ADVERTISEMENT

ದಾವಣಗೆರೆ| ಎರಡು ರೂಪಾಯಿ ಡಾಕ್ಟ್ರು ಬಸವಂತಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಈಗಲೂ ರೋಗಿಗಳು ಕೊಟ್ಟ ಶುಲ್ಕವನ್ನಷ್ಟೇ ಪಡೆಯುವ ಡಾ. ಬಸವಂತಪ್ಪ

ಬಾಲಕೃಷ್ಣ ಪಿ.ಎಚ್‌
Published 30 ಅಕ್ಟೋಬರ್ 2022, 16:27 IST
Last Updated 30 ಅಕ್ಟೋಬರ್ 2022, 16:27 IST
ಡಾ. ಎಂ. ಬಸವಂತಪ್ಪ
ಡಾ. ಎಂ. ಬಸವಂತಪ್ಪ   

ದಾವಣಗೆರೆ: ಎರಡು ರೂಪಾಯಿ ಡಾಕ್ಟ್ರು ಎಂದೇ ಪ್ರಸಿದ್ಧರಾಗಿರುವ ಸಂತೇಬೆನ್ನೂರು ಸಿದ್ಧೇಶ್ವರ ಕ್ಲಿನಿಕ್‌ನ ಡಾ. ಎಂ. ಬಸವಂತಪ್ಪ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.

ಸಂತೇಬೆನ್ನೂರಿನ ಸಿದ್ದಪ್ಪ–ಹಾಲಮ್ಮ ದಂಪತಿಯ ಮೂವರು ಪುತ್ರರು, ಮೂವರು ಪುತ್ರಿಯರಲ್ಲಿ ಎರಡನೇಯವರಾಗಿರುವ ಬಸವಂತಪ್ಪ ಅವರು ತಂದೆಯ ಮಾತನ್ನು ಆದರ್ಶವಾಗಿ ತೆಗೆದುಕೊಂಡು ಬಡವರಿಗೆ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಿ ‘ಬಡವರ ಡಾಕ್ಟ್ರು’ ಆದವರು.

1951ರಲ್ಲಿ ಜನಿಸಿದ ಬಸವಂತಪ್ಪ ಸಿರಿಗೆರೆ ಎಸ್‌ಟಿಜೆ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದರು. ಶಿವಮೊಗ್ಗ ಸಹ್ಯಾದ್ರಿ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮೈಸೂರಿನ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಮಾಡಿದ್ದರು. ಬಳಿಕ ಸ್ವಲ್ಪ ಸಮಯ ಹುಣಸೂರಿನಲ್ಲಿ ಬೇರೆಯವರ ಕ್ಲಿನಿಕ್‌ನಲ್ಲಿ ಕೆಲಸ ಮಾಡಿದ್ದರು. 1987ರಲ್ಲಿ ಸಂತೇಬೆನ್ನೂರಿನಲ್ಲಿ ಸಿದ್ದೇಶ್ವರ ಕ್ಲಿನಿಕ್‌ ಆರಂಭಿಸಿದ್ದರು.

ADVERTISEMENT

‘ಬಡವರಿಗೆ ಹೊರೆಯಾಗಬೇಡ. ಅವರ ಆರೋಗ್ಯ ಕಾಪಾಡುವುದು ವೈದ್ಯಧರ್ಮ’ ಎಂದು ಅವರ ತಂದೆ ಸಿದ್ದೇಶ್‌ ಅವರು ಮಗನಿಗೆ ಹೇಳಿದ್ದರು. ಅದರಂತೆ 1987ರಿಂದ 18 ವರ್ಷಗಳ ಕಾಲ ಅವರು ವೈದ್ಯರ ಶುಲ್ಕ ₹ 2 ಮಾತ್ರ ಪಡೆದಿದ್ದರು. ಬಳಿಕ ಒಂದು ದಶಕಕ್ಕೂ ಹೆಚ್ಚು ಸಮಯ ₹ 5 ಅವರ ಶುಲ್ಕವಾಗಿತ್ತು. ಈಗಲೂ ಜನರು ₹ 20, ₹ 30 ಎಷ್ಟು ನೀಡುತ್ತಾರೋ ಅಷ್ಟೇ ಅವರ ಶುಲ್ಕವಾಗಿದೆ. ತೀರ ಬಡವರು ದುಡ್ಡಿಲ್ಲ ಎಂದರೆ ಶುಲ್ಕ ಪಡೆಯದೇ ಚಿಕಿತ್ಸೆ ನೀಡುತ್ತಿದ್ದಾರೆ.

‘ನನಗೀಗ 71 ವರ್ಷ. ತಂದೆಯ ಮಾತನ್ನು ಇಲ್ಲಿವರೆಗೆ ನಡೆಸಿಕೊಂಡು ಬಂದಿದ್ದೇನೆ. ನನ್ನ ದುಡಿಮೆಯಿಂದ ಇಲ್ಲಿವರೆಗೆ ಸ್ವಂತ ಕಟ್ಟಡ ಮಾಡಿ ಅಲ್ಲಿ ಕ್ಲಿನಿಕ್‌ ಆರಂಭಿಸಲು ಆಗಿಲ್ಲ. ಈಗಲೂ ಬಾಡಿಗೆ ಕೊಠಡಿಯಲ್ಲೇ ಕ್ಲಿನಿಕ್‌ ನಡೆಯುತ್ತಿದೆ. ತಂದೆ ಮಾಡಿಟ್ಟ 2–3 ಎಕರೆ ತೋಟದಿಂದಾಗಿ ನನ್ನ ಜೀವನ ಸುಖಕರವಾಗಿ ನಡೆಯುತ್ತಿದೆ. ನಾನು ಶಾಶ್ವತವಲ್ಲ. ನನ್ನ ಸೇವೆ ಶಾಶ್ವತ ಎಂದು ನಂಬಿ ಕೆಲಸ ಮಾಡುತ್ತಾ ಬಂದಿದ್ದೇನೆ. ಕೊರೊನಾ ಕಾಲದಲ್ಲಿ ಕೂಡ ನಾನು ಕ್ಲಿನಿಕ್‌ ಮುಚ್ಚದೇ ಜನರ ಸೇವೆ ಮಾಡಿದ್ದೇನೆ’ ಎಂದು ತನ್ನ ಸಂತೃಪ್ತ ಸೇವೆಯನ್ನು ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡರು.

‘ನನ್ನ ಮಗ ಮಂಜುನಾಥ್‌ಗೆ ಮೆಡಿಕಲ್‌ ಓದಬೇಕು ಎಂದು ಭಾರಿ ಆಸೆ ಇತ್ತು. ಆದರೆ ಅದರ ಶುಲ್ಕ ಕಟ್ಟಲು ನನ್ನಲ್ಲಿ ಹಣ ಇಲ್ಲದ ಕಾರಣ ಎಂಜಿನಿಯರಿಂಗ್‌ ಓದಿಸಿದೆ. ಮಗಳು ರೇಣುಕಾ ಬಿಕಾಂ ಮುಗಿಸಿದ ಮೇಲೆ ಮದುವೆಯಾಗಿ ಪತಿ ಮನೆ ಸೇರಿದ್ದಾಳೆ. ಎಲ್ಲ ವೈದ್ಯರು ಚೆನ್ನಾಗಿದ್ದಾರೆ. ನೀವು ಸೇವೆ ಎಂದು ಏನೂ ಮಾಡಿಲ್ಲ ಎಂದು ಕೆಲವೊಮ್ಮೆ ಪತ್ನಿ ಸುಜಾತ ಹುಸಿಕೋಪ ತೋರಿಸುತ್ತಾಳೆ. ಆದರೆ ಅವಳ ಸಹಕಾರ ಇದ್ದಿದ್ದರಿಂದಲೇ ಇಲ್ಲಿವರೆಗೆ ಸೇವೆ ಮಾಡಲು ಸಾಧ್ಯವಾಗಿದೆ’ ಎಂದು ಭಾವುಕರಾದರು.

‘ಚಳಿ, ಜ್ವರ, ಶೀತ, ಕೆಮ್ಮು, ವಾತ ಸಹಿತ ಎಲ್ಲ ಸಾಮಾನ್ಯ ಕಾಯಿಲೆಗಳಿಗೆ ಔಷಧ ನೀಡಿದ್ದೇನೆ. ತೀರ ಗಂಭೀರವಾಗಿದ್ದರೆ ದಾವಣಗೆರೆಗೆ ಶಿಫಾರಸು ಮಾಡಿದ್ದೇನೆ. ಸಂತೇಬೆನ್ನೂರು, ಸಾಸಲು, ಹೊಳಲ್ಕೆರೆ, ಎಮ್ಮಿಗನೂರು, ದೇವರಹಳ್ಳಿ, ಸೂಳೆಕೆರೆ, ತ್ಯಾವಣಿಗೆ, ಬಸವಾಪಟ್ಟಣ ಸಹಿತ ಸುತ್ತಮುತ್ತ 25 ಕಿಲೋಮೀಟರ್‌ ದೂರದ ಎಲ್ಲ ಹಳ್ಳಿಗಳ ಜನರು, ಬಡವರು ನನ್ನ ಕ್ಲಿನಿಕ್‌ಗೆ ಬಂದು ಚಿಕಿತ್ಸೆ ಪಡೆದಿದ್ದಾರೆ. ಈಗಲೂ ದಿನಕ್ಕೆ ಸರಾಸರಿ 100 ಮಂದಿ ಬರುತ್ತಿದ್ದಾರೆ. ನಾನು ಒಬ್ಬ ಸಹಾಯಕನನ್ನು ಅಷ್ಟೇ ಇಟ್ಟುಕೊಂಡಿದ್ದೇನೆ. ಶುಶ್ರೂಷಕರನ್ನು ಇಟ್ಟು ವೇತನ ನೀಡುವಷ್ಟು ಶಕ್ತಿ ನನಗಿಲ್ಲ. ನಾನೇ ಸ್ವತಃ ಇಂಜೆಕ್ಷನ್‌ ಕೊಡುತ್ತೇನೆ. ಡಾಕ್ಟ್ರೇ ಇಂಜೆಕ್ಷನ್‌ ಕೊಡುತ್ತಾರೆ. ನರ್ಸ್‌ಗಳಲ್ಲ ಎಂಬ ಕಾರಣಕ್ಕೇ ಬಹಳ ಮಂದಿ ನನ್ನಲ್ಲಿ ಬರ್ತಾರೆ’ ಎಂದು ಅನುಭವ ಹೇಳಿಕೊಂಡರು.

‘ಡಾ. ಬಸವಂತಪ್ಪ ಅವರು ಹಿಂದೆ ಬೆಳಿಗ್ಗೆ 8.30ಕ್ಕೆ ಕ್ಲಿನಿಕ್‌ ತೆರೆದರೆ ಎಲ್ಲ ರೋಗಿಗಳು ಹೋದ ಮೇಲೆಯೇ ಬಾಗಿಲು ಹಾಕುತ್ತಿದ್ದರು. ಈಗ ವಯಸ್ಸಾಗಿರುವುದರಿಂದ ಬೆಳಿಗ್ಗೆ 9.30ಕ್ಕೆ ತೆರೆದು ರಾತ್ರಿ 8.30ಕ್ಕೆ ಬಂದ್‌ ಮಾಡುತ್ತಿದ್ದಾರೆ. ಅವರು ಬಡಜನರಿಗೆ ನೀಡಿದ ಆರೋಗ್ಯ ಸೇವೆಯನ್ನು ಇನ್ಯಾರೂ ನೀಡಲು ಸಾಧ್ಯವಿಲ್ಲ. ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಅವರ ಸೇವೆಗೆ ಸಿಕ್ಕ ಪ್ರತಿಫಲ’ ಎಂದು ಸಂತೇಬೆನ್ನೂರು ಗ್ರಾಮ ಪಂಚಾಯಿತಿ ಸದಸ್ಯ ಜಿ.ಎಸ್‌. ಶಿವರಾಜ್‌ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.