಜಿಲ್ಲಾ ಅಂಕಿತಾಧಿಕಾರಿ ಡಾ. ಜೆ.ಎಸ್.ನಾಗರಾಜ, ಶಿಮುಲ್ ಒಕ್ಕೂಟದ ಉಪ ವ್ಯವಸ್ಥಾಪಕಿ ಸ್ಮಿತಾ ಜೆ.ಎಸ್., ಆಹಾರ ಸುರಕ್ಷತಾಧಿಕಾರಿಗಳಾದ ಕೊಟ್ರೇಶಪ್ಪ ಎಚ್., ಕಿಫಾಯತ್ ಅಹಮದ್, ಗವಿರಂಗಪ್ಪ, ನವೀನ್ ಕುಮಾರ್, ವಿಶ್ವನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಅಬ್ದುಲ್ ಖಾದರ್, ಶಿಮುಲ್ ವಿಸ್ತೀರ್ಣಾಧಿಕಾರಿಗಳಾದ ದೀಪಾ ನಾಡರ್, ಎಂ.ಸಿ. ಆನಂದಸ್ವಾಮಿ, ಕುಮಾರ್ ನಾಯಕ ಟಿ., ತರಬೇತುದಾರರಾದ ಪ್ರೀತಿ ಪಿ.ಕೆ. ಹಾಗೂ ಇನ್ನಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.