ADVERTISEMENT

ನೂರು ವರ್ಷ ಕಳೆದರೂ ಒಂದೇ ‘ಸಂಘ’ವಾಗಿ ಮುನ್ನಡೆ

ವಿಜಯದಶಮಿ ಸಂಘಶತಾಬ್ಧಿ ಪಥಸಂಚಲನ; ಮನೋಹರ್ ಮಠದ್ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:20 IST
Last Updated 12 ಅಕ್ಟೋಬರ್ 2025, 6:20 IST
ವಿಜಯದಶಮಿ ಸಂಘಶತಾಬ್ಧಿ ಅಂಗವಾಗಿ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಸೇರಿದ್ದ ಆರ್‌ಎಸ್‌ಎಸ್ ಸ್ವಯಂಸೇವಕರು
ವಿಜಯದಶಮಿ ಸಂಘಶತಾಬ್ಧಿ ಅಂಗವಾಗಿ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಸೇರಿದ್ದ ಆರ್‌ಎಸ್‌ಎಸ್ ಸ್ವಯಂಸೇವಕರು   

ದಾವಣಗೆರೆ: ದೇಶಕ್ಕಾಗಿ ನಿಸ್ವಾರ್ಥದಿಂದ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್‌) ನೂರು ವರ್ಷಗಳನ್ನು ಪೂರೈಸಲು ಸಾಧ್ಯವಾಯಿತು ಎಂದು ಸಂಘದ ದೇವಸ್ಥಾನ ಸಂವರ್ಧನ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ಅಭಿಪ್ರಾಯಪಟ್ಟರು.

ವಿಜಯದಶಮಿ ಸಂಘಶತಾಬ್ಧಿ ಪಥಸಂಚಲನದ ಅಂಗವಾಗಿ ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೂರು ವರ್ಷ ಕಳೆದರೂ ಸಂಘ ಮಾತ್ರ ಒಂದೇ ಸಂಘವಾಗಿ ಉಳಿದು, ಮುನ್ನಡೆಯುತ್ತಿದೆ. ಇಲ್ಲಿ ಅಧಿಕಾರದ ಹಪಹಪಿ ಇಲ್ಲ, ಭಿನ್ನಾಭಿಪ್ರಾಯ ಇಲ್ಲ, ಸ್ಪರ್ಧೆ ಅಥವಾ ಚುನಾವಣೆ ಇಲ್ಲ, ಸಂಘ ಯಾರನ್ನೂ ಬೇಡ ಎನ್ನುವುದಿಲ್ಲ. ಈ ಎಲ್ಲ ಕಾರಣಗಳಿಗಾಗಿ ಈಗಲೂ ಪ್ರಸ್ತುತವಾಗಿದೆ ಎಂದು ಹೇಳಿದರು. 

ADVERTISEMENT

‘ಢೋಂಗಿ ಜಾತ್ಯತೀತವಾದಿಗಳು ಸಂಘದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಯತ್ನಿಸುತ್ತಿದ್ದಾರೆ. ಜಾತಿ, ಧರ್ಮ, ಪಕ್ಷದ ಹೆಸರಿನಲ್ಲಿ ಹಿಂದೂಗಳ ಒಗ್ಗಟ್ಟನ್ನು ಒಡೆಯುವ ಯತ್ನಗಳು ನಡೆಯುತ್ತಿದೆ. ವಿಚಾರವಾದಿಗಳೆನ್ನುವ ಕೆಲ ವಿಕಾರವಾದಿಗಳು ಹಳದಿ ಕನ್ನಡಕ ಹಾಕಿಕೊಂಡು ಸುಳ್ಳು ಆಪಾದನೆ ಮಾಡುತ್ತಿದ್ದಾರೆ. ಆದರೆ ತಾರತಮ್ಯ ತೊಡೆದುಹಾಕಿ ಎಲ್ಲರನ್ನು ಜೋಡಿಸುವ ಕಾರ್ಯವನ್ನು ಹಿಂದುತ್ವದ ಮೂಲಕ ಸಂಘ ಮಾಡುತ್ತಿದೆ’ ಎಂದರು. 

‘ಹಿಂದುತ್ವ ಎಂದರೆ ಎಲ್ಲ ಹಿತ, ಕಲ್ಯಾಣ ಬಯಸುವುದೇ ಆಗಿದೆ. ಹಿಂದುತ್ವ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿವರೆಗೆ ಭಾರತ ಇರುತ್ತದೆ. ಭಾರತ ಎಲ್ಲಿವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಈ ಜಗತ್ತು ಇರುತ್ತದೆ. ಹಿಂದೂಗಳು ಒಂದಾದರೆ ಮಾತ್ರ ನೆಮ್ಮದಿ. ಭಾರತವು ಚೆನ್ನಾಗಿರಬೇಕು ಎಂದಾದರೆ ಅದು ಹಿಂದೂ ರಾಷ್ಟ್ರವಾದಾಗ ಮಾತ್ರ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಭಾಗಿಯಾಗಿರಲಿಲ್ಲ ಎಂದು ಹೇಳುವವರು ಇದ್ದಾರೆ. ಆದರೆ ಸ್ವಾತಂತ್ರ್ಯ ಹೋರಾಟದ ಪ್ರತಿ ಘಟ್ಟದಲ್ಲೂ ಸಂಘದ ಸ್ವಯಂಸೇವಕರು ಭಾಗಿಯಾಗಿದ್ದರು. ದಂಡಿಯಾತ್ರೆಯಲ್ಲಿ ಸೆರವಾಸವನ್ನೂ ಅನುಭವಿಸಿದ್ದರು. ದೇಶ ವಿಭಜನೆಯ ಸಮಯದಲ್ಲಿ ಪಾಕಿಸ್ತಾನದ ಕಡೆಯಿಂದ ತಾಯ್ನಾಡಿಗೆ ಬರುವವರಿದ್ದ ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಹಾಗೂ ಇಲ್ಲಿಗೆ ಬಂದವರಿಗೆ ಮೂಲಸೌಲಭ್ಯಗಳನ್ನು ಒದಗಿಸಲು ಸ್ವಯಂಸೇವಕರು ಶ್ರಮಿಸಿದ್ದರು’ ಎಂದರು. 

‘ಮಹಾತ್ಮ ಗಾಂಧೀಜಿ ಅವರು ದೇಶದ ಸ್ವಾತಂತ್ರ ಹೋರಾಟದಲ್ಲಿ ನೆರವು ನೀಡಿದ್ದ ಆರ್‌ಎಸ್‌ಎಸ್‌ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದರು. ಚೀನಾ ಜೊತೆಗಿನ ಯುದ್ಧದಲ್ಲಿ ಸೈನಿಕರಿಗೆ ಮದ್ದುಗುಂಡು, ಊಟವನ್ನು ತಲುಪಿಸಿದ್ದ ಸ್ವಯಂಸೇವಕರನ್ನು ಗೌರವಿಸುವ ಉದ್ದೇಶದಿಂದ ಅಂದಿನ ಪ್ರಧಾನಿ ನೆಹರೂ ಅವರು, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವಂತೆ ಸಂಘವನ್ನು ಆಹ್ವಾನಿಸಿದ್ದರು’ ಎಂದು ಮಠದ್ ನೆನಪಿಸಿಕೊಂಡರು.

ಸಂಘವು ದೇಶ, ವಿದೇಶಗಳಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು 100 ವರ್ಷ ಪೂರೈಸುತ್ತದೆ ಎಂಬ ಕಲ್ಪನೆಯೂ ಸಂಸ್ಥಾಪಕ ಹೆಡಗೇವಾರ್ ಅವರಿಗೆ ಅಂದು ಇರಲಿಲ್ಲ. ನೂರು ವರ್ಷಗಳ ಹಿಂದೆಯೇ ವೈದ್ಯಕೀಯ ಪದವಿ ಪಡೆದಿದ್ದ ಅವರು ಉನ್ನತ ಹುದ್ದೆಗಳನ್ನು ಪಡೆಯಬಹುದಿತ್ತು. ಆದರೆ ದೇಶಕ್ಕೆ ಅಂಟಿದ್ದ ದಾಸ್ಯದ ರೋಗಕ್ಕೆ ಔಷಧ ನೀಡಲು ತಮ್ಮ ವೈಯಕ್ತಿಕ ಬದುಕಿಗೆ ತಿಲಾಂಜಲಿ ಇಟ್ಟು, ದೇಶದ ಒಳಿತಿಗಾಗಿ ಸಂಘವನ್ನು ಸ್ಥಾಪಿಸಿದರು ಎಂದು ಸ್ಮರಿಸಿದರು.

ಸಂಘ ಯಾರನ್ನೂ ವಿರೋಧಿಸುವುದಿಲ್ಲ, ತನ್ನನ್ನು ತಾನು ‘ಬ್ರ್ಯಾಂಡ್’ ಮಾಡಿಕೊಳ್ಳುವ ಉದ್ದೇಶದಿಂದ ಕೆಲಸ ಮಾಡುವುದಿಲ್ಲ. ನೈಸರ್ಗಿಕ ವಿಪತ್ತು ಎದುರಾದಾಗ ರಕ್ಷಣಾ ಪಡೆಗಳಿಗಿಂತ ಮೊದಲು ಅಲ್ಲಿ ಸಂಘದ ಸದಸ್ಯರು ಹಾಜರಿರುತ್ತಾರೆ ಎಂದರು. 

ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಂಘಚಾಲಕ ಉಮಾಪತಿ ಜಿ.ಎಸ್., ದಾವಣಗೆರೆ ನಗರ ಸಂಘಚಾಲಕ ಅಜಿತ್ ಓಸ್ಟಾಲ್, ಸಂಘದ ಪ್ರಮುಖ ಸುರೇಂದ್ರನಾಥ್ ನಿಶಾನಿಮಠ ವೇದಿಕೆಯಲ್ಲಿದ್ದರು. ಸಭೆಗೂ ಮುನ್ನ, ನಗರದ ಪ್ರಮುಖ ಬೀದಿಗಳಲ್ಲಿ ಸ್ವಯಂಸೇವಕರಿಂದ ಪಥಸಂಚಲನ ನಡೆಯಿತು.

ಮನೋಹರ್ ಮಠದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.