ADVERTISEMENT

ದಾವಣಗೆರೆ | ಭತ್ತ ಖರೀದಿ ನೋಂದಣಿ ಪ್ರಕ್ರಿಯೆ ಆರಂಭಿಸಲು ಒತ್ತಾಯ

ಎಪಿಎಂಸಿಯ ಖರೀದಿ ನೋಂದಣಿ ಕೇಂದ್ರದ ಬಳಿ ಜಿಲ್ಲಾ ರೈತರ ಒಕ್ಕೂಟದ ಮುಖಂಡರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 7:18 IST
Last Updated 18 ಅಕ್ಟೋಬರ್ 2025, 7:18 IST
ದಾವಣಗೆರೆಯ ಎಪಿಎಂಸಿಯಲ್ಲಿ ‘ಜಿಲ್ಲಾ ರೈತರ ಒಕ್ಕೂಟ’ದ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು
ದಾವಣಗೆರೆಯ ಎಪಿಎಂಸಿಯಲ್ಲಿ ‘ಜಿಲ್ಲಾ ರೈತರ ಒಕ್ಕೂಟ’ದ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು   

ದಾವಣಗೆರೆ: ‘ಭತ್ತ ಖರೀದಿ ನೋಂದಣಿ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು. ಜಿಲ್ಲೆಯಲ್ಲಿ ನವೆಂಬರ್ ತಿಂಗಳಲ್ಲಿ ಭತ್ತ, ರಾಗಿಯ ಕೊಯ್ಲು ಆರಂಭವಾಗುವುದರಿಂದ ಆ ಅವಧಿಯವರೆಗೂ ನೋಂದಣಿ ಪ್ರಕ್ರಿಯೆಯನ್ನು ಮುಂದುವರಿಸಬೇಕು’ ಎಂದು ಒತ್ತಾಯಿಸಿ ‘ಜಿಲ್ಲಾ ರೈತರ ಒಕ್ಕೂಟ’ದ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು. 

ಇಲ್ಲಿನ ಎಪಿಎಂಸಿಯಲ್ಲಿನ ಖರೀದಿ ನೋಂದಣಿ ಕೇಂದ್ರದ ಮುಂಭಾಗ ಸೇರಿದ ರೈತ ಮುಖಂಡರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿ ಕೇಂದ್ರ ಪ್ರಾರಂಭಿಸುವುದಾಗಿ ಜಿಲ್ಲಾಡಳಿತ ತಿಳಿಸಿ 25 ದಿನಗಳಾಗಿವೆ. ಆದರೂ, ಖರೀದಿ ನೋಂದಣಿ ಪ್ರಕ್ರಿಯೆ ನಡೆಯುತ್ತಿಲ್ಲ. ಖರೀದಿ ನೋಂದಣಿ ಕೇಂದ್ರಕ್ಕೆ ಯಾವಾಗಲೂ ಬೀಗ ಹಾಕಿರುತ್ತದೆ. ಅಧಿಕಾರಿಗಳು ತಾತ್ಸಾರ ಮನೋಭಾವದಿಂದ  ನಡೆದುಕೊಳ್ಳುತ್ತಿದ್ದಾರೆ. ರೈತರಿಗೆ ಏನಾದಾರೊಂದು ಕಾರಣ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ’ ಎಂದು ಪ್ರತಿಭಟನಕಾರರು ದೂರಿದರು. 

ADVERTISEMENT

‘ಮೊದಲು ಸಾಫ್ಟವೇರ್ ಸಿದ್ಧಪಡಿಸಿಲ್ಲ ಎಂದರು. ಸಾಫ್ಟವೇರ್ ಸಿದ್ಧಗೊಂಡ ಮೇಲೂ ಸರಿಯಾಗಿ ನೋಂದಣಿ ಆಗುತ್ತಿಲ್ಲ. ರೈತರ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ ತಾಳಿದೆ. ಖರೀದಿ ಕೇಂದ್ರ ಆರಂಭಿಸುವಲ್ಲಿ ಜಿಲ್ಲಾಡಳಿತಕ್ಕೆ ಇಚ್ಛಾಶಕ್ತಿ ಇಲ್ಲ. ಕೇವಲ ಕಾಲಹರಣ ಮಾಡಿ ಕೈ ತೊಳೆದುಕೊಳ್ಳುವ ಕುತಂತ್ರ ನಡೆದಿದೆ’ ಎಂದು ಆರೋಪಿಸಿದರು. 

‘ಖರೀದಿ ನೋಂದಣಿಗಾಗಿ ರೈತರು ಫ್ರೂಟ್ಸ್‌ ಐಡಿ ಸಂಖ್ಯೆ ತಂದರೆ ಸಾಕು. ಬೇರೆ ದಾಖಲೆಗಳನ್ನು ತರುವ ಅಗತ್ಯವಿಲ್ಲ. ರೈತರ ಹೆಸರು, ಜಮೀನಿನ ವಿವರ, ಬೆಳೆದಿರುವ ಬೆಳೆ ಸೇರಿದಂತೆ ಅಗತ್ಯ ಮಾಹಿತಿ ಫ್ರೂಟ್ಸ್‌ ದತ್ತಾಂಶದಲ್ಲಿರುತ್ತದೆ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ, ಖರೀದಿ ಕೇಂದ್ರದ ಅಧಿಕಾರಿಗಳು ಅನಗತ್ಯ ದಾಖಲೆ ಕೇಳುತ್ತಿರುವುದು ಸರಿಯಲ್ಲ’ ಎಂದು ‘ಜಿಲ್ಲಾ ರೈತರ ಒಕ್ಕೂಟ’ದ ಅಧ್ಯಕ್ಷ ಕೊಳೇನಹಳ್ಳಿ ಬಿ.ಎಂ. ಸತೀಶ್ ಹೇಳಿದರು. 

ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗರಾಜ್ ಮನವಿ ಪತ್ರ ಸ್ವೀಕರಿಸಿದರು.  

ಮುಖಂಡರಾದ ಲೋಕಿಕೆರೆ ನಾಗರಾಜ್, ಅಣಬೇರು ಜೀವನಮೂರ್ತಿ, ಧನಂಜಯ ಕಡ್ಲೆಬಾಳ್, ಬೆಳವನೂರು ನಾಗೇಶ್ವರರಾವ್, ಗೋಣಿವಾಡ ಮಂಜುನಾಥ, ತಾರೇಶನಾಯ್ಕ, ಆರನೇಕಲ್ಲು ವಿಜಯಕುಮಾರ್, ಆವರಗೆರೆ ಅಜ್ಜನಗೌಡ್ರು, ಕಲ್ಪನಹಳ್ಳಿ ಸತೀಶ್, ಉಜ್ಜಪ್ಪ, ರೇವಣಸಿದ್ದಪ್ಪ, ಕಾಡಜ್ಜಿ ಬಿ.ವಿ. ಬಸವರಾಜು, ಕುರ್ಕಿ ರೇವಣಸಿದ್ದಪ್ಪ, ಬಾತಿ ಶಿವಕುಮಾರ್, ಕುಂದುವಾಡ ಜಿಮ್ಮಿ ಹನುಮಂತಪ್ಪ, ಮಹೇಶಪ್ಪ, ಹಾಲೇಶ ನಾಯಕ, ವಾಟರ್ ಮಂಜುನಾಥ, ಬಾತಿ ಶಂಕರಮೂರ್ತಿ, ರೇವಣಸಿದ್ದಪ್ಪ, ರವಿಕುಮಾರ, ಶಿರಮನಳ್ಳಿ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು. 

ನವೆಂಬರ್‌ವರೆಗೂ ನೋಂದಣಿ ಪ್ರಕ್ರಿಯೆ ಮುಂದುವರಿಸಲು ಒತ್ತಾಯ ಕಾಲಹರಣ ಮಾಡಿ ಕೈ ತೊಳೆದುಕೊಳ್ಳುವ ಕುತಂತ್ರ: ಆರೋಪ ಜಿಲ್ಲಾಡಳಿತದ ವಿರುದ್ಧ ರೈತ ಮುಖಂಡರ ಆಕ್ರೋಶ

ಈ ಕ್ಷಣದಿಂದಲೇ ಖರೀದಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಅಗತ್ಯ ಸಿಬ್ಬಂದಿ ಮತ್ತು ಮೂಲಸೌಕರ್ಯ ಒದಗಿಸಲು ಕ್ರಮ ವಹಿಸಲಾಗುವುದು
ನಾಗರಾಜ್ ಜಿಲ್ಲಾ ವ್ಯವಸ್ಥಾಪಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
ಎಲ್ಲಾ ಭತ್ತವನ್ನು ಖರೀದಿಸಿ’ 
‘ ‘ಭತ್ತ ಖರೀದಿಗೆ ಮಿತಿ ಹೇರಬಾರದು ಪ್ರತಿ ಎಕರೆಗೆ 25 ಕ್ವಿಂಟಲ್‌ನಂತೆ ಬೆಳೆದಿರುವ ಎಲ್ಲಾ ಭತ್ತವನ್ನು ಖರೀದಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಅದರಂತೆ ರೈತ ಬೆಳೆದಿರುವ ಪೂರ್ಣ ಪ್ರಮಾಣದ ಭತ್ತವನ್ನು ಖರೀದಿಸಬೇಕು. ಸರ್ಕಾರದ ರಜೆ ದಿನಗಳಲ್ಲಿಯೂ ಖರೀದಿ ಕೇಂದ್ರ ತೆರೆದು ನೋಂದಣಿ ಪ್ರಕ್ರಿಯೆ ನಡೆಸಬೇಕು. ಖರೀದಿ ಕೇಂದ್ರ ತೆರೆದಾಗ ಅಲ್ಲಿ ಸಿಬ್ಬಂದಿ ಹಾಜರಿರಬೇಕು. ಕೇಂದ್ರದಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.  ‘ಖರೀದಿ ನೋಂದಣಿ ಬಗ್ಗೆ ಇದುವರೆಗೂ ಎಲ್ಲಿಯೂ ಬ್ಯಾನರ್ ಕಟ್ಟಿಲ್ಲ. ಯಾವ ರೈತರಿಗೂ ಕರಪತ್ರ ಹಂಚಿಲ್ಲ. ಆದ್ದರಿಂದ ಜನದಟ್ಟಣೆ ಇರುವ ಕಡೆಗಳಲ್ಲಿ ಬ್ಯಾನರ್ ಕಟ್ಟಬೇಕು. ಕೃಷಿ ಸಖಿ ಮತ್ತು ಪಶು ಸಖಿಯರ ಮೂಲಕ ಪ್ರತಿ ಹಳ್ಳಿಗಳಲ್ಲಿ ಕರಪತ್ರಗಳನ್ನು ಹಂಚುವ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕು ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ತೆರೆಯಬೇಕು. ಕಾರಿಗನೂರಿನಲ್ಲಿಯೂ ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.