ADVERTISEMENT

ಶೇ 123ರಷ್ಟು ಆಸ್ತಿ ತೆರಿಗೆ ಸಂಗ್ರಹ: ಗುರಿ ಸಾಧನೆಯಲ್ಲಿ ದಾವಣಗೆರೆ ಜಿಲ್ಲೆ ಮೊದಲು

ಶೇ 123ರಷ್ಟು ಆಸ್ತಿ ತೆರಿಗೆ ಸಂಗ್ರಹಿಸಿದ ದಾವಣಗೆರೆ ನಗರ ಸ್ಥಳೀಯ ಸಂಸ್ಥೆಗಳು

ಜಿ.ಬಿ.ನಾಗರಾಜ್
Published 5 ಜುಲೈ 2025, 6:28 IST
Last Updated 5 ಜುಲೈ 2025, 6:28 IST
   

ದಾವಣಗೆರೆ: ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆ ಸಂಗ್ರಹಕ್ಕೆ ನಿಗದಿಪಡಿಸಿದ್ದ ಗುರಿ ಸಾಧನೆಯಲ್ಲಿ ಜಿಲ್ಲೆಯು ರಾಜ್ಯದಲ್ಲೇ ಮೊದಲ ಸ್ಥಾನಕ್ಕೇರಿದೆ. ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಆಗಿರುವ ಸುಧಾರಣೆ ಹಾಗೂ ನಿರಂತರ ಜಾಗೃತಿಯ ಪರಿಣಾಮವಾಗಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ ಕಂಡಿದೆ.

2024–25ನೇ ಆರ್ಥಿಕ ವರ್ಷದಲ್ಲಿ ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆಗಳಿಗೆ ₹ 51.07 ಕೋಟಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಗುರಿ ನಿಗದಿಪಡಿಸಲಾಗಿತ್ತು. ಈ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳು ₹ 62.91 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿವೆ. ನಿಗದಿತ ಗುರಿಗಿಂತ ₹ 11.84 ಕೋಟಿ ಹೆಚ್ಚುವರಿ ತೆರಿಗೆ ವಸೂಲಿ ಮಾಡಿ ಶೇ 123ರಷ್ಟು ಸಾಧನೆ ತೋರಿದೆ. ಇದರಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಕೊಡುಗೆ ಅಧಿಕವಾಗಿದೆ.

ಮಹಾನಗರ ಪಾಲಿಕೆಯೂ ಸೇರಿದಂತೆ ಜಿಲ್ಲೆಯಲ್ಲಿ 7 ನಗರ ಸ್ಥಳೀಯ ಸಂಸ್ಥೆಗಳಿವೆ. ಇದರಲ್ಲಿ ಹರಿಹರ ನಗರಸಭೆ, ಚನ್ನಗಿರಿ, ಹೊನ್ನಾಳಿ ಮತ್ತು ಮಲೆಬೆನ್ನೂರು ಪುರಸಭೆ ಹಾಗೂ ಜಗಳೂರು, ನ್ಯಾಮತಿ ಪಟ್ಟಣ ಪಂಚಾಯಿತಿ ಹಂತದಲ್ಲಿವೆ. ಈ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2.57 ಲಕ್ಷ ಆಸ್ತಿಗಳಿವೆ. ಕಳೆದ ಆರ್ಥಿಕ ವರ್ಷದಲ್ಲಿ ಹೊನ್ನಾಳಿ ಮತ್ತು ಜಗಳೂರು ಹೊರತುಪಡಿಸಿ ಉಳಿದ ಸ್ಥಳೀಯ ಸಂಸ್ಥೆಗಳು ನಿಗದಿತ ಗುರಿ ತಲುಪಿವೆ.

ADVERTISEMENT

ಪಾವತಿ ವ್ಯವಸ್ಥೆ ಸರಳ: ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯನ್ನು ಸರಳಗೊಳಿಸಲಾಗಿದೆ. ಆಸ್ತಿಯ ಮಾಲೀಕರು ಸಲುಭವಾಗಿ ತೆರಿಗೆ ಕಟ್ಟುವ ನೀತಿ ರೂಪಿಸಲಾಗಿದೆ. ಯುಪಿಐ ಆಧಾರಿತ ತೆರಿಗೆ ಪಾವತಿ ವ್ಯವಸ್ಥೆ 2022–23ರಿಂದ ಅನುಷ್ಠಾನಕ್ಕೆ ಬಂದಿದೆ. ವರ್ಷದಿಂದ ವರ್ಷಕ್ಕೆ ಇದು ತೆರಿಗೆದಾರರ ಸ್ನೇಹಿಯಾಗುತ್ತಿದೆ. ಆಸ್ತಿ ತೆರಿಗೆ ಪಾವತಿಸುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ.

‘ಆಸ್ತಿ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ಈ ಮೊದಲು ಸಾಕಷ್ಟು ಅಡೆತಡೆಗಳಿದ್ದವು. ಕಟ್ಟಡ, ನಿವೇಶನದ ಉದ್ದ, ಅಗಲವನ್ನು ಲೆಕ್ಕಹಾಕಿ ಸಿಬ್ಬಂದಿ ತೆರಿಗೆ ನಿಗದಿಪಡಿಸುತ್ತಿದ್ದರು. ಈ ರಸೀದಿ ಹಾಗೂ ಚಲನ್‌ ಹಿಡಿದು ಬ್ಯಾಂಕ್‌ ಸರತಿಯಲ್ಲಿ ಕಾಯಬೇಕಿತ್ತು. ಬಹುತೇಕ ತೆರಿಗೆದಾರರಿಗೆ ಇದೊಂದು ಹೊರೆಯಾಗಿ ಪರಿಣಮಿಸಿತ್ತು. ವಸೂಲಾತಿಯಲ್ಲಿ ನಿಗದಿತ ಗುರಿ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ತೆರಿಗೆಗೆ ವಿಶಿಷ್ಟ ತಂತ್ರಾಂಶ, ತೆರಿಗೆ ಗಣಕ ರೂಪಿಸಿದ ಬಳಿಕ ಸಕಾರಾತ್ಮಕ ಬೆಳವಣಿಗೆ ಸಾಧ್ಯವಾಗಿದೆ’ ಎನ್ನುತ್ತಾರೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್‌.

ನಗರ ಸ್ಥಳೀಯ ಸಂಸ್ಥೆಯ ಅಧಿಕೃತ ಜಾಲತಾಣದ ಆಸ್ತಿ ತೆರಿಗೆ ವಿಭಾಗದಲ್ಲಿ ಆಸ್ತಿಯ ಸಂಖ್ಯೆ ನಮೂದಿಸಿದರೆ ತೆರಿಗೆಯ ವಿವರ ಲಭ್ಯವಾಗುತ್ತದೆ. ಕಟ್ಟಡ, ನಿವೇಶನದ ಉದ್ದ, ಅಗಲವನ್ನು ಲೆಕ್ಕಹಾಕಿ ಗಣಕ ತಂತ್ರಾಂಶ ಕ್ಷಣಾರ್ಧದಲ್ಲಿ ತೆರಿಗೆಯ ಮೊತ್ತ ಮುಂದಿಡುತ್ತದೆ. ಯುಪಿಐ ಆಧಾರಿತ ಆ್ಯಪ್‌ ಮೂಲಕವೂ ತೆರಿಗೆಯನ್ನು ಸಲುಭವಾಗಿ ಪಾವತಿಸಬಹುದಾಗಿದೆ.

ವಾರ್ಡ್‌ವಾರು ಜಾಗೃತಿ: ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ವಾರ್ಡ್‌ವಾರು ಜಾಗೃತಿ ಮೂಡಿಸುವ ಕಾರ್ಯ ಫಲಪ್ರದವಾಗಿರುವಂತೆ ಕಾಣುತ್ತಿದೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇ 127, ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಶೇ 122 ಹಾಗೂ ನ್ಯಾಮತಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 128ರಷ್ಟು ತೆರಿಗೆ ವಸೂಲಾಗಿದೆ.

‘ತೆರಿಗೆ ಪಾವತಿ ಕುರಿತು ಪ್ರತಿ ವಾರ್ಡ್‌ಗಳಲ್ಲಿ ಜಾಗೃತಿ ಜಾಥಾ ನಡೆಸಲಾಗಿದೆ. ನಿರಂತರವಾಗಿ ಮಾಡುತ್ತಿರುವ ಈ ಕಾರ್ಯದಿಂದ ತೆರಿಗೆ ಪಾವತಿಗೆ ಜನರು ಆಸಕ್ತಿ ತೋರುತ್ತಿದ್ದಾರೆ’ ಎನ್ನುತ್ತಾರೆ ಮಹಾಂತೇಶ್‌.

‘ಇ–ಸ್ವತ್ತು’ ಪಡೆಯಲು ತೆರಿಗೆ ಪಾವತಿ ಕಡ್ಡಾಯ. ‘ಇ–ಸ್ವತ್ತು’ ಕೇಳಿ ಬರುವವರಿಗೆ ತೆರಿಗೆ ಪಾವತಿಸುವಂತೆ ಸೂಚಿಸಲಾಗುತ್ತಿದೆ. ಇದರಿಂದಲೂ ತೆರಿಗೆ ಸಂಗ್ರಹ ಹೆಚ್ಚಾಗಿದೆ
-ಮಹಾಂತೇಶ್‌, ಯೋಜನಾ ನಿರ್ದೇಶಕ ನಗರಾಭಿವೃದ್ಧಿ ಕೋಶ
ಈ ಹಿಂದೆ ನೀರಿನ ಕರ ಆಸ್ತಿ ತೆರಿಗೆಯನ್ನು ಪ್ರತ್ಯೇಕವಾಗಿ ಪಾವತಿಸುವ ವ್ಯವಸ್ಥೆ ಇತ್ತು. ಆನ್‌ಲೈನ್‌ ವ್ಯವಸ್ಥೆ ರೂಪಿಸಿ ತಂತ್ರಾಂಶ ಅಳವಡಿಸಿದ ಬಳಿಕ ಸರತಿ ಸಾಲಿನಲ್ಲಿ ಕಾಯುವುದು ತಪ್ಪಿದೆ
-ರೇಣುಕಾ, ಆಯುಕ್ತೆ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.