ADVERTISEMENT

ದಾವಣಗೆರೆ| ರಸ್ತೆ ಮೇಲಿನ ವರ್ತನೆ ಶಿಸ್ತಿಗೆ ಕನ್ನಡಿ: ಮಹಾವೀರ ಮ. ಕರೆಣ್ಣವರ್

37ನೇ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 4:46 IST
Last Updated 1 ಫೆಬ್ರುವರಿ 2026, 4:46 IST
<div class="paragraphs"><p>ದಾವಣಗೆರೆಯ ಯುಬಿಡಿಟಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು </p></div>

ದಾವಣಗೆರೆಯ ಯುಬಿಡಿಟಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು

   

ಪ್ರಜಾವಾಣಿ ಚಿತ್ರ

ದಾವಣಗೆರೆ: ‘ರಸ್ತೆ ಮೇಲಿನ ವರ್ತನೆ ನಮ್ಮ ಶಿಸ್ತಿಗೆ ಕನ್ನಡಿ ಇದ್ದಂತೆ. ರಸ್ತೆ ಬದಿಯಲ್ಲಿ ವಾಹನ ಹೇಗೆ ನಿಲ್ಲಿಸುತ್ತೇವೆ ಎಂಬುದು ನಮ್ಮ ಮನಸ್ಥಿತಿ ಎಂಥದ್ದು ಎಂಬುದನ್ನು ತಿಳಿಸುತ್ತದೆ. ಹೀಗಾಗಿ ಎಲ್ಲರೂ ರಸ್ತೆ ಸುರಕ್ಷತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್ ಹೇಳಿದರು. 

ADVERTISEMENT

ನಗರದ ವಿಶ್ವವಿದ್ಯಾಲಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಜಯ ಚಾಮರಾಜೇಂದ್ರ ಸಭಾಭವನದಲ್ಲಿ ಶನಿವಾರ ಪೊಲೀಸ್ ಇಲಾಖೆ, ಕಾನೂನು ಸೇವಾ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ 37ನೇ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

‘ನಗರದ ಜನತೆ ರಸ್ತೆ ಮೇಲೆ ಹೇಗೆ ವರ್ತಿಸುತ್ತಾರೆ, ಸಂಚಾರ ಶಿಸ್ತನ್ನು ಹೇಗೆ ಪಾಲಿಸುತ್ತಾರೆ ಎಂಬುದರ ಆಧಾರದ ಮೇಲೆ ಆ ನಗರದ ಸ್ವಚ್ಛತೆ, ಸೌಂದರ್ಯ, ಅಲ್ಲಿನ ಜನರ ಆರೋಗ್ಯವನ್ನು ನಿರ್ಧರಿಸಬಹುದಾಗಿದೆ’ ಎಂದರು. 

‘ಎಷ್ಟೇ ಜಾಗೃತಿ ಮೂಡಿಸಿದರೂ ಜನ ತಿದ್ದಿಕೊಳ್ಳುತ್ತಿಲ್ಲ. ಹೀಗಾಗಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಕಾನೂನುಗಳನ್ನು ಮತ್ತಷ್ಟು ಕಠಿಣಗೊಳಿಸಲಾಗುತ್ತಿದೆ. ದಂಡ ಪ್ರಯೋಗವನ್ನು ಹೆಚ್ಚಿಸಲಾಗುವುದು’ ಎಂದು ಹೇಳಿದರು. 

‘ಕಳೆದ ವರ್ಷ ಜಿಲ್ಲೆಯಲ್ಲಿ 1053 ಅಪಘಾತಗಳು ಸಂಭವಿಸಿದ್ದು, 318 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 14 ವಿದ್ಯಾರ್ಥಿಗಳಿದ್ದಾರೆ. ಪೋಷಕರಿಗೆ ಮಕ್ಕಳೇ ಭವಿಷ್ಯ. ಹೀಗಾಗಿ ಯುವ ಜನತೆ ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಬೇಕು. ಪೂರ್ಣ ಹೆಲ್ಮೆಟ್ ಧರಿಸಬೇಕು. ಅಪ್ರಾಪ್ತರ ಕೈಗೆ ವಾಹನ ಕೊಡುವ ಪೋಷಕರೆಲ್ಲರೂ ಜವಾಬ್ದಾರಿ ಇಲ್ಲದವರು’ ಎಂದು ಹೆಚ್ಚುವರಿ ಎಸ್‌ಪಿ ಪರಮೇಶ್ವರ ಹೆಗಡೆ ಹೇಳಿದರು. 

ಕಾಲೇಜು ಪ್ರಾಂಶುಪಾಲ ಡಿ.ಪಿ.ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ಸಾರಿಗೆ ಅಬಕಾರಿ ಎಚ್.ಎಸ್.ಭಗವಾನ್‌ದಾಸ್, ಎಸ್.ಮಂಜಪ್ಪ, ಎನ್.ಮಂಜಾನಾಯ್ಕ, ಬಿ.ಜಿ.ಹರೀಶ್, ಈರಪ್ಪ ಸೊಗಲದ್, ಸವಿತಾ, ಆರ್‌ಟಿಒ ಕಚೇರಿಯ ಯಾದವ ಕುಮಾರ್ ಹಾಗೂ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.