ADVERTISEMENT

ಮೌನಿ ಪ್ರಧಾನಿ ಜಿಡಿಪಿ ಏರಿಸಿದರೆ ಬಾಯಿಬಡುಕರಿಂದ ಪಾತಾಳಕ್ಕೆ: ಹನುಮಂತಯ್ಯ ಟೀಕೆ

ಆಗ್ನೇಯ ಪದವೀಧರ ಕ್ಷೇತ್ರದ ಪ್ರಚಾರ ಸಭೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 10:04 IST
Last Updated 18 ಅಕ್ಟೋಬರ್ 2020, 10:04 IST
ಎಲ್‌.ಹನುಮಂತಯ್ಯ
ಎಲ್‌.ಹನುಮಂತಯ್ಯ   

ದಾವಣಗೆರೆ: ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಅವರನ್ನು ಮೌನಿ ಪ್ರಧಾನಿ ಎಂದು ನರೇಂದ್ರ ಮೋದಿ ಮತ್ತು ಬಿಜೆಪಿಯವರು ಟೀಕಿಸುತ್ತಿದ್ದರು. ಆ ಮೌನಿ ಪ್ರಧಾನಿ ದೇಶದ ಜಿಡಿಪಿಯನ್ನು ಶೇ 10ಕ್ಕೆ ಏರಿಸಿದ್ದರು. ಬಾಯಿಬಡುಕ ಪ್ರಧಾನಿ ಅದನ್ನು ಪಾತಾಳಕ್ಕೆ ತಳ್ಳಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಅಧಿಕಾರದಲ್ಲಿ ಇರುವವರು ತಪ್ಪು ಮಾಡುತ್ತಾರೆ. ಕಾಂಗ್ರೆಸ್‌ ಮಾಡಿದ ಹಿಡಿಯಷ್ಟು ತಪ್ಪುಗಳನ್ನು ಬ್ರಹ್ಮಾಂಡ ಎಂದು ತೋರಿಸಿ, ಅಪಪ್ರಚಾರ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಳೆದ ಆರು ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆ ಏನು ಎಂಬುದು ಗೊತ್ತಾಗಿದೆ. ಸೈನಿಕರ ಒಂದು ತಲೆಗೆ 10 ರುಂಡ ತರುತ್ತೇವೆ ಎಂದವರು ತರುವುದು ಬಿಡಿ, ನಮ್ಮ ಸೈನಿಕರ ತಲೆ ಉಳಿಸುವ ಕೆಲಸ ಕೂಡ ಮಾಡಲಿಲ್ಲ. ವಿಶ್ವಗುರು ಎನ್ಜುತ್ತಾರೆ. ಪಾಕಿಸ್ತಾನ, ಬಾಂಗ್ಲಾ, ಚೀನಾ, ಶ್ರೀಲಂಕಾ ಸಹಿತ ಯಾವ ದೇಶದ ಜತೆಗೂ ಉತ್ತಮ ಸಂಬಂಧ ಉಳಿದಿಲ್ಲ. ಚೀನಾ ನಮ್ಮ ಭೂಮಿಯನ್ನೇ ಆಕ್ರಮಿಸಿದರೂ ಮೋದಿ ಸುಮ್ಮನಿದ್ದಾರೆ ಎಂದು ಹರಿಹಾಯ್ದರು.

ADVERTISEMENT

ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿ ಪದವೀಧರರನ್ನು ಬೀದಿಪಾಲು ಮಾಡಿದರು. ಈಗಲೂ ಬಿಜೆಪಿಗೆ ಓಟು ಹಾಕುತ್ತಾರೆ ಎಂದರೆ ಏನು ಹೇಳಲು ಸಾಧ್ಯವಿಲ್ಲ. ಟ್ರಂಪ್‌ಗೆ ಕಾಯಿಲೆ ಬಂದರೆ ಟ್ವೀಟ್‌ ಮಾಡಲು, ನವಿಲಿಗೆ ಕಾಳು ಹಾಕಲು ಸಮಯ ಇರುವ ಪ್ರಧಾನಿಗೆ ಹಾಥರಸ್‌ ಘಟನೆಗೆ ಕನಿಷ್ಠ ದುಃಖ ವ್ಯಕ್ತಪಡಿಸುವುದಕ್ಕೂ ಸಮಯವಿಲ್ಲದಿರುವುದು ವಿಪರ್ಯಾಸ ಎಂದರು.

ಶಿಕ್ಷಕರ, ಪದವೀಧರರ ಕ್ಷೇತ್ರಗಳ ಬಗ್ಗೆ ಕಾಂಗ್ರೆಸ್‌ ಸರ್ಕಾರ ಇರುವಾಗಲೂ ಅಷ್ಟೊಂದು ಗಮನ ಹರಿಸಿರಲಿಲ್ಲ. ಓದಿದವರು ಕಾಂಗ್ರೆಸ್‌ಗೆ ಓಟು ಹಾಕಲ್ಲ ಎಂಬ ಕೆಟ್ಟ ಅಭಿಪ್ರಾಯವನ್ನು ಕಾಂಗ್ರೆಸ್‌ ನಾಯಕರು ಹೊಂದಿರುವುದು ಅದಕ್ಕೆ ಕಾರಣ. ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ಕಾಂಗ್ರೆಸ್‌ ಗೆಲ್ಲಲಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಎಲ್ಲರನ್ನು ಒಳಗೊಳ್ಳುವ ಪಕ್ಷ. ಬ್ರಾಹ್ಮಣರಿಂದ ಹಿಡಿದು ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ನೀಡುವ ಪಕ್ಷ. ಜೆಡಿಎಸ್‌, ಬಿಜೆಪಿಯಂತೆ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಾದ ಪಕ್ಷವಲ್ಲ ಎಂದರು.

ಕಾಂಗ್ರೆಸ್‌ ಅಧಿಕಾರದಲ್ಲಿ ಇರುವಾಗಲೂ ಅತ್ಯಾಚಾರಗಳು ನಡೆದಿದ್ದವು. ಕೂಡಲೇ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಾಗಿತ್ತು. ಸಂತ್ರಸ್ತರ ಪರ ನಿಲ್ಲಲಾಗಿತ್ತು. ಆದರೆ ಬಿಜೆಪಿ ಅತ್ಯಾಚಾರಿಗಳ ಪರ ನಿಂತಿದೆ. ಈ ಬಾರಿ ಬಿಜೆಪಿಗೆ ಮತ ಹಾಕಿದರೆ ಪದವೀಧರರು ಅತ್ಯಾಚಾರಕ್ಕೆ ಮುದ್ರೆ ಒತ್ತಿದಂತೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಕೊಂಡಜ್ಜಿ ಮೋಹನ್‌, ಕಾಂಗ್ರೆಸ್‌ ನಾಯಕರಾದ ಅಬ್ದುಲ್‌ ಜಬ್ಬಾರ್‌, ಡಿ. ಬಸವರಾಜ್‌, ಕೆ.ಎಸ್‌. ಬಸವಂತಪ್ಪ, ಕೆ. ಶಿವಮೂರ್ತಿ ನಾಯ್ಕ್‌, ಕೆ. ಇಬ್ರಾಹಿಂ ಖಲೀಲ್‌, ಅಯೂಬ್‌ ಪೈಲ್ವಾನ್‌, ದಿನೇಶ್‌ ಕೆ. ಶೆಟ್ಟಿ, ಮಲ್ಲಿಕಾರ್ಜುನ, ಪ್ರೊ. ಮುರುಗೇಂದ್ರಪ್ಪ ಅವರೂ ಇದ್ದರು.

‘ಪ್ರಥಮ ಪ್ರಾಶಸ್ತ್ಯದ ಮತ ನೀಡಿ’
ಕಾಂಗ್ರೆಸ್‌ ಬೆಂಬಲಿಸುವ ಎಲ್ಲರೂ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು. ಅಲ್ಲಿ ಪಕ್ಷದ ಚಿಹ್ನೆ ಇರುವುದಿಲ್ಲ. ಹೆಸರು ಮತ್ತು ಭಾವಚಿತ್ರ ಇರುತ್ತದೆ. ಒಂದು ಎಂದು ಸಂಖ್ಯೆ ಬರೆಯಬೇಕು. ಅಕ್ಷರಗಳಲ್ಲಿ ಬರೆಯಬಾರದು. ರೈಟ್‌ ಮಾರ್ಕ್‌ ಹಾಕಬಾರದು. ಪ್ರತಿ ಬಾರಿ ಶೇ 15ರಷ್ಟು ಮತಗಳು ಈ ಕಾರಣಕ್ಕಾಗಿಯೇ ಅಸಿಂಧುಗೊಳ್ಳುತ್ತಿವೆ ಎಂದು ಅಭ್ಯರ್ಥಿ ರಮೇಶ್‌ಬಾಬು ತಿಳಿಸಿದರು.

ಐದು ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಮುಂದಿದೆ. ಪಕ್ಷದ ಕಾರ್ಯಕರ್ತರು ಅವರನ್ನು ಪದವೀಧರರನ್ನು ಮತ ಹಾಕಿಸುವ ಕೆಲಸ ಮಾಡಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಶಿಕ್ಷಕರ, ಪದವೀಧರರ 37 ಬೇಡಿಕೆಗಳನ್ನು ಈಡೇರಿಸಿದ್ದರು ಎಂದರು.

ಕಾಂಗ್ರೆಸ್‌ ಗೆದ್ದಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್‌ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಹೇಳುತ್ತಾ ಹೋಗುತ್ತಿದ್ದಾರೆ. ಹಿಂದೆ ಈ ಕ್ಷೇತ್ರದಿಂದ ರೆಡ್ಡಿ, ವೀರಭದ್ರಪ್ಪ ಗೆದ್ದಿದ್ದು ಯಾವ ಪಕ್ಷದಿಂದ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.