ADVERTISEMENT

ದಾವಣಗೆರೆ: ಉತ್ತಮ ವೈದ್ಯಕೀಯ ಸೇವೆಗೆ ಸೂಚನೆ

ಜಿಲ್ಲಾ ಆಸ್ಪತ್ರೆಗೆ ₹ 2.5 ಕೋಟಿಯ ವೈದ್ಯಕೀಯ ಉಪಕರಣ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 6:35 IST
Last Updated 17 ಅಕ್ಟೋಬರ್ 2025, 6:35 IST
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ₹ 2.5 ಕೋಟಿ ಮೊತ್ತದ ವೈದ್ಯಕೀಯ ಉಪಕರಣಗಳನ್ನು ಗುರುವಾರ ಹಸ್ತಾಂತರಿಸಲಾಯಿತು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌, ಆರ್‌ಬಿಐ ನೋಟು ಮುದ್ರಣ ಘಟಕದ ವ್ಯವಸ್ಥಾಪಕ ನಿರ್ದೇಶಕ ಎಸ್‌. ತಾಳಕೇರಪ್ಪ ಇದ್ದಾರೆ
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ₹ 2.5 ಕೋಟಿ ಮೊತ್ತದ ವೈದ್ಯಕೀಯ ಉಪಕರಣಗಳನ್ನು ಗುರುವಾರ ಹಸ್ತಾಂತರಿಸಲಾಯಿತು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌, ಆರ್‌ಬಿಐ ನೋಟು ಮುದ್ರಣ ಘಟಕದ ವ್ಯವಸ್ಥಾಪಕ ನಿರ್ದೇಶಕ ಎಸ್‌. ತಾಳಕೇರಪ್ಪ ಇದ್ದಾರೆ   

ದಾವಣಗೆರೆ: ಮೈಸೂರಿನ ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ನೋಟು ಮುದ್ರಣ ಘಟಕದ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯ ₹ 2.5 ಕೋಟಿ ಮೊತ್ತದಲ್ಲಿ ಒದಗಿಸಿದ ಆಧುನಿಕ ವೈದ್ಯಕೀಯ ಉಪಕರಣಗಳನ್ನು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಗುರುವಾರ ಹಸ್ತಾಂತರಿಸಲಾಯಿತು.

ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಉಪಕರಣಗಳನ್ನು ಹಸ್ತಾಂತರಿಸಿದರು.

‘ಮಧ್ಯ ಕರ್ನಾಟಕದಲ್ಲಿರುವ ದಾವಣಗೆರೆಯ ಜಿಲ್ಲಾ ಆಸ್ಪತ್ರೆ ಪ್ರತಿ ತಿಂಗಳು 45 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಅಕ್ಕ–ಪಕ್ಕದ ಜಿಲ್ಲೆಯ ರೋಗಿಗಳು ಕೂಡ ಈ ಆಸ್ಪತ್ರೆಯ ಸೇವೆ ಪಡೆಯುತ್ತಿದ್ದಾರೆ. ಇಲ್ಲಿ ವೆಂಟಿಲೇಟರ್‌, ಫಿಸಿಯೋಥೆರಪಿ, ಲ್ಯಾಕ್ಟೋಸ್ಕೋಪಿ ಸೇರಿದಂತೆ ಹಲವು ಉಪಕರಣಗಳ ಕೊರತೆ ಇತ್ತು. ಇದರಿಂದ ಖಾಸಗಿ ಆಸ್ಪತ್ರೆ ಅಥವಾ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗೆ ರೋಗಿಗಳನ್ನು ಶಿಫಾರಸು ಮಾಡಲಾಗುತ್ತಿತ್ತು’ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ್‌ ಹೇಳಿದರು.

ADVERTISEMENT

‘ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮಾನವೀಯ ರೀತಿಯಲ್ಲಿ ಸ್ಪಂದಿಸಬೇಕು. ಉತ್ತಮ ವೈದ್ಯಕೀಯ ಸೇವೆ ನೀಡಬೇಕು. ಅನುದಾನ, ಔಷಧ ಲಭ್ಯತೆಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ವೈದ್ಯಕೀಯ ಉಪಕರಣಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗುಣಮಟ್ಟದ ಚಿಕಿತ್ಸೆ ನೀಡಬೇಕು’ ಎಂದು ಸಲಹೆ ನೀಡಿದರು.

‘₹ 267 ಕೋಟಿ ವೆಚ್ಚದಲ್ಲಿ ನೂತನ ಜಿಲ್ಲಾ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡದ ದುರಸ್ತಿಗೆ ₹ 43 ಕೋಟಿ ಅನುದಾನ ಲಭ್ಯವಾಗಿದ್ದು, ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರೆತೆ ಕಂಡುಬಂದಿದೆ. ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಂಡು ಅಗತ್ಯ ಸಿಬ್ಬಂದಿ ನಿಯೋಜಿಸಬೇಕು’ ಎಂದು ನಿರ್ದೇಶನ ನೀಡಿದರು.

ಆರ್‌ಬಿಐ ನೋಟು ಮುದ್ರಣ ಘಟಕದ ವ್ಯವಸ್ಥಾಪಕ ನಿರ್ದೇಶಕ ಎಸ್‌. ತಾಳಕೇರಪ್ಪ, ‘ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿರುವುದನ್ನು ಗಮನಿಸಿ ದೊಡ್ಡ ಮೊತ್ತದ ವೈದ್ಯಕೀಯ ಉಪಕರಣ ನೀಡಲಾಗಿದೆ. 1 ಫಿಸಿಯೋಥರಫಿ ಘಟಕ, ವೆಂಟಿಲೇಟರ್ ಒಳಗೊಂಡ ಅನಸ್ತೇಶಿಯಾ ವರ್ಕ್ ಸ್ಟೇಷನ್ 2, ಮೊಬೈಲ್ ಒಟಿ ಲೈಟ್ 5, ಪೇಡಿಯಾಟ್ರಿಕ್ ವೆಂಟಿಲೇಟರ್ 2 ಸೇರಿದಂತೆ 19 ವೈದ್ಯಕೀಯ ಉಪಕರಣ ನೀಡಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಶಿವಕುರಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದ್ರಪ್ಪ ಹಾಜರಿದ್ದರು.

ಅಂಗಾಂಗ ದಾನ: ಜಾಗೃತಿಗೆ ಸೂಚನೆ

‘ಅಂಗಾಂಗ ಮತ್ತು ದೇಹ ದಾನದಲ್ಲಿ ರಾಜ್ಯವು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಅಂಗಾಂಗ ದಾನದ ಕುರಿತು ಮಾಹಿತಿಯ ಕೊರೆತೆ ಇದೆ. ಈ ಕುರಿತು ಕಾರ್ಯಗಾರ ಆಯೋಜಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸೂಚನೆ ನೀಡಿದರು. ‘ಅಂಗಾಂಗಗಳ ಕೊರತೆಯಿಂದ ಅನೇಕರಿಗೆ ತೊಂದರೆಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೆ ಅಂದಾಜು ₹ 20 ಲಕ್ಷದಿಂದ ₹ 25 ಲಕ್ಷ ವೆಚ್ಚವಾಗುತ್ತದೆ. ಈ ದುಬಾರಿ ವೆಚ್ಚವನ್ನು ಸಾರ್ವಜನಿಕರು ಬಡವರು ಭರಿಸಲು ಸಾಧ್ಯವಿಲ್ಲ. ಹೀಗಾಗಿ ಅಂಗದಾನ ದೇಹದಾನದ ಮಹತ್ವದ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು. ಒಬ್ಬ ವ್ಯಕ್ತಿಯ ದೇಹ ಅಥವಾ ಅಂಗಾಂಗ ದಾನದಿಂದ 8 ಜನರನ್ನು ಅಂಗವಿಕಲತೆಯಿಂದ ರಕ್ಷಿಸಬಹುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.