ADVERTISEMENT

ಮನುಷ್ಯನಿಗೆ ಭೂಮಿಯಷ್ಟೇ ಧರ್ಮವೂ ಮುಖ್ಯ

ಲೆನಿನ್‌ ನಗರದ ಚೌಡೇಶ್ವರಿ ಕಾರ್ತಿಕೋತ್ಸವದಲ್ಲಿ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:16 IST
Last Updated 13 ಡಿಸೆಂಬರ್ 2025, 5:16 IST
ದಾವಣಗೆರೆಯ ಲೆನಿನ್‌ ನಗರದಲ್ಲಿನ ಚೌಡೇಶ್ವರಿ ದೇವಿಯ ಕಾರ್ತಿಕ ಮಹೋತ್ಸವದಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ದೀಪ ಬೆಳಗಿದರು. ಓಂಕಾರ ಶಿವಾಚಾರ್ಯ ಸ್ವಾಮೀಜಿ ಇದ್ದಾರೆ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಲೆನಿನ್‌ ನಗರದಲ್ಲಿನ ಚೌಡೇಶ್ವರಿ ದೇವಿಯ ಕಾರ್ತಿಕ ಮಹೋತ್ಸವದಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ದೀಪ ಬೆಳಗಿದರು. ಓಂಕಾರ ಶಿವಾಚಾರ್ಯ ಸ್ವಾಮೀಜಿ ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ಬದುಕಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಅಗತ್ಯ. ಮನುಷ್ಯನಿಗೆ ಭೂಮಿ ಎಷ್ಟು ಮುಖ್ಯವೋ ಧರ್ಮವೂ ಅಷ್ಟೇ ಮುಖ್ಯ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಲೆನಿನ್‌ ನಗರದಲ್ಲಿ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್‌ ಶುಕ್ರವಾರ ಹಮ್ಮಿಕೊಂಡಿದ್ದ ಚೌಡೇಶ್ವರಿದೇವಿ ಕಾರ್ತಿಕೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಮನುಷ್ಯ ಜೀವನವನ್ನು ಸುಂದರ, ಶುದ್ಧಗೊಳಿಸುವುದು ಧರ್ಮದ ಗುರಿ. ಸಮಸ್ತ ಜನರ ಮೋಕ್ಷಗಳಿಗೆ ಧರ್ಮವೇ ಮೂಲ’ ಎಂದು ಪ್ರತಿಪಾದಿಸಿದರು.

ADVERTISEMENT

‘ದೇವರು ಎಲ್ಲರಲ್ಲಿದ್ದರೂ ದೇವರಲ್ಲಿ ಎಲ್ಲರೂ ಇಲ್ಲ. ಭಗವಂತನೆಡೆಗೆ ಭಕ್ತರು ಸಾಗಿದಾಗ ಜೀವನ ಪಾವನವಾಗುತ್ತದೆ. ದೇವರ ಮೇಲಿನ ನಂಬಿಕೆ ಮನುಷ್ಯನ ಬಾಳಿಗೆ ನಂದಾದೀಪ’ ಎಂದು ಹೇಳಿದರು.

‘ಈ ಜಗತ್ತು ಶಿವ ಶಕ್ತಿಯಿಂದ ನಿರ್ಮಾಣಗೊಂಡಿದೆ. ಶಿವನ ಆರಾಧನೆಯಷ್ಟೇ ಶಕ್ತಿ ಆರಾಧನೆಯೂ ಪ್ರಾಚೀನ. ಜ್ಞಾನ, ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸಂಪತ್ತಿನ ಜೊತೆಗೆ ಸಭ್ಯತೆ, ಸಂಸ್ಕೃತಿಯೂ ಬೆಳೆಯಬೇಕು’ ಎಂದರು.

ದಾವಣಗೆರೆ-ಹರಿಹರ ಅರ್ಬನ್ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಎನ್.ಎ. ಮುರುಗೇಶ, ‘ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕು. ಶ್ರದ್ಧೆ ಇದ್ದರೆ ಧರ್ಮ, ಸಂಸ್ಕೃತಿ ಉಳಿಯಲು ಸಾಧ್ಯ. ವೈಚಾರಿಕತೆ ಹೆಸರಿನಲ್ಲಿ ನಾಡಿನ ಸಂಸ್ಕೃತಿ ನಾಶವಾಗಬಾರದು’ ಎಂದು ಹೇಳಿದರು.

ಆವರಗೊಳ್ಳದ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ‘ಹೊರಗಿನ ಕತ್ತಲೆ ಕಳೆಯಲು ದೀಪ ಬೇಕು. ಅಂತರಂಗದ ಕತ್ತಲೆ ಕಳೆಯಲು ಗುರು ಬೋಧನೆ ಮುಖ್ಯ’ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಎಸ್.ಜಿ. ಉಳವಯ್ಯ, ಮುಖಂಡರಾದ ಎಸ್.ಜೆ. ಶ್ರೀಧರ, ಅಕ್ಕಿ ರಾಜು, ‘ಧೂಡಾ’ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ ಹಾಜರಿದ್ದರು.

ಸಮಾರಂಭಕ್ಕೂ ಮುನ್ನ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಅವರನ್ನು ಸಾರೋಟಿನಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ಕುಂಭ ಹೊತ್ತು, ಆರತಿ ಹಿಡಿದ ಮಹಿಳೆಯರು ಜಾನಪದ ಕಲಾತಂಡಗಳು ಉತ್ಸವದಲ್ಲಿ ಪಾಲ್ಗೊಂಡು ಮೆರವಣಿಗೆಗೆಯಲ್ಲಿ ಹೆಜ್ಜೆ ಹಾಕಿದರು.

ದಾವಣಗೆರೆಯ ಲೆನಿನ್‌ ನಗರದಲ್ಲಿನ ಚೌಡೇಶ್ವರಿ ದೇವಿಯ ಕಾರ್ತಿಕ ಮಹೋತ್ಸವದಲ್ಲಿ ಭಕ್ತರು ದೀಪ ಬೆಳಗಿದರು –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.