ADVERTISEMENT

ಸಾಹಿತ್ಯ ಸಂಗಮ ಸಂಸ್ಥೆಯ ‘ಹರಿಹರಶ್ರೀ’, ‘ಸಂಗಮಶ್ರೀ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 6:59 IST
Last Updated 13 ಜನವರಿ 2026, 6:59 IST
ಹರಿಹರದಲ್ಲಿ ಸಾಹಿತಿ ಪಾಪುಗುರು ಅವರಿಗೆ ಹರಿಹರಶ್ರೀ, ಕ್ರೀಡಾಪಟು ಎಚ್.ನಿಜಗುಣ ಅವರಿಗೆ ಸಂಗಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು
ಹರಿಹರದಲ್ಲಿ ಸಾಹಿತಿ ಪಾಪುಗುರು ಅವರಿಗೆ ಹರಿಹರಶ್ರೀ, ಕ್ರೀಡಾಪಟು ಎಚ್.ನಿಜಗುಣ ಅವರಿಗೆ ಸಂಗಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಹರಿಹರ: ‘ಹರಿಹರದ ಮಣ್ಣಿಗೆ ಐತಿಹಾಸಿಕ, ಪೌರಾಣಿಕ ಹಾಗೂ ಕಾರ್ಮಿಕ ಹೋರಾಟದ ದೊಡ್ಡ ಹಿನ್ನೆಲೆ ಇದೆ’ ಎಂದು ಸಾಹಿತಿ ಪಾಪುಗುರು ಅಭಿಪ್ರಾಯಪಟ್ಟರು. 

ನಗರದ ಶ್ರೀಶೈಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ‘ಮಣ್ಣೇ ಮೊದಲು’ ಕವನ ಸಂಕಲನಕ್ಕೆ ಲಭಿಸಿದ ಸಾಹಿತ್ಯ ಸಂಗಮ ಸಂಸ್ಥೆಯ 2023-24ನೇ ಸಾಲಿನ ರಾಜ್ಯಮಟ್ಟದ ‘ಹರಿಹರಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. 

‘ಲೇಖಕನಿಗಿಂತ ಕೃತಿ ದೊಡ್ಡದಾದಾಗ ಮಾತ್ರ ಸಾಹಿತ್ಯ ಸಾರ್ಥಕತೆ ಪಡೆಯುತ್ತದೆ. ಹರಿಹರ ಮತ್ತು ದಾವಣಗೆರೆ ಭೌಗೋಳಿಕವಾಗಿ ಬೇರೆಯಾಗಿ ಕಂಡರೂ, ನಾವೆಲ್ಲರೂ ತುಂಗಭದ್ರಾ ನದಿಯ ತಟದ ಒಂದೇ ತಾಯಿಯ ಮಕ್ಕಳು. ಪ್ರೀತಿ-ವಿಶ್ವಾಸದಿಂದ ಕೂಡಿ ಬಾಳೋಣ’ ಎಂದು ಹೇಳಿದರು. 

ADVERTISEMENT

‘ಪಾಪುಗುರು ಅವರು ನಮ್ಮ ಮಣ್ಣಿನ ಸಂಸ್ಕೃತಿ ಮತ್ತು ಬದುಕಿನ ನೆಲೆಗಳನ್ನು ಅತ್ಯಂತ ಗಟ್ಟಿಯಾಗಿ ತಮ್ಮ ಕವಿತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಸಾಹಿತ್ಯವು ಮಣ್ಣಿನ ಗುಣವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿರಬೇಕು’ ಎಂದು ಪ್ರಶಸ್ತಿ ಪ್ರದಾನ ಮಾಡಿದ ನಿವೃತ್ತ ಪ್ರಾಚಾರ್ಯ ಪ್ರೊ.ಎಚ್.ಎ.ಭಿಕ್ಷಾವರ್ತಿಮಠ ಅಭಿಪ್ರಾಯಪಟ್ಟರು. 

ಹಿರಿಯ ಕ್ರೀಡಾಪಟು ಎಚ್. ನಿಜಗುಣ ಅವರಿಗೆ 2023-24ನೇ ಸಾಲಿನ ‘ಸಂಗಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲೇಖಕ ಕತ್ತಿಗೆ ಪರಮೇಶ್ವರಪ್ಪ ಅವರ ‘ಕಲ್ಲೂರಿನಲ್ಲಿ ಧರ್ಮಾವತಿ’ ಕಾದಂಬರಿಯನ್ನು ಲೋಕಾರ್ಪಣೆ ಮಾಡಲಾಯಿತು. 

ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಮಾತನಾಡಿದರು. 

ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ.ಕೊಟ್ರೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಲಿಂಗರಾಜ ಕಮ್ಮಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಎಸ್.ಎಂ.ಗೌರಮ್ಮ, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ, ಹೀ.ಗೂ.ದುಂಡ್ಯಪ್ಪ, ಸೀತಾ ನಾರಾಯಣ, ಬಿ.ಬಿ.ರೇವಣನಾಯ್ಕ, ಇಂದೂಧರ ಸ್ವಾಮಿ, ಸಿ.ಎನ್.ಹುಲಿಗೇಶ್, ರಿಯಾಜ್ ಅಹಮದ್, ಎಕ್ಕೆಗೊಂದಿ ರುದ್ರೇಗೌಡ, ಡಿ.ಟಿ.ತಿಪ್ಪಣ್ಣರಾಜು, ಕೃಷ್ಣಮೂರ್ತಿ ಹಾಗೂ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.