ADVERTISEMENT

PV Web Exclusive: ತಾವೇ ಇಳಿದು ಕೆಲಸ ಮಾಡುವ ಗ್ರಾ.ಪಂ. ಅಧ್ಯಕ್ಷ ಮಂಜಪ್ಪ

ಬಾಲಕೃಷ್ಣ ಪಿ.ಎಚ್‌
Published 22 ನವೆಂಬರ್ 2020, 12:15 IST
Last Updated 22 ನವೆಂಬರ್ 2020, 12:15 IST
ಕಾಲುವೆಯಲ್ಲಿ ಬೆಳೆದ ಕಳೆಗಿಡಗಳನ್ನು ಕೀಳುತ್ತಿರುವ ಮಂಜಪ್ಪ
ಕಾಲುವೆಯಲ್ಲಿ ಬೆಳೆದ ಕಳೆಗಿಡಗಳನ್ನು ಕೀಳುತ್ತಿರುವ ಮಂಜಪ್ಪ   
""
""
""

ದಾವಣಗೆರೆ: ಚರಂಡಿ ಕಟ್ಟಿಕೊಂಡರೆ ತಾವೇ ಹಾರೆ ಗುದ್ದಲಿ ಹಿಡಿದು ಸರಿ ಮಾಡುವ, ಪೊದೆ ಬೆಳೆದಿದ್ದರೆ ಕತ್ತಿ ತಂದು ಕಡಿದು ಸ್ವಚ್ಛಗೊಳಿಸುವ, ನೀರಿನ ಪೈಪ್‌ ಸರಿಮಾಡುವ, ವಿದ್ಯುತ್‌ ವಯರ್‌ ಜೋಡಿಸುವ ಅಧ್ಯಕ್ಷ ದಾವಣಗೆರೆ ಸಮೀಪದ ಬೇತೂರು ಗ್ರಾಮ ಪಂಚಾಯಿತಿಯಲ್ಲಿದ್ದಾರೆ.

ಎಚ್‌.ಮಂಜಪ್ಪ ಅವರೇ ಈ ಕಾಯಕಯೋಗಿ ಅಧ್ಯಕ್ಷ. ಹತ್ತಿಗಿರಾಣಿಯಲ್ಲಿ ಹಮಾಲಿ ಕೆಲಸ ಮಾಡುವ ಮಂಜಪ್ಪ ಅವರಿಗೆ ಶ್ರಮದ ಕೆಲಸ ಹೊಸತೇನಲ್ಲ. ಹಾಗಾಗಿ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

‘ಅಧ್ಯಕ್ಷರಾದವರು ನಿಂತು ಕೆಲಸ ಮಾಡಿಸುತ್ತಿದ್ದರು. ಕೆಲವು ಬಾರಿ ಜನರು ಹೇಳಿದ ಎಷ್ಟೋ ದಿನಗಳು, ತಿಂಗಳುಗಳು ಕಳೆದ ಮೇಲೆ ಕೆಲಸಗಳಾಗುತ್ತಿದ್ದವು. ಮಂಜಪ್ಪ ಅವರು ಹಾಗಲ್ಲ. ನಿಂತು ಕೆಲಸ ಮಾಡಿಸುವುದಲ್ಲ. ಅವರೇ ಕೆಲಸ ಮಾಡುವ ವಿಶಿಷ್ಟ ವ್ಯಕ್ತಿತ್ವ’ ಎಂದು ಬೇತೂರಿನ ನಾಗರಾಜ್‌ ಅಭಿಮಾನ ವ್ಯಕ್ತಪಡಿಸಿದರು.

ADVERTISEMENT
ಮ್ಯಾನ್‌ಹೋಲ್‌ ದುರುಸ್ತಿಯಲ್ಲಿ ತೊಡಗಿರುವ ಮಂಜಪ್ಪ

‘ಗ್ರಾಮ ಪಂಚಾಯಿತಿಗೆ ಬರುವ ಅನುದಾನ ಬಹಳ ಕಡಿಮೆ. ಎಲ್ಲೋ ಚರಂಡಿ ಕಟ್ಟಿಕೊಂಡರೆ ಅದಕ್ಕೆ ಕೂಲಿ ಕೆಲಸ ಮಾಡಿಸಿದರೆ ಅವರಿಗೆ ಕೂಡಲೇ ಕೂಲಿ ಕೊಡಲು ಆಗುವುದಿಲ್ಲ. ಕೆಲವು ಪ್ರಕ್ರಿಯೆಗಳು ನಡೆಯಬೇಕಾಗುತ್ತದೆ. ನನಗೆ ಕೆಲಸ ಮಾಡಲು ಗೊತ್ತಿರುವುದರಿಂದ ನಾನೇ ಮಾಡಿಬಿಟ್ಟರೆ ಸಮಸ್ಯೆ ಕೂಡಲೇ ಇತ್ಯರ್ಥವಾಗಿ ಬಿಡುತ್ತದೆ. ಕೂಲಿ ಕೊಡುವ ಪ್ರಮೇಯವೂ ಬರುವುದಿಲ್ಲ’ ಎನ್ನುತ್ತಾರೆ ಅಧ್ಯಕ್ಷ ಮಂಜಪ್ಪ.

‘ಇಲ್ಲಿನ ಅಂಚೆ ಅಧಿಕಾರಿ ಒಬ್ಬರು ಜನರಿಗೆ ನೀಡಬೇಕಿದ್ದ ಆಯುಷ್ಮಾನ್‌ ಕಾರ್ಡ್‌, ಸಾಲಮನ್ನಾದ ಸ್ಲಿಪ್‌ಗಳನ್ನು ತಿಪ್ಪೆಗೆ ಎಸೆದಿದ್ದರು. ಮಂಜಪ್ಪ ಅವರು ಅಧ್ಯಕ್ಷರಾದ ಎರಡೇ ದಿನಗಳಲ್ಲಿ ಇದನ್ನು ಪತ್ತೆಹಚ್ಚಿದ್ದಲ್ಲದೇ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿಗೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿದ್ದರು. ಕರ್ತವ್ಯ ಲೋಪದ ಮೇಲೆ ಅವರನ್ನು ಈಗ ಮೇಲಧಿಕಾರಿಗಳು ಅಮಾನತು ಮಾಡಿದ್ದಾರೆ. ಇದು ಅಧ್ಯಕ್ಷರ ದೊಡ್ಡ ಸಾಧನೆ’ ಎನ್ನುವುದು ಗ್ರಾಮ ಪಮಚಾಯಿತಿ ಸದಸ್ಯ ಕರಿಬಸಪ್ಪ ಅವರ ಅಭಿಪ್ರಾಯವಾಗಿದೆ.

ಹತ್ತಿ ಗಿರಣಿಯಲ್ಲಿ ಹಮಾಲಿಯಾಗಿ ಕೆಲಸ ಮಾಡುತ್ತಿರುವ ಮಂಜಪ್ಪ

‘ಈ ಪ್ರಕರಣ ಪತ್ತೆ ಹಚ್ಚಿದ್ದರಿಂದ ಯಾರಿಗೆಲ್ಲ ಆಯುಷ್ಮಾನ್‌ ಕಾರ್ಡ್‌ ಬಂದಿಲ್ಲ. ಅದು ಯಾಕೆ ಬಂದಿಲ್ಲ ಎಂಬುದು ಗೊತ್ತಾಯಿತು. ಇದಲ್ಲದೇ ವೃದ್ಧಾಪ್ಯ ವೇತನ ಕೊಡುವಾಗಲೂ ಎರಡು ತಿಂಗಳಿಗೊಮ್ಮೆ ಒಂದೇ ತಿಂಗಳಿನ ವೇತನ ನೀಡಿ, ಪೋಸ್ಟ್‌ಮ್ಯಾನ್‌ ಒಳಗೆ ಹಾಕಿಕೊಳ್ಳುತ್ತಿರುವುದನ್ನು ಕೂಡ ಪತ್ತೆಹಚ್ಚಿದೆ. ಇದರಿಂದ ಈಗ ನಿಯತ್ತಾಗಿ ವೃದ್ಧಾಪ್ಯ ವೇತನ ಸಹಿತ ಜನರಿಗೆ ತಲುಬೇಕಾದ ಸೌಲಭ್ಯಗಳು ತಲುಪುತ್ತಿವೆ’ ಎಂದು ಮಂಜಪ್ಪ ನೆನಪು ಮಾಡಿಕೊಂಡರು.

ಮಂಜಪ್ಪ ಅವರು ಐದನೇ ತರಗತಿವರೆಗೆ ಮಾತ್ರ ಓದಿದವರು. ಆದರೂ ತಮ್ಮ ಕೆಲಸಗಳ ಕಾರಣದಿಂದಾಗಿ ಬೇತೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಬೇತೂರು, ಬಿ.ಚಿತ್ತನಹಳ್ಳಿ, ಬಿ.ಕಲಪನಹಳ್ಳಿ ಗ್ರಾಮಗಳಲ್ಲಿ ಮನೆ ಮಾತಾಗಿದ್ದಾರೆ. ಪಂಚಾಯಿತಿಯಿಂದ ನಿಯಮಿತವಾಗಿ ಆಗಬೇಕಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಅದು ಮಂಜಪ್ಪ ಅವರ ಬದಲು ಯಾರು ಅಧ್ಯಕ್ಷರಾದರೂ ಮಾಡುತ್ತಾರೆ. ಅದರ ಜತೆಗೆ ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ, ಇಳಿದು ಕೆಲಸ ಮಾಡುವ ಗುಣದಿಂದಾಗಿ ಮಂಜಪ್ಪ ಬೇರೆಯವರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.

ಚರಂಡಿಗೆ ಅಡ್ಡವಾಗಿದ್ದ ಗಿಡಮರ ತೆರವುಗೊಳಿಸುತ್ತಿರುವ ಮಂಜಪ್ಪ

‘ಮನುಷ್ಯ ಜೀವನ ಸಣ್ಣದು. ಹುಟ್ಟುವಾಗ ಏನೂ ತಂದಿರುವುದಿಲ್ಲ. ಸಾಯುವಾಗ ಏನೂ ಒಯ್ಯುವುದಿಲ್ಲ. ನಡುವೆ ಬದುಕಿನಲ್ಲಿ ಯಾರಿಗೂ ಅನ್ಯಾಯ ಮಾಡದೇ ನಾಲ್ಕು ಜನರಿಗೆ ನನ್ನಿಂದಾದಷ್ಟು ನೆರವಾಗಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದು ಮಂಜಪ್ಪ ವಿನಮ್ರತೆ ತೋರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.